ಕಲಬುರಗಿ: ‘ಕೋಪದ ಕೈಗೆ ಬುದ್ಧಿಕೊಟ್ಟು ಕೊಯ್ದುಕೊಂಡ ಮೂಗು ವಾಪಸ್ ಬಾರದು. ಆದರೆ, ಜೀವಿಸಲು ಉಸಿರಾಟವಾದರೂ ಮಾಡಬಹುದು. ಆ ಪ್ರಯತ್ನವನ್ನು ನಾವಿಲ್ಲಿ ಮಾಡಿಸುತ್ತಿದ್ದೇವೆ...’
ಹೀಗಂತ ಹೇಳಿದ್ದು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್.
ಹೌದು, ಅಚಾತುರ್ಯದಿಂದಲೋ, ಅವಸರದಿಂದಲೋ, ಉದ್ದೇಶಪೂರ್ವಕವಾಗಿಯೋ ಅಪರಾಧ ಕೃತ್ಯ ಎಸಗಿದವರು ಕಾರಾಗೃಹ ಸೇರಿ ಪರಿತಪಿಸಿದ್ದಾರೆ. ಕಾನೂನಿನಡಿ ಶಿಕ್ಷೆಗೂ ಒಳಪಟ್ಟಿದ್ದಾರೆ. ಅದಕ್ಕಿಂತ ಮಿಗಿಲಾಗಿ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪವೂ ಪಟ್ಟಿದ್ದಾರೆ. ಹೀಗಾಗಿ ಅವರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ 586 ಕೈದಿಗಳಿದ್ದು, ಅವರಲ್ಲಿ 303 ಸಜಾಬಂಧಿಗಳಿದ್ದರೆ, 277 ವಿಚಾರಣಾಧೀನ ಕೈದಿಗಳಿದ್ದಾರೆ. ಇವರಲ್ಲಿ 18 ಮಹಿಳೆಯರೂ ಸೇರಿದ್ದಾರೆ. ಇವರಿಗೆಲ್ಲಾ ಅಡುಗೆ ಕೆಲಸ, ಮರದ ಉಪಕರಣಗಳು, ಲೋಹದ ಕೆಲಸ, ವ್ಹೀಲ್‌ಚೇರ್ ದುರಸ್ತಿ, ನೇಯ್ಗೆ, ಬೇಕರಿ ಕೆಲಸ, ಸಾಬೂನು ತಯಾರಿಕೆ, ಗಾರ್ಡನಿಂಗ್ ಸೇರಿದಂತೆ ವಿವಿಧ ಕೌಶಲಗಳನ್ನು ಕಲಿಸಲಾಗುತ್ತಿದೆ. ಸಣ್ಣ ಕೈಗಾರಿಕಾ ಚಟುವಟಿಕೆಗಳು ಕಾರಾಗೃಹದಲ್ಲಿ ನಡೆಯುತ್ತಿವೆ.
‘ಕೈದಿಗಳು ತಯಾರಿಸಿದ ಉತ್ಪನ್ನಗಳನ್ನು ಮೇಳಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೂ ಇಡಲಾಗುತ್ತದೆ. ಅಲ್ಲದೇ ಜಿಲ್ಲಾ ನ್ಯಾಯಾಲಯದ ಎದುರು ಜಾಗ ಕೇಳಿದ್ದು, ಶೀಘ್ರ ಅಲ್ಲೊಂದು ಬೇಕರಿಯೂ ಆರಂಭವಾಗಲಿದೆ’ ಎನ್ನುತ್ತಾರೆ ಮುಖ್ಯಅಧೀಕ್ಷಕರು.
ಹೊಸವರ್ಷ, ಕ್ರಿಸ್‌ಮಸ್ ಸಂದರ್ಭದಲ್ಲಿ ಹೊರಗಿನವರು ಆರ್ಡರ್ ಕೊಟ್ಟರೂ ಕೇಕ್ ಪೂರೈಸುತ್ತಾರೆ. ಕೇಂದ್ರ ಕಾರಾಗೃಹದ ಕೈದಿಗಳು ತಯಾರಿಸಿದ ಬಟ್ಟೆ, ಬೆಡ್‌ಶೀಟ್, ಜಮಖಾನೆ, ಇನ್ನಿತರ ಉತ್ಪನ್ನಗಳನ್ನು ಜಿಲ್ಲಾಕಾರಾಗೃಹ, ಉಪಕಾರಾಗೃಹಗಳಿಗೂ ಪೂರೈಸಲಾಗುತ್ತದೆ.
