ಅಫಜಲಪುರ: ಶಿಕ್ಷಕರು ಮನಸ್ಸು ಮಾಡಿದರೆ ಇಡೀ ಶಾಲೆಯ ವಾತಾವರಣವನ್ನು ಬದಲಾವಣೆ ಮಾಡಬಹುದು ಎಂಬುದಕ್ಕೆ ತಾಲೂಕಿನ ಬಂದರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ. ಶಿಕ್ಷಕ ಕರೆಪ್ಪ ಜೇವರ್ಗಿ ಅವರು ಶಾಲೆಯನ್ನೇ ತಮ್ಮ ಮನೆಯಂತೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ನಿತ್ಯ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದಾರೆ.
ಕರೆಪ್ಪ ಜೇವರ್ಗಿ ಅವರು 2020ರಲ್ಲಿ ಶಿಕ್ಷಕರಾಗಿ ಬಂದರವಾಡ ಶಾಲೆಗೆ ನೇಮಕವಾಗಿದ್ದಾರೆ. 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜ–ವಿಜ್ಞಾನ ವಿಷಯ ಪಾಠ ಮಾಡುತ್ತಾರೆ. ಈ ಶಾಲೆಯಲ್ಲಿ 1ರಿಂದ 7 ನೇ ತರಗತಿವರೆಗೆ ಇದ್ದು, ಒಟ್ಟು 383 ವಿದ್ಯಾರ್ಥಿಗಳಿದ್ದಾರೆ.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರತ್ಯೇಕವಾದ ವರ್ಗ ಮಾಡಿ ಅವರಿಗೆ ಹೆಚ್ಚಿನ ಮುತವರ್ಜಿಯಿಂದ ಭೋಧಿಸುತ್ತಾರೆ. ನಿತ್ಯ 30 ವಿದ್ಯಾರ್ಥಿಗಳಿಗೆ ನವೋದಯ ಶಾಲೆ ಆಯ್ಕೆಗಾಗಿ ನಡೆಯುವ ಪ್ರವೇಶ ಪರೀಕ್ಷೆ ತೇರ್ಗಡೆ ಹೊಂದಲು ತರಬೇತಿ ನೀಡುತ್ತಿದ್ದಾರೆ.
ಪ್ರತಿ ಶನಿವಾರಕ್ಕೊಮ್ಮೆ ಎಲ್ಲಾ ವಿಷಯಗಳ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡುತ್ತಿದ್ದಾರೆ. ಪಠ್ಯದೊಂದಿಗೆ ಶಿಸ್ತು ಮತ್ತು ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ನೀಡಲು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಶಿಕ್ಷಕ ಕರಿಯಪ್ಪ ಅವರು ಮಕ್ಕಳಿಗೆ ಪಾಠದೊಂದಿಗೆ ಶಾಲೆಯ ವಾತಾವರಣ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ. ಹೀಗಾಗಿ ಇವರು ವಿದ್ಯಾರ್ಥಿಗಳ ಹಾಗೂ ಅವರ ಪಾಲಕರ ಮನಸ್ಸು ಗೆದ್ದಿದ್ದಾರೆ ಮತ್ತು ಅವರ ಪ್ರೀತಿಗೆ ಪ್ರಾತರಾಗಿದ್ದಾರೆ.
ಕಲಿಕಾ ಅಸಾಮರ್ಥ್ಯತೆ ಇರುವ ಮಕ್ಕಳು ಕಲಿಕೆಯಲ್ಲಿ ತೀರಾ ಹಿಂದುಳಿಯುವ ಸಾಧ್ಯತೆ ಇದೆ. ಇದಕ್ಕೆ ಮಾನಸಿಕ, ದೈಹಿಕ ಅಥವಾ ಸಾಮಾಜಿಕ ಕಾರಣಗಳೂ ಇರಬಹುದು. ಶಿಕ್ಷಕರಿಗಿಂತ ಹೆಚ್ಚಾಗಿ ಪೋಷಕರಿಗೆ ಮಕ್ಕಳಲ್ಲಿನ ಸಮಸ್ಯೆಗಳು ಗೊತ್ತಿರುತ್ತವೆ. ಮಕ್ಕಳ ಸಾಮರ್ಥ್ಯ ಏನು ಎಂಬುದನ್ನು ಕಂಡುಕೊಳ್ಳಬೇಕು.ಮಗುವಿನ ಹಿಂದಿನ ಸಾಧನೆ ಮತ್ತು ಇಂದಿನ ಸಾಮರ್ಥ್ಯವನ್ನು ಹೋಲಿಕೆ ಮಾಡಿ ನೋಡಿ. ಇದರಿಂದ ಮಗು ಯಾಕೆ ಹಿಂದುಳಿದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪ್ರತ್ಯೇಕ ಮಾಡಿ ಪಾಠ ಮಾಡುವುದರಿಂದ ಅವರು ಇತರ ಮಕ್ಕಳಂತೆ ಮುಂದೆ ಬರಲು ಸಾಧ್ಯವಿದೆ ಎನ್ನುತ್ತಾರೆ ಬಂದರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕರೆಪ್ಪ ಜೇವರ್ಗಿ.
ಶಿಕ್ಷಕ ಕರೆಪ್ಪ ಅವರು ವರ್ಗವಾಗಿ ಬಂದಮೇಲೆ ಶಾಲೆಯ ವಾತಾವರಣವೇ ಬದಲಾಗಿದೆ. ಅವರು ಪಾಠ ಮಾಡು ಜೊತೆಗೆ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ.ಸುರೇಶ್ ತಳವಾರ ಮುಖ್ಯ ಶಿಕ್ಷಕ
ನಮ್ಮ ಮಕ್ಕಳಲ್ಲಿ ಕಲಿಕಾ ವಾತಾವರಣ ಬದಲಾವಣೆಯಾಗಿದೆ. ದಿನಾಲೂ ಶಾಲೆಗೆ ಹೋಗುತ್ತಾರೆ. ಶಿಕ್ಷಕರು ಹೇಳಿರುವ ಮನೆ ಪಾಠವನ್ನು ತಪ್ಪದೇ ಮಾಡುತ್ತಾರೆ.ಮಂಜುನಾಥ ಮತ್ತು ದತ್ತಪ್ಪ 7ನೇ ತರಗತಿ ಮಕ್ಕಳ ಪೋಷಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.