ADVERTISEMENT

ಕಲಬುರಗಿ: ಶಾಲಾ ಸಮವಸ್ತ್ರ ಈ ವರ್ಷ ವಿಳಂಬ?

ಶಾಲಾ ಪ್ರಾರಂಭೋತ್ಸವಕ್ಕೆ ನಾಲ್ಕು ದಿನ ಮಾತ್ರ ಬಾಕಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 5:14 IST
Last Updated 26 ಮೇ 2025, 5:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: 2025–26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಆರಂಭಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದ್ದು, ಈ ವರ್ಷ ಶಾಲಾ ಪ್ರಾರಂಭೋತ್ಸವದ ದಿನ (ಮೇ 29) ಮಕ್ಕಳಿಗೆ ಉಚಿತ ಸಮವಸ್ತ್ರ ಸಿಗುವುದು ಅನುಮಾನ ಇದೆ.

ಶಿಕ್ಷಣ ಇಲಾಖೆಯಿಂದ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಮಕ್ಕಳಿಗೆ ಶಾಲಾ ಆರಂಭದಲ್ಲೇ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ವಿತರಿಸಬೇಕಿದೆ. ಆದರೆ, ಪೂರೈಕೆಯ ವಿಳಂಬ ಕಾರಣಕ್ಕೆ ಜಿಲ್ಲೆಯ ಎಲ್ಲ ಶಾಲೆಗಳ ಮಕ್ಕಳಿಗೆ ಮೊದಲ ದಿನ ಸಮವಸ್ತ್ರ ವಿತರಣೆ ಕಷ್ಟಸಾಧ್ಯ.

ಈ ಬಾರಿ ರಾಜಸ್ಥಾನ ರಾಜ್ಯದ ಭಿಲ್ವಾರ ಜಿಲ್ಲೆಯ ‘ಮೆ.ಸಂಗಂ ಇಂಡಿಯಾ ಲಿಮಿಟೆಡ್‌’ ಸಂಸ್ಥೆಯಿಂದ ಕಲಬುರಗಿ ಜಿಲ್ಲೆಗೆ ಸಮವಸ್ತ್ರ ಪೂರೈಕೆ ಮಾಡಲಾಗುತ್ತಿದೆ. ಕಳೆದ ಸಾಲಿನ ಜಿಲ್ಲೆಯ ಮಕ್ಕಳ ಎಸ್‌ಎಟಿಎಸ್‌ ದಾಖಲಾತಿ ಅನ್ವಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ಸಮವಸ್ತ್ರ ಸರಬರಾಜು ಆಗಬೇಕಿದೆ.

ADVERTISEMENT

‘ಇನ್ನೆರಡು ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸಮವಸ್ತ್ರ ಸರಬರಾಜು ಮಾಡಲಾಗುವುದು ಮತ್ತು ಆರಂಭದ ದಿನವೇ ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಸಮವಸ್ತ್ರ ಕೂಡ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಸಮವಸ್ತ್ರ ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ತಾಲ್ಲೂಕು ಹಂತದಲ್ಲಿಯೇ ಬಂದಿಲ್ಲ. ಹೀಗಿದ್ದರೆ ಶಾಲೆಗಳಿಗೆ ಸರಿಯಾದ ಸಮಯಕ್ಕೆ ವಿತರಣೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಉದ್ಭವಿಸದೆ ಇರದು.

ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದು, 14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ದಾಖಲಾಗಲು ಆಕರ್ಷಿಸುವುದು, ಮೊದಲ ದಿನದಿಂದಲೇ ಪೂರ್ಣ ಹಾಜರಾತಿ, ಮಕ್ಕಳಲ್ಲಿ ಏಕತೆ ಮತ್ತು ಶಿಸ್ತು ರೂಪಿಸುವ ಉದ್ದೇಶದಿಂದ ಸಮವಸ್ತ್ರ ವಿತರಿಸಲಾಗುತ್ತದೆ. ಇಂತಹ ಒಳ್ಳೆಯ ಯೋಜನೆ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಭಾವ ತಾಳಬಾರದು ಎಂಬುದು ಶಿಕ್ಷಣಪ್ರೇಮಿಗಳ ಒತ್ತಾಸೆ.

‘ಸಮವಸ್ತ್ರ ಪೂರೈಕೆ ಸಂಬಂಧ ಸರ್ಕಾರದ ಹಂತದಲ್ಲಿಯೇ ಟೆಂಡರ್‌ ನಡೆಯುತ್ತದೆ. ಈ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಕಳೆದ ಸಾಲಿನ ಎಸ್‌ಎಟಿಎಸ್‌ ದಾಖಲಾತಿ ಅನ್ವಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಮ್ಮ ಜಿಲ್ಲೆಗೆ ಸಮವಸ್ತ್ರಗಳು ಬರುತ್ತಿವೆ. 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ಮೊದಲ ದಿನವೇ ವಿತರಿಸುತ್ತೇವೆ. ಈಗಾಗಲೇ ಆಳಂದ ಮತ್ತು ಅಫಜಲಪುರ ತಾಲ್ಲೂಕುಗಳಿಗೆ ಸರಬರಾಜು ಆಗಿದೆ’ ಎಂಬುದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಅವರ ಮಾಹಿತಿ.

ಆಳಂದ ವ್ಯಾಪ್ತಿಯ 301 ಶಾಲೆಗಳ 58270 ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಬಂದಿದ್ದು ಶಾಲೆಗಳಿಗೆ ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುವುದು
ರಂಗಸ್ವಾಮಿ ಶೆಟ್ಟಿ ಬಿಇಒ ಆಳಂದ
ಜಿಲ್ಲೆಯ ಆಳಂದ ಬಿಇಒ ಕಚೇರಿಗೆ ಮಾತ್ರ ಒಂದು ಲಾರಿ ಮೂಲಕ ಸಮವಸ್ತ್ರ ಪೂರೈಕೆ ಆಗಿದೆ. ಉಳಿದ ತಾಲ್ಲೂಕುಗಳಿಗೂ ಶೀಘ್ರದಲ್ಲಿ ಪೂರೈಕೆ ಆಗಲಿದೆ
ಗುರುದೇವಿ ಚರಂತಿಮಠ ಸಮವಸ್ತ್ರ ವಿತರಣೆಯ ಜಿಲ್ಲಾ ನೋಡಲ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.