ADVERTISEMENT

ಕಲಬುರಗಿ: ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಹರಸಾಹಸ

ಮಹಾನಗರ ಪಾಲಿಕೆಯಿಂದ ಎರಡು ತಿಂಗಳಲ್ಲಿ 1,050 ನಾಯಿಗಳಿಗೆ ಶಸ್ತ್ರಚಿಕಿತ್ಸೆ, ರೇಬಿಸ್‌ ಲಸಿಕೆ

ಕಿರಣ ನಾಯ್ಕನೂರ
Published 11 ಫೆಬ್ರುವರಿ 2026, 6:29 IST
Last Updated 11 ಫೆಬ್ರುವರಿ 2026, 6:29 IST
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯ ರಹಮತ್ ನಗರದ ಅಡ್ಡರಸ್ತೆಯಲ್ಲಿ ಮಲಗಿರುವ ಬೀದಿನಾಯಿಗಳು
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯ ರಹಮತ್ ನಗರದ ಅಡ್ಡರಸ್ತೆಯಲ್ಲಿ ಮಲಗಿರುವ ಬೀದಿನಾಯಿಗಳು   

ಕಲಬುರಗಿ: ‘ನಮ್ಮ ಏರಿಯಾದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಸರ್’, ‘ಪೇಪರ್‌ನ್ಯಾಗ ನಮ್ಮ ನಂಬರ್ ಹಾಕಬ್ಯಾಡ್ರಿ ಸರ್; ಈಗ ಬರ್ತಿರೋ ಕಾಲ್‌ಗಳನ್ನೇ ಅಟೆಂಡ್‌ ಮಾಡಾಕ್ ಆಗ್ತಿಲ್ಲ’...

ವರದಿಗಾಗಿ ‘ಪ್ರಜಾವಾಣಿ’ ಪ್ರತಿನಿಧಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಕಚೇರಿಗೆ ಹೋದಾಗ ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ತೋಡಿಕೊಂಡ ಅಳಲು ಮತ್ತು ಬೀದಿನಾಯಿ ಹಿಡಿದು ಶಸ್ತ್ರಚಿಕಿತ್ಸೆ ಮಾಡಿ ಲಸಿಕೆ ನೀಡುವ ಟೆಂಡರ್‌ ಹಿಡಿದ ವ್ಯಕ್ತಿಗೆ ಕರೆ ಮಾಡಿದಾಗ ಅವರು ಹೇಳಿದ ಮೇಲಿನ ಮಾತುಗಳಿವು. ನಗರದಲ್ಲಿ ಬೀದಿನಾಯಿಗಳ ಹಾವಳಿ ಯಾವ ಮಟ್ಟಿಗೆ ಇದೆ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ.
 
ಬೀದಿನಾಯಿಗಳ ಹಾವಳಿ ತಡೆಗೆ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನವನ್ನು ಮಹಾನಗರ ಪಾಲಿಕೆ ಗಂಭೀರವಾಗಿ ಪರಿಗಣಿಸಿದ್ದು ನಾಯಿಗಳ ಕಾಟ ತಡೆಯಲು ಸಾಕಷ್ಟು ಶ್ರಮಿಸುತ್ತಿದೆ, ಆದರೆ ಈ ಪ್ರಯತ್ನ ಸಾಕಾಗುತ್ತಿಲ್ಲ ಎನ್ನುವ ಮಾತುಗಳು ಸಾವರ್ಜನಿಕ ವಲಯದಲ್ಲಿ ಕೇಳಿಬರುತ್ತಿದೆ.

‘ಪಶು ಸಂಗೋಪನೆ ಇಲಾಖೆ ಮಾಹಿತಿ ಪ್ರಕಾರ ನಗರದಲ್ಲಿ 7 ಸಾವಿರದಿಂದ 8 ಸಾವಿರ ಬೀದಿನಾಯಿಗಳು ಇರುವ ಅಂದಾಜಿದೆ’ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ಭಾಲ್ಕೆ ಹೇಳುತ್ತಾರೆ.  

ADVERTISEMENT

‘ಪಾಲಿಕೆಯ ಸಹಾಯವಾಣಿ 08472241364ಗೆ ಕರೆ ಮಾಡಿದರೆ ಬೀದಿನಾಯಿಗಳು ಇದ್ದಲ್ಲಿಗೇ ಬಂದು ಹಿಡಿದುಕೊಂಡು ಹೋಗುತ್ತಾರೆ. 2025ರ ನವೆಂಬರ್‌ನಿಂದ ಸಾಮಾಜಿಕ ಜಾಗೃತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘ ಎನ್ನುವ ಎನ್‌ಜಿಒಗೆ ಟೆಂಡರ್‌ ನೀಡಲಾಗಿದೆ’ ಎಂದು ಭಾಲ್ಕೆ ಹೇಳಿದರು.

