ಕಲಬುರಗಿ: ಇಲ್ಲಿನ ಸರಾಫ್ ಬಜಾರ್‌ನ ಚಿನ್ನಾಭರಣ ತಯಾರಿಕಾ ಮಳಿಗೆ ದರೋಡೆ ಪ್ರಕರಣವನ್ನು ಭೇದಿಸಿದ ಸಿಟಿ ಕಮಿಷನರೇಟ್ ಪೊಲೀಸರು, ಮಳಿಗೆ ಮಾಲೀಕನಿಗೆ ಚಾಕು, ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ 2.865 ಕೆ.ಜಿ. ಚಿನ್ನಾಭರಣ ಕೊಳ್ಳೆ ಹೊಡೆದಿರುವುದು ತನಿಖೆಯಿಂದ ಗೊತ್ತಾಗಿದೆ.
ಮೊಹಮ್ಮದ್ ಸಬ್ಕತುಲ್ಲಾ ಮಲಿಕ್ ಅವರ ಮಳಿಗೆಯಲ್ಲಿ ಜುಲೈ 11ರಂದು ಚಿನ್ನಾಭರಣಗಳ ದರೋಡೆಯಾಗಿತ್ತು. ಐದು ತಂಡಗಳು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಸತತ ಕಾರ್ಯಾಚರಣೆ ನಡೆಸಿ, ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಪಶ್ಚಿಮ ಬಂಗಾಳದಿಂದ ಬಂದು ನಗರದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ಫಾರೂಕ್ ಅಹಮದ್ ಮಲಿಕ್, ಮುಂಬೈನ ರಸ್ತೆ ಬದಿಯಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದು, ಬಟ್ಟೆ ಕಳ್ಳತನದ ಆರೋಪಿ ಅಯೋಧ್ಯಾ ಪ್ರಸಾದ್ ಚವ್ಹಾಣ್ ಮತ್ತು ಟೈಲರ್ ಸೊಹೇಲ್ ಶೇಖ್ ಬಂಧಿತರಾದ ಆರೋಪಿಗಳು. ಇನ್ನುಳಿದ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ‘ಪ್ರಮುಖ ಆರೋಪಿ ಫಾರೂಕ್, ದುಬೈನಲ್ಲಿ 10–15 ವರ್ಷಗಳು ಜ್ಯುವೆಲ್ಲರಿ ಕೆಲಸ ಮಾಡಿದ್ದರು. ಟರ್ಕಿ ಶೈಲಿಯ ಜ್ಯುವೆಲ್ಲರಿ ವಿನ್ಯಾಸದಲ್ಲಿ ಪರಿಣಿತನಾಗಿದ್ದು, ಕಲಬುರಗಿಯಲ್ಲೂ ಈ ಶೈಲಿಗೆ ಉತ್ತಮ ಬೇಡಿಕೆ ಇರುವುದು ಗೊತ್ತಾಗಿತ್ತು. ನಗರದಲ್ಲಿ ಬಂದು ಮಳಿಗೆಯೂ ತೆರೆದಿದ್ದ. ಮೂರ್ನಾಲ್ಕು ತಿಂಗಳ ಹಿಂದೆ ₹ 37 ಲಕ್ಷದಷ್ಟು ನಷ್ಟವನ್ನು ಅನುಭವಿಸಿದ್ದ’ ಎಂದರು.
