ಕಲಬುರಗಿಯ ಬಿದ್ದಾಪುರ ಕಾಲೊನಿ ಜಲಾವೃತಗೊಂಡಿರುವುದು.
ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗುರುವಾರವೂ ವರುಣನ ಅಬ್ಬರ ಮುಂದುವರಿದಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತು.
ಕಲಬುರಗಿಯಲ್ಲಿ ಎರಡನೇ ದಿನವೂ ನಸುಕಿನ 4 ಗಂಟೆಯಿಂದಲೇ ಧಾರಾಕಾರ ಮಳೆ ಸುರಿಯಿತು. ‘ಬಿಸಿಲ ನಗರಿ’ ಮಲೆನಾಡಿನಂತೆ ಭಾಸವಾಯಿತು.
ಕಲಬುರಗಿಯ ಬಿದ್ದಾಪುರ ಕಾಲೊನಿಯ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ತತ್ತರಿಸಿದರು. ಪಾತ್ರೆ–ಪಗಡೆ, ದವಸ–ಧಾನ್ಯಗಳ ರಕ್ಷಣೆಗೆ ಹರಸಾಹಸಪಟ್ಟರು.
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಚಿತ್ತಾಪುರ ತಾಲ್ಲೂಕಿನ ಯಾಗಾಪುರದಲ್ಲಿ 15.5 ಸೆಂ.ಮೀ ಮಳೆ ದಾಖಲಾಗಿದೆ.
ಆಳಂದ ತಾಲ್ಲೂಕಿನ ಖಾನಾಪುರದಲ್ಲಿ ಮಳೆಯಿಂದ ಎರಡು ಜಾನುವಾರು ಮೃತಪಟ್ಟಿವೆ. 3 ಆಕಳು ಹಳ್ಳದಲ್ಲಿ ಕೊಚ್ಚಿಹೋಗಿವೆ. ಶಕಾಪುರದಲ್ಲಿ ಕೋಳಿ ಸಾಕಾಣಿಕೆ ಶೆಡ್‌ನಲ್ಲಿದ್ದ 2,000 ಕೋಳಿಗಳು ಅಮರ್ಜಾ ಹಳ್ಳದಲ್ಲಿ ಕೊಚ್ಚಿಹೋಗಿವೆ.
ಚಿಂಚೋಳಿ, ಅಫಜಲಪುರ ತಾಲ್ಲೂಕಿನಲ್ಲೂ ಉತ್ತಮವಾಗಿ ಮಳೆಯಾಗಿದೆ. ಅಫಜಲಪುರ ತಾಲ್ಲೂಕಿನ ಮಣ್ಣೂರ–ಕರಜಗಿ ರಸ್ತೆ ಕಿರುಹಳ್ಳದ ರಭಸಕ್ಕೆ ಕೊಚ್ಚಿಹೋಗಿದೆ. ಚಿತ್ತಾಪುರ ತಾಲ್ಲೂಕಿನ ಬಳವಡಗಿಯಲ್ಲಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಯಾದಗಿರಿ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದ ತನಕ ಬಿರುಸಿನ ಮಳೆಯಾಗಿದೆ. ಬಾಚವಾರ ಗ್ರಾಮದ ಸೇತುವೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಸವಾರನೊಬ್ಬ ಸೇತುವೆ ದಾಟುವಾಗ ಬೈಕ್ ಕೊಚ್ಚಿ ಹೋಗುತ್ತಿತ್ತು. ತಕ್ಷಣವೇ ಸ್ಥಳೀಯರು ಬೈಕ್ ಹಿಡಿದು ಆತನನ್ನು ರಕ್ಷಿಸಿ ಹಳ್ಳ ದಾಟಿಸಿದರು.
ಬೀದರ್ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗುರುವಾರವೂ ಮಳೆಯಾಗಿದೆ. ಬೆಳಿಗ್ಗೆ ಒಂದು ಗಂಟೆಗೂ ಹೆಚ್ಚು ಸಮಯ ಜೋರು ಮಳೆ ಸುರಿಯಿತು. ದಿನವಿಡೀ ಜಿಟಿಜಿಟಿ ಮಳೆಯಿತ್ತು.
ರಾಯಚೂರು ಜಿಲ್ಲೆಯ ವಿವಿಧೆಡೆ ಎರಡೂವರೆ ತಾಸು ಮಳೆ ಬಿದ್ದಿದೆ. ಹಟ್ಟಿ ಪಟ್ಟಣದಲ್ಲಿ 7.8 ಸೆಂ.ಮೀ ಮಳೆ ದಾಖಲಾಗಿದೆ. ಮಳೆಯಿಂದಾಗಿ ರಾಯಚೂರು ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ.
ಮಳೆ: ಡೋಣಿ ನದಿಯಲ್ಲಿ ಪ್ರವಾಹ
ಹುಬ್ಬಳ್ಳಿ: ವಿಜಯಪುರ, ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆ ತನಕ ಉತ್ತಮ ಮಳೆಯಾಗಿದೆ. ವಿಜಯಪುರ ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ತಾಳಿಕೋಟೆ ಪಟ್ಟಣದಿಂದ ವಿಜಯಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯ ಸೇತುವೆ ಜಲಾವೃತವಾಗಿದೆ, ನದಿ ತೀರದ ಜಮೀನುಗಳು ಜಲಾವೃತವಾಗಿವೆ.
ಮೂರು ಮನೆಗಳಿಗೆ ಹಾನಿ:
ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ಕಂಪ್ಲಿ, ಕುರುಗೋಡು, ಸಂಡೂರು, ಕುರೇಕುಪ್ಪ, ಸಿರುಗುಪ್ಪದಲ್ಲಿ ಉತ್ತಮ ಮಳೆಯಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ 2, ಬಳ್ಳಾರಿ ಮತ್ತು ಕಂಪ್ಲಿ ತಾಲ್ಲೂಕಿನಲ್ಲಿ ತಲಾ ಒಂದೊಂದು ಮನೆ ಹಾನಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.