ADVERTISEMENT

ಕಲಬುರಗಿ |ನಿಲ್ಲದ ಸರಣಿ ಕಳ್ಳತನ; ಸಾರ್ವಜನಿಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:32 IST
Last Updated 24 ಮೇ 2023, 7:32 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಕಲಬುರಗಿ: ನಗರದಲ್ಲಿ ಸರಣಿ ಮನೆ ಹಾಗೂ ದ್ವಿಚಕ್ರ ವಾಹನಗಳ ಕಳವು ಮುಂದುವರೆದಿದ್ದು, ಸೋಮವಾರ ರಾತ್ರಿ ಸರಣಿ ಮನೆ ಕಳ್ಳತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಗರದ ಚಿಮ್ಮಲಗಿ ಲೇಔಟ್‌ನಲ್ಲಿ ರಾತ್ರಿ ಮನೆ ಕಳ್ಳತನ ನಡೆದಿದೆ. ರಾತ್ರಿ 1.30ರ ಸುಮಾರಿಗೆ ಬಂದ ಕಳ್ಳರು, ಮನೆಯ ಬಾಗಿಲು ಮುರಿದು ಮೂರು ಮೊಬೈಲ್ ಕದ್ದಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳ್ಳತನಕ್ಕಾಗಿ ಬಂದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮೂವರು ಕಳ್ಳರು ಕೈಯಲ್ಲಿ ಮಾರಕಾಸ್ತ್ರ ಹಿಡಿದದ್ದು  ಕಂಡು ಬಂದಿದೆ. ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯ ಸಿಬ್ಬಂದಿ ಪರಿಶೀಲನೆಗಾಗಿ ಬಂದಿದ್ದರು ಎಂದು ನಿವಾಸಿಗಳು ತಿಳಿಸಿದ್ದಾರೆ.

ADVERTISEMENT

ಬೈಕ್ ಕಳವು: ಕಲಬುರಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮದ ನಿವಾಸಿ ಉಮಾಕಾಂತ ಲೇಖಣ್ಣ ಅವರಿಗೆ ಸೇರಿದ್ದ ಬೈಕ್ ಕಳುವಾಗಿದೆ.

ಮೇ 22ರ ಬೆಳಿಗ್ಗೆ 11.30ರ ಸುಮಾರಿಗೆ ನಗರದ ಸಾರ್ವಜನಿಕ ಉದ್ಯಾನ ಸಮೀಪದ ವೀರಶೈವ ಕಲ್ಯಾಣ ಮಂಟಪದ ಮುಂಭಾಗ ನಿಲ್ಲಿಸಿದ್ದರು. ಕಲ್ಯಾಣ ಮಂಟಪದಲ್ಲಿ ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಬಂದು ನೋಡಿದಾಗ ಬೈಕ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವಾರ ಜಿ.ಆರ್ ನಗರದ ನಿವಾಸಿ ಸತೀಶ ಸಣಮನಿ ಅವರ ಬೈಕ್‌ ಸಹ ಇದೇ ಸ್ಥಳದಿಂದ ಕಳ್ಳರು ಕದ್ದು ಹೊಯ್ದಿದ್ದರು.

ಈ ಪ್ರಕರಣ ಮಾಸುವ ಮುನ್ನ ಮತ್ತೊಂದು ಕಳ್ಳತನದ ಕೃತ್ಯ ನಡೆದಿದೆ. ಪದೇ ಪದೇ ವಾಹನ ಹಾಗೂ
ಮನೆಗಳು ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.