
ಕಲಬುರಗಿ: ನಗರದ ಸಿಕಂದರಿ ಮಸೀದಿ ಬಳಿಯ ವಿಠ್ಠಲ ದೇವಸ್ಥಾನ ಸಮೀಪದ ಮನೆಯೊಂದಕ್ಕೆ ನುಗ್ಗಿ ವೃದ್ಧೆಯನ್ನು ಬೆದರಿಸಿ ಅವರ ಬಳಿಯಿದ್ದ 70 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಕೂಡಿ ಹಾಕಿದ್ದ ಬೆಂಗಳೂರಿನ ಕನಕಪುರ ತಾಲ್ಲೂಕಿನ ಮುಳ್ಳಹಳ್ಳಿಯ ಶಿವಕುಮಾರ್ ಕುಪ್ಪಸ್ವಾಮಿ ಎಂಬಾತನನ್ನು ಬ್ರಹ್ಮಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕಳ್ಳತನ, ದರೋಡೆ, ಕೊಲೆ ಪ್ರಕರಣಗಳು ದಾಖಲಾಗಿದ್ದು, ಪ್ರಕರಣವೊಂದರಲ್ಲಿ ಬೆಂಗಳೂರಿನ ಕಾರಾಗೃಹದಲ್ಲಿದ್ದ ಶಿವಕುಮಾರನನ್ನು ಬಾಡಿ ವಾರೆಂಟ್ ಮೇಲೆ ಕರೆತಂದು ವಿಚಾರಣೆ ನಡೆಸಲಾಗಿದೆ. ಆತನಿಂದ ₹ 5 ಲಕ್ಷ ಬೆಲೆಬಾಳುವ 40 ಗ್ರಾಂ ಚಿನ್ನದ ಚೈನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿವಕುಮಾರನ ಪತ್ನಿ ಆಳಂದ ತಾಲ್ಲೂಕಿನವರಾಗಿದ್ದು, ಈತ ಆಗಾಗ ಕಲಬುರಗಿಗೆ ಬರುತ್ತಿದ್ದ. ಆದರೆ, ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಬೆಂಗಳೂರಿನಲ್ಲಿಯೇ ಹಲವು ಕಳ್ಳತನ ಪ್ರಕರಣಗಳನ್ನು ಎಸಗಿದ್ದಾನೆ. ವೃದ್ಧೆ ನೀಡಿದ ಮಾಹಿತಿ ಹಾಗೂ ಸಿಸಿ ಟಿವಿ ಕ್ಯಾಮೆರಾಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.
2025ರ ಮೇ 6ರಂದು ವೃದ್ಧೆ ಗುರುಬಾಯಿ ನಾಗಲೀಕರ್ ಅವರ ಪುತ್ರ ಚಂದ್ರಕುಮಾರ್ ಅವರು ಮಳಖೇಡಕ್ಕೆ ವೈದ್ಯಕೀಯ ವೃತ್ತಿಗಾಗಿ ತೆರಳಿದ್ದರು. ಹೀಗಾಗಿ, ಗುರುಬಾಯಿ ಅವರು ಒಬ್ಬರೇ ಇದ್ದರು. ಬೆಳಿಗ್ಗೆ ಮನೆಗೆ ನುಗ್ಗಿದ ಶಿವಕುಮಾರ್ ವೃದ್ಧೆಯನ್ನು ಬೆದರಿಸಿ 40 ಗ್ರಾಂ ಚಿನ್ನದ ಚೈನ್ ಹಾಗೂ 30 ಗ್ರಾಂ ಚಿನ್ನದ ಬಿಲ್ವಾರವನ್ನು ಕಿತ್ತುಕೊಂಡು ವೃದ್ಧೆಯನ್ನು ಬಚ್ಚಲು ಮನೆಯಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದ. ವೃದ್ಧೆಯು ತಮ್ಮ ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡುವಾಗಲೇ ಕಳ್ಳ ಬಂದಿದ್ದರಿಂದ ಕಿರುಚಿಕೊಂಡಿದ್ದಾರೆ. ಹೀಗಾಗಿ, ಮಗಳು ಧಾವಿಸಿದಾಗ ವೃದ್ಧೆಯನ್ನು ಕೂಡಿ ಹಾಕಿದ್ದು ಗೊತ್ತಾಗಿದೆ. ಈ ಪ್ರಕರಣದ ಬೆನ್ನಟ್ಟಿದ ಬ್ರಹ್ಮಪುರ ಠಾಣೆ ಪೊಲೀಸರು ಆರೋಪಿಯನ್ನು ಕರೆತಂದಿದ್ದಾರೆ. 70 ಗ್ರಾಂ ಪೈಕಿ 30 ಗ್ರಾಂ ಚಿನ್ನವನ್ನು ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ್, ಎಸಿಪಿ ಶರಣಬಸಪ್ಪ ಸುಬೇದಾರ, ಬ್ರಹ್ಮಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ ಹಾಗೂ ಸಿಬ್ಬಂದಿ ಇದ್ದರು. ಕಮಿಷನರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಪ್ರಶಂಸಾ ಪತ್ರ ವಿತರಿಸಿದರು.
ಪೋಷಕರು ತಮ್ಮ ಅಪ್ರಾಪ್ತರ ಕೈಗೆ ಬೈಕ್ ಸ್ಕೂಟರ್ ಕೊಡಬಾರದು. ಅಪ್ರಾಪ್ತರು ವಾಹನ ಓಡಿಸಿದರೆ ಪೋಷಕರ ವಿರುದ್ಧವೇ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ 150 ಪ್ರಕರಣಗಳನ್ನು ದಾಖಲಿಸಲಾಗಿದೆಶರಣಪ್ಪ ಎಸ್.ಡಿ. ಪೊಲೀಸ್ ಕಮಿಷನರ್
ಇ–ಚಲನ್:
₹ 45.95 ಲಕ್ಷ ದಂಡ ಸಂಗ್ರಹ ಕಳೆದ ವರ್ಷದ ಜನವರಿಯಿಂದ ಇ ಚಲನ್ ಮೂಲಕ ದಂಡ ಸಂಗ್ರಹಿಸುವುದಕ್ಕೆ ಪ್ರಾರಂಭ ಮಾಡಲಾಗಿದ್ದು ₹ 1.48 ಕೋಟಿ ದಂಡದ ಚಲನ್‌ಗಳನ್ನು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಮಾಲೀಕರಿಗೆ ಕಳುಹಿಸಲಾಗಿದೆ. ಅದರಲ್ಲಿ ₹ 45.95 ಲಕ್ಷ ದಂಡ ಸಂಗ್ರಹವಾಗಿದೆ ಎಂದು ಕಮಿಷನರ್ ಶರಣಪ್ಪ ಎಸ್.ಡಿ. ಮಾಹಿತಿ ನೀಡಿದರು. ರಾಜ್ಯ ಸರ್ಕಾರ ದಂಡ ಪಾವತಿಸುವವರಿಗೆ ಶೇ 50ರಷ್ಟು ರಿಯಾಯಿತಿ ನೀಡಿದ್ದರಿಂದಲೂ ಹೆಚ್ಚಿನ ಜನರು ಪಾವತಿ ಮಾಡಿದ್ದಾರೆ ಎಂದರು. 2025ರಲ್ಲಿ ಅಪರಾಧ ಪ್ರಕರಣಗಳೂ ಗಣನೀಯವಾಗಿ ಕಡಿಮೆಯಾಗಿವೆ. ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿದ್ದ 1610 ಜನರನ್ನು ಮುಂಜಾಗೃತಾ ಕ್ರಮವಾಗಿ ಬಂಧಿಸಿ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.