‘ಮೊಹಮ್ಮದ್ ಸಬ್ಕತುಲ್ಲಾ ಅವರ ಚಿನ್ನಾಭರಣ ತಯಾರಿಕೆ ಮಳಿಗೆಯ ವ್ಯವಹಾರದ ಬಗ್ಗೆ ತಿಳಿದಿತ್ತು. ದುಬೈಗೆ ತೆರಳುವಾಗ ಮುಂಬೈನಲ್ಲಿ ಪರಿಚಯವಾಗಿದ್ದ ಅಯೋಧ್ಯಾ ಪ್ರಸಾದ್ ಅವರನ್ನು ನಗರಕ್ಕೆ ಕರೆಯಿಸಿಕೊಂಡರು. ದರ್ಗಾಕ್ಕೆ ಕರೆದೊಯ್ದು, ದೇವರ ದರ್ಶನ ಮಾಡಿಸಿ ಸಬ್ಕತುಲ್ಲಾ ಮಳಿಗೆಯ ಬಗ್ಗೆ ತಿಳಿಸಿದ. ಪ್ರಸಾದ್ ಅವರ ಪತ್ನಿ ಹೃದಯ ಸಂಬಂಧಿತ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣದ ಅವಶ್ಯ ಇರುವುದರಿಂದ ದರೋಡೆ ಕೃತ್ಯಕ್ಕೆ ಆತನೂ ಒಪ್ಪಿಕೊಂಡ. ಅವರ ಜೊತೆಗೆ ಸೊಹೇಲ್ ಕೂಡ ಸೇರಿಕೊಂಡು, ಒಟ್ಟು ಐವರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ಹೇಳಿದರು.
‘ಆರೋಪಿಗಳು ಸುಮಾರು 25 ದಿನಗಳ ಕಾಲ ಚರ್ಚಿಸಿ ದರೋಡೆಗೆ ಕಾರ್ಯಯೋಜನೆ ರೂಪಿಸಿದ್ದರು. ಕೃತ್ಯ ನಡೆಯುವ ದಿನ (ಜು.11) ಬೆಳಿಗ್ಗೆ 9ರ ಸುಮಾರಿಗೆ ಮಳಿಗೆಗೆ ಬಂದು ಪ್ರಾಥಮಿಕ ಅಣಕು ಯತ್ನ ಮಾಡಿದ್ದರು. ಸಬ್ಕತುಲ್ಲಾ ಮಲಿಕ್ ಅವರು ಒಂಟಿಯಾಗಿ ಕೆಲಸ ಮಾಡುವ ಅವಧಿಯ ಮಧ್ಯಾಹ್ನ 12 ಸುಮಾರಿಗೆ ನಾಲ್ವರು ಬಂದು ಒಳ ನುಗ್ಗಿದ್ದರು. ಚಾಕು, ಆಟಿಕೆ ಪಿಸ್ತೂಲ್ ತೋರಿಸಿ ಹೆದರಿಸಿದ್ದರು. ಕೈಕಾಲುಗಳನ್ನು ಕಟ್ಟಿ ಮಳಿಗೆಯಲ್ಲಿದ್ದ ಚಿನ್ನಭಾರಣಗಳನ್ನು ದೋಚಿ ಪರಾರಿಯಾಗಿದ್ದರು’ ಎಂದು ಮಾಹಿತಿ ನೀಡಿದರು.
‘ಕೇಂದ್ರ ಬಸ್ ನಿಲ್ದಾಣದಿಂದ ಸೋಲಾಪುರಕ್ಕೆ ತೆರಳಿದ್ದರು. ಅಲ್ಲಿಂದ ಮುಂಬೈ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಹೋದರು. ಕೆಲವೆಡೆ ಬಸ್, ರೈಲಿನ ಜನರಲ್ ಬೋಗಿಗಳಲ್ಲಿ ಪ್ರಯಾಣಿಸಿದ್ದರು. ಪೊಲೀಸರ ನಿರಂತರವಾಗಿ ಬೆನ್ನು ಬಿದ್ದಿದ್ದರಿಂದ ದೋಚಿದ್ದ ಚಿನ್ನಾಭರಣವನ್ನು ಮಾರಲು ಸಾಧ್ಯವಾಗಲಿಲ್ಲ. ₹4.80 ಲಕ್ಷ ಮೌಲ್ಯದಷ್ಟು ಚಿನ್ನಾಭರಣವನ್ನು ಮಾತ್ರ ಮಾರಿದ್ದರು. ನಿರಂತರ ಕಾರ್ಯಾಚರಣೆ ನಡೆಸಿ ಒಬ್ಬನನ್ನು ಮುಂಬೈ ಹಾಗೂ ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಪ್ರವೀಣ್ ಎಚ್. ನಾಯಕ್, ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.