ಎನ್.ರವಿಕುಮಾರ್
ಕಲಬುರಗಿ: ರಾಜ್ಯದ ಪಿಯು ಫಲಿತಾಂಶ ಹೊರಬಿದ್ದಿದ್ದು, ಕಳಪೆ ಫಲಿತಾಂಶದಿಂದಾಗಿ ಕಲಬುರಗಿ ಜಿಲ್ಲೆಯು ಕೊನೆಯ ಎರಡನೇ ಸಾಲಿನಲ್ಲಿ ಬಂದು ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇರೆಯವರಿಗೆ ಜ್ಞಾನಬೋಧನೆ ಮಾಡುವುದನ್ನು ಬಿಟ್ಟು ಫಲಿತಾಂಶದತ್ತ ಗಮನಹರಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಕುಟುಕಿದ್ದಾರೆ.
‘ವಿದ್ಯಾರ್ಥಿಗಳ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಪ್ರಿಯಾಂಕ್ ಅವರು ಗಮನ ಕೊಡಲಿ. ರಾಜ್ಯದ ಎಲ್ಲ ವಿಷಯಗಳಲ್ಲಿಯೂ ಮೂಗು ತೂರಿಸಿ, ನಾನೇ ಜ್ಞಾನಿ ಎಂದು ಬೀಗುತ್ತಾರೆ. ತಮ್ಮ ಜ್ಞಾನ ಬೋಧನೆ ಮಾಡುವುದನ್ನು ಬಿಟ್ಟು ಜಿಲ್ಲೆಯ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ನಿಗಾ ಇರಲಿ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶವು ಅತ್ಯಂತ ಹೀನಾಯ ಪರಿಸ್ಥಿತಿಗೆ ತಲುಪಿದೆ. ಜಿಲ್ಲೆಯ ಶೈಕ್ಷಣಿಕ ರಂಗದ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಭಾಗದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಂಡು, ವಿಶ್ವಾಸಾರ್ಹ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಉಸ್ತುವಾರಿ ಸಚಿವರು ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವ ಸಂಪನ್ಮೂಲ ಸೇರಿ ಎಲ್ಲ ವಿಷಯಗಳ ನೇರ ಹೊಣೆಯಾಗಿರುತ್ತಾರೆ. ಪಿಯು ಫಲಿತಾಂಶ ಕಳಪೆಯನ್ನು ಅವರೇ ಹೊರಬೇಕು. ರಾಜ್ಯದ ಎಲ್ಲ ವಿಷಯಗಳ ಬಗ್ಗೆ ಮೂಗು ತೂರಿಸುವ ಬದಲು ತಮ್ಮ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳತ್ತ ಗಮನಹರಿಸಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.