ನಗರ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳನ್ನು ಹಿಡಿದುಕೊಂಡು ಹೋಗಿ ಪಾಲಿಕೆಯಿಂದ ನಿರ್ಮಿಸಿರುವ ಪ್ರಾಣಿ ಜನನ ನಿಯಂತ್ರಣ ಕೇಂದ್ರದಲ್ಲಿ ಅವುಗಳಿಗೆ ಸಂತಾಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ, ರೇಬಿಸ್‌ ಲಸಿಕೆ ನೀಡಲಾಗುತ್ತದೆ. ಬಳಿಕ ಮೂರು ದಿನ ಅದೇ ಕೇಂದ್ರದಲ್ಲಿ ಆರೈಕೆ ಮಾಡಿ ಹಿಡುಕೊಂಡು ಹೋದ ಜಾಗದಲ್ಲೇ ನಾಯಿಯನ್ನು ತಂದು ಬಿಡಲಾಗುತ್ತದೆ. ಇದಕ್ಕಾಗಿ ಒಂದು ನಾಯಿಗೆ ಪಾಲಿಕೆ ₹1,600.50 ಪಾವತಿಸುತ್ತದೆ. ಎರಡು ತಿಂಗಳಲ್ಲಿ ಬೀದಿಬದಿಯ 1,050 ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ರೇಬಿಸ್‌ ಚುಚ್ಚುಮದ್ದು ನೀಡಲಾಗಿದೆ.

ನಾಯಿಗಳ ಗುರುತಿಗಾಗಿ ಕಿವಿಯನ್ನು ಸ್ವಲ್ಪ ಕತ್ತರಿಸಲಾಗುತ್ತದೆ.

ಸದ್ಯ ಉದನೂರಿನಲ್ಲಿ ಸುಮಾರು 2 ಎಕರೆ ವ್ಯಾಪ್ತಿಯಲ್ಲಿ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕೇಂದ್ರ ಇದೆ. ಆದರೆ ಇದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಖಣದಾಳ ಬಳಿಯಲ್ಲಿರುವ ಮಹಾನಗರ ಪಾಲಿಕೆಯ ಜಾಗೆಯಲ್ಲಿ ಎಬಿಸಿ ಸೆಂಟರ್‌ ಮಾಡಲು ಯೋಜನೆ ರೂಪಿಸಿದರೂ ಅಲ್ಲಿನ ಜನರಿಂದಲೂ ವಿರೋಧ ಬರುತ್ತಿದೆ. ಕಂದಾಯ ಇಲಾಖೆಗೆ ಜಾಗ ಕೇಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಖಣದಾಳದಲ್ಲಿ ಎಬಿಸಿ ಕೇಂದ್ರ ನಿರ್ಮಿಸಲು ಕೆಕೆಆರ್‌ಡಿಬಿಯಿಂದ ₹5 ಕೋಟಿ ಬಿಡುಗಡೆಯಾಗಿದೆ, ಟೆಂಡರ್‌ ಸಹ ಆಗಿದೆ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

ಪಾಲಿಕೆಯ ಸಹಾವಾಣಿಗೆ ಕರೆ ಮಾಡಿದರೆ ನಾಯಿಯನ್ನು ಹಿಡುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಮಾಡಿ ರೇಬಿಸ್ ಲಸಿಕೆ ನೀಡುತ್ತಾರೆ. ಈ ವರ್ಷ 7 ಸಾವಿರ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ಮಾಡುವ ಗುರಿ ಇದೆ
ಅವಿನಾಶ್ ಶಿಂದೆ ಮಹಾನಗರ ಪಾಲಿಕೆ ಆಯುಕ್ತ
ಸ್ಟೇಷನ್‌ ಬಜಾರ್‌ ಪ್ರದೇಶದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಸಣ್ಣ ಮಕ್ಕಳು ಹೊರಗೆ ಹೋದರೆ ಸಾಕು ನಾಯಿಗಳು ದಾಳಿ ಮಾಡುತ್ತವೆ
ರಯಿಸ್‌ ಅಹ್ಮದ್ ಸ್ಟೇಷನ್ ಬಜಾರ್‌ ನಿವಾಸಿ
Quote - ನಮ್ಮ ಏರಿಯಾದಲ್ಲಿ ಚಿಕ್ಕ ಮಗುವಿಗೆ ನಾಯಿ ಕಚ್ಚಿದೆ. 10–12 ನಾಯಿಗಳಿದ್ದು ಮೊನ್ನೆ ಕೆಲವನ್ನು ಹಿಡಿದುಕೊಂಡು ಹೋಗಿದ್ದಾರೆ
ರಹಮತ್‌ ನಗರದ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.