‘ಇದೆಲ್ಲದರ ಜತೆಗೆ ಕೈದಿಗಳ ಮನಪರಿವರ್ತನೆಗೆ ಧ್ಯಾನ, ಪ್ರಾರ್ಥನೆ, ಅಧ್ಯಾತ್ಮ ಚಟುವಟಿಕೆಗಳು ನಿರಂತರ ನಡೆಯುತ್ತವೆ. ಕೈದಿಗಳ ಬದುಕಿನಲ್ಲಿ ಹೊಸಬೆಳಕು ಮೂಡಿಸಲು ಸಂಘ–ಸಂಸ್ಥೆಗಳೂ ನಮ್ಮೊಂದಿಗೆ ಕೈಜೋಡಿಸಿವೆ. ಇದರ ಪರಿಣಾಮ ಈ ಹಿಂದೆ ಸಾವಿರಕ್ಕೂ ಅಧಿಕ ಇರುತ್ತಿದ್ದ ಕೈದಿಗಳ ಸಂಖ್ಯೆ ಇದೀಗ ಅರ್ಧಕ್ಕರ್ಧ ಇಳಿದಿದೆ’ ಎಂದು ಕಾರಾಗೃಹ ಶಿಕ್ಷಕ ನಾಗರಾಜ ಮೂಲಗೆ ಹರ್ಷ ವ್ಯಕ್ತಪಡಿಸುತ್ತಾರೆ.
ಕೈದಿಗಳ ಪರಿವರ್ತನೆಯೇ ಮುಖ್ಯ ಉದ್ದೇಶ ಜೈಲಿಗೆ ಹೋಗಿ ಬಂದಿದ್ದಾರೆ ಎಂದರೆ ಅವರನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇಲ್ಲಿ ಶಿಕ್ಷೆಯ ಅವಧಿಯಲ್ಲಿ ಕೈದಿಗಳ ಪರಿವರ್ತನೆಗೆ ನಾವು ಉತ್ತಮ ಸಂಸ್ಕಾರದ ಜತೆಗೆ ಜೀವನೋಪಾಯ ಕೌಶಲಗಳನ್ನೂ ಕಲಿಸುತ್ತಿದ್ದೇವೆ. ಜೈಲಿನಿಂದ ಬಿಡುಗಡೆ ಆಗಿ ಹೋದವರು ದೊಡ್ಡ ದೊಡ್ಡ ಉದ್ದಿಮೆದಾರರಾಗಿದ್ದಾರೆ. ಅಧ್ಯಾತ್ಮ ಜೀವಿಗಳಾಗಿದ್ದಾರೆ. ತಮ್ಮ ಕುಟುಂಬಗಳೊಂದಿಗೆ ಸಂತೋಷದಿಂದ ಬದುಕುತ್ತಿದ್ದಾರೆ. ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂಬುದೇ ಸಂತಸದ ವಿಷಯವಾಗಿದೆ.– ಡಾ.ಅನಿತಾ ಆರ್., ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ
ಕೃಷ್ಣ ಜನ್ಮಾಷ್ಟಮಿಗೆ ಮಾತ್ರ ರಜೆ
ಕೃಷ್ಣ ಕೂಡ ಕಾರಾಗೃಹದಲ್ಲಿಯೇ ಜನಿಸಿದ್ದರಿಂದ ಕಾರಾಗೃಹಗಳಿಗೆ ಅಂದು ಮಾತ್ರ ರಜೆ. ಮೇಲಿನ ಎಲ್ಲ ಚಟುವಟಿಕೆಗಳಿಗೆ ಬಿಡುವು. ಮಹಿಳಾ ಕೈದಿಗಳ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಾಯಿಯೊಂದಿಗೆ ಇರಲು ಅವಕಾಶ ಇರುವುದರಿಂದ ಆ ಮಕ್ಕಳನ್ನೇ ಕೃಷ್ಣ–ರಾಧೆಯರಂತೆ ಸಿಂಗರಿಸಿ ಕೈದಿಗಳು ಕಣ್ತುಂಬಿಕೊಳ್ಳುತ್ತಾರೆ. ಒಂದು ವೇಳೆ ಆ ಮಗು 6 ವರ್ಷ ಪೂರ್ಣಗೊಳಿಸಿದರೂ ತಾಯಿಯ ಶಿಕ್ಷಾ ಅವಧಿ ಮುಗಿಯದಿದ್ದರೆ ಮಕ್ಕಳನ್ನು ಬಾಲಮಂದಿರಗಳಿಗೆ ಕಳುಹಿಸಿಕೊಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.