ADVERTISEMENT

ಕಲಬುರಗಿ – ಯಾದಗಿರಿ ಡಿಸಿಸಿ ಬ್ಯಾಂಕ್‌ ಚುನಾವಣೆ: ಅವಿರೋಧ ಆಯ್ಕೆ ಬಹುತೇಕ ಖಚಿತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:25 IST
Last Updated 21 ನವೆಂಬರ್ 2025, 6:25 IST
   

ಕಲಬುರಗಿ: ಇಲ್ಲಿನ ಕಲಬುರಗಿ–ಯಾದಗಿರಿ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಮುಹೂರ್ತ ನಿಗದಿಯಾಗಿದ್ದು, ನಿರೀಕ್ಷೆಯಂತೆ ಅಧ್ಯಕ್ಷ ‌ಸ್ಥಾನಕ್ಕೆ ವಿಠಲ ಯಾದವ, ಉಪಾಧ್ಯಕ್ಷ ಸ್ಥಾನಕ್ಕೆ ಶಂಕರ ಭೂಪಾಲ್ ನಾಮಪತ್ರ ಸಲ್ಲಿಸಿದ್ದಾರೆ.

ಉಭಯ ಸ್ಥಾನಗಳಿಗೂ ತಲಾ‌ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವಿರೋಧ ಆಯ್ಕೆ ಬಹುತೇಕ ಖಚಿತಗೊಂಡಿದೆ.

ವಿಠಲ್‌ ಯಾದವ ಯಾದಗಿರಿ‌ ಜಿಲ್ಲೆಯ ಸುರಪುರ ಕ್ಷೇತ್ರದಿಂದ ಗೆದ್ದು ಡಿಸಿಸಿ ಬ್ಯಾಂಕ್ ಪ್ರವೇಶಿಸಿದ್ದಾರೆ. ಶಂಕರ್ ಭೂಪಾಲ್ ಅವರು ಸೇಡಂ‌ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ADVERTISEMENT

ನವೆಂಬರ್‌ 9ರಂದು ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯ ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಮತದಾನ ನಡೆದಿತ್ತು. ಅದರಲ್ಲಿ ಆರು ಕಾಂಗ್ರೆಸ್‌ ಬೆಂಬಲಿತರು ಗೆಲುವಿನ ನಗೆ ಬೀರಿದ್ದರು. ಇನ್ನುಳಿದ ಎರಡು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ ಒಂದು ಸ್ಥಾನದಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದರು.ಚುನಾವಣೆಗೂ ಮುನ್ನವೇ ನಾಲ್ಕು ಕ್ಷೇತ್ರಗಳಿಂದ ಕಾಂಗ್ರೆಸ್‌ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರಿಂದ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು.

ಕಾಂಗ್ರೆಸ್ ಬೆಂಬಲಿತರಿಗೆ ಸರಳ‌ ಬಹುಮತ‌ ಸಿಕ್ಕಿದ್ದರಿಂದ ‘ಅಧ್ಯಕ್ಷ’ ಗಾದಿ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಗರಿಗೆದರಿತ್ತು.

ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಹಾಗೂ ಶರಣಬಸಪ್ಪ ದರ್ಶನಾಪುರ ಅವರ ನಡೆಯತ್ತ ಅಭ್ಯರ್ಥಿಗಳ ಚಿತ್ತ ನೆಟ್ಟಿತ್ತು.

ಈ‌ ಸಂಬಂಧ ಕಲಬುರಗಿಯಲ್ಲಿ‌ ನಡೆದ ಸಭೆಯಲ್ಲಿ 'ಒಮ್ಮತ'ದ ಅಭ್ಯರ್ಥಿ ‌ಕಣಕ್ಕಿಳಿಸಲು ಕಾಂಗ್ರೆಸ್ ‌ನಾಯಕರು‌ ತೀರ್ಮಾನಿಸಿದರು ಎಂದು‌ ಮೂಲಗಳು ಹೇಳಿವೆ.

ಅಪೆಕ್ಸ್ ಬ್ಯಾಂಕ್ ಗೆ ಸುನೀಲ ಹೆಸರು?

ಡಿಸಿಸಿ‌ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ‌ ಆಯ್ಕೆ ಬಳಿಕ ಅಪೆಕ್ಸ್ ಬ್ಯಾಂಕ್‌ ಗೆ‌‌ ನಿರ್ದೇಶಕರ ಆಯ್ಕೆ ನಡೆಯಲಿದ್ದು, ಮೊದಲ ಸಲ ಗೆದ್ದು ಡಿಸಿಸಿ ಬ್ಯಾಂಕ್ ‌ಪ್ರವೇಶಿಸಿರುವ ಸುನೀಲಕುಮಾರ ದೊಡಮನಿ ಹೆಸರು ಕೇಳಿ ಬರುತ್ತಿದೆ.

ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಯಲ್ಲಿ ಚಿತ್ತಾಪುರ ‌ಕ್ಷೇತ್ರದಿಂದ ಅಚ್ಚರಿಯ ‌ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವಿನ ‌ನಗೆ ಬೀರಿದ್ದರು. ಇದೀಗ‌‌‌ ಮೊದಲ ಗೆಲುವಿನ‌ ಬೆನ್ನಲ್ಲೆ ಅವರ ಇದೀಗ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಸುನೀಲಕುಮಾರ ಅವರು ಜಿಲ್ಲಾ ಉಸ್ತುವಾರಿ ‌ಸಚಿವ‌ ಪ್ರಿಯಾಂಕ್ ಖರ್ಗೆ ಅವರ ಸಂಬಂಧಿ.

ಮತ್ತೊಂದೆಡೆ, ಡಿಸಿಸಿ ಬ್ಯಾಂಕ್‌ 'ಅಧ್ಯಕ್ಷ ‌ಸ್ಥಾನ'ದ ಸ್ಪರ್ಧೆಯಿಂದ ಹೊರಗುಳಿದರೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕರನ್ನಾಗಿ ನಿಕಟಪೂರ್ವ‌ ಅಧ್ಯಕ್ಷ ಸೋಮಶೇಖರ ಗೋನಾಯಕ ಅವರನ್ನು ಆಯ್ಕೆ ಮಾಡಲು ಚಿಂತನೆಯೂ ನಡೆದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.