ADVERTISEMENT

ಕಲಬುರಗಿ | ಎಲ್ಲಮ್ಮ ನಿನ್ನಾಲ್ಕ ಉಧೋ ಉಧೋ...ಯುವಜನೋತ್ಸವದಲ್ಲಿ ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:51 IST
Last Updated 29 ಅಕ್ಟೋಬರ್ 2025, 6:51 IST
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದಲ್ಲಿ( ಸ್ವಾಯತ್ತ) ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಂಗಳವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಡೊಳ್ಳು ಬಾರಿಸಿ ಚಾಲನೆ ನೀಡಿದರು. ಗಣ್ಯರು ಪಾಲ್ಗೊಂಡಿದ್ದರು     
ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯದಲ್ಲಿ( ಸ್ವಾಯತ್ತ) ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಂಗಳವಾರ ನಡೆದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಡೊಳ್ಳು ಬಾರಿಸಿ ಚಾಲನೆ ನೀಡಿದರು. ಗಣ್ಯರು ಪಾಲ್ಗೊಂಡಿದ್ದರು        

ಕಲಬುರಗಿ: ಪಂಚಮಿ ಹಬ್ಬ, ಉಳಿದಾವ ದಿನ ನಾಕ... ದಿನ ನಾಕ... ಅಣ್ಣ ಬರಲಿಲ್ಲ ಯಾಕ ಕರಿಲಾಕ..

ಎಲ್ಲಿ ಕಾಣೆ, ಎಲ್ಲಿ ಕಾಣೆ.. ಎಲ್ಲಮ್ಮನಂತಾಕಿನ ಎಲ್ಲಿ ಕಾಣೆ.. ಎಲ್ಲಿ ಕಾಣೆನೋ... ಉಧೋ.. ಉಧೋ..

ಹೀಗೆ.. ಘಲ್ಲು ಘಲ್ಲೆನುತಾ ಗೆಜ್ಜೆ, ಘಲ್ಲು ತಾಜೆಣುತಾ... ಎಂದು ಪುಂಖಾನುಪುಂಖವಾಗಿ ವಿದ್ಯಾರ್ಥಿನಿಯರಿಂದ ಜನಪದ ಗೀತೆಗಳು ಹೊರ ಹೊಮ್ಮುತ್ತಿದ್ದರೆ, ನೆರೆದ ಸಭೀಕರು ತಲೆದೂಗುತ್ತಿದ್ದರು. ಪ್ರಜ್ಞಾವಂತರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರೆ ಹಿಂದೆ ಕುಳಿತ ಹುಡುಗರು ಕೂಗಿ ಖುಷಿಪಡುತ್ತಿದ್ದರು. ಇದೆಲ್ಲಾ ಕಂಡುಬಂದಿದ್ದು ಸರ್ಕಾರಿ ಮಹಾವಿದ್ಯಾಲಯದಲ್ಲಿ(ಸ್ವಾಯತ್ತ) ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ.

ADVERTISEMENT

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾವೇನೂ ಕಡಿಮೆಯಿಲ್ಲ ಎಂದು ಡೊಳ್ಳು ಬಾರಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌, ‘ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿದ್ಯಾರ್ಥಿಗಳು ಪಠ್ಯ ಕಲಿಕೆಗೆ ಮಾತ್ರ ಸೀಮಿತವಾಗದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸವಿತಾ ತಿವಾರಿ, ‘ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಗೆಲ್ಲುವವನು ಸಿಕಂದರ್, ಸೋತು ಗೆಲ್ಲುವವನು ಬಾಜಿಗರ್‌’ ಎಂದು ಹಿಂದಿ ಶಾಯರಿಯ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ತೀರ್ಪುಗಾರರಾಗಿ ಆಗಮಿಸಿದ್ದ ಭರತನಾಟ್ಯ ಕಲಾವಿದೆ ಪ್ರಿಯಾ ಘಟಾಳೆ ವೇದಿಕೆ ಏರಿ ಕಾಂತಾರ ಸಿನಿಮಾದ ‘ವರಾಹ ರೂಪಂ ದೈವ ವರಿಷ್ಟಂ’ ಹಾಡಿಗೆ ಹೆಜ್ಜೆ ಹಾಕಿದರು. ಜಾನಪದ ಅಕಾಡೆಮಿ ಮಾಜಿ ಸದಸ್ಯೆ ಗಿರಿಜಾ ಕರ್ಪೂರ ಅವರು, ‘ಕುಟ್ಟುತ್ತಾ ನೆನೆದೇನ ಕೂಡಲಸಂಗಮನ, ಅಕ್ಕಂದು ಆಲೂರು, ತಂಗೀದು ಬೇಲೂರು’ ಎಂದು ತಮ್ಮ 75ನೇ ವಯಸ್ಸಿನಲ್ಲೂ ಕಂಚಿನ ಕಂಠದಿಂದ ಗೀತೆ ಹೊರಹೊಮ್ಮಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ರಾಜ್ಯ, ರಾಷ್ಟ್ರಮಟ್ಟದ ಯುವ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಬಸವರಾಜ ತೋಟದ, ವೀರಭದ್ರಪ್ಪ ಸಿಂಪಿ, ಸುರೇಶ ಬಡಿಗೇರ್, ಪ್ರಭುಲಿಂಗ, ಸುಭಾಷ್ ವಗ್ಗೆ ಅವರನ್ನು ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ವೈ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಶ್ರೀಮಂತ ಹೊಳ್ಕರ್, ಕಲಾವಿಭಾಗದ ಡೀನ್ ವಿಜಯಕುಮಾರ್ ಸಾಲಿಮನಿ, ವಿಜ್ಞಾನ ವಿಭಾಗದ ದವಲಪ್ಪ, ಬ್ಯಾಸ್ಕೆಟ್ ಬಾಲ್ ತರಬೇತುದಾರ ಪ್ರವೀಣ ಪುಣೆ, ಹಾಕಿ ತರಬೇತುದಾರ ಸಂಜಯ ಬಾಣದ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕುಸನೂರ ಗ್ರಾಮದ ಮಾಳಿಂಗೇಶ್ವರ ಡೊಳ್ಳಿನ ಸಂಘದವರು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿರುವುದು
ಗಿರಿಜಾ ಕರ್ಪೂರ
ಜನಪದ ಗೀತೆಗಳ ಗಾಯನ ಮಧುರವಾಗಿರಬೇಕು. ಕಿರುಚಿದ ಹಾಗಿರಬಾರದು. ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಮೊದಲು ಸಿದ್ಧತೆ ಇರಬೇಕು
ಗಿರಿಜಾ ಕರ್ಪೂರ ಜಾನಪದ ಅಕಾಡೆಮಿ ಮಾಜಿ ಸದಸ್ಯೆ
ಶಿವಪೂಜಾ 
ನಾನು ಯುವಜನೋತ್ಸವದಲ್ಲಿ ಪ್ರಥಮ ಬಾರಿಗೆ ಬಾಗವಹಿಸುತ್ತಿದ್ದೇನೆ. ತುಂಬಾ ಖುಷಿಯಾಯಿತು. ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಬೇಕು.
ಶಿವಪೂಜಾ ವೀರಮ್ಮ ಗಂಗಸಿರಿ ಕಾಲೇಜು
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದಲ್ಲಿ (ಸ್ವಾಯತ್ತ) ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರು
ನಗದು ಬಹುಮಾನ ನೀಡಿ ಪ್ರೋತ್ಸಾಹ
ಯುವಜನೋತ್ಸವದಲ್ಲಿ ಜನಪದ ನೃತ್ಯ(ತಂಡ) ಜನಪದ ಗೀತೆ(ತಂಡ) ಕಥೆ ಬರೆಯುವುದು ಚಿತ್ರಕಲೆ ಭಾಷಣ ಕವಿತೆ ಬರೆಯುವುದು ಸೇರಿದಂತೆ ಆರು ಸ್ಪರ್ಧೆಗಳನ್ನು ನಡೆಸಲಾಯಿತು. ಜನಪದ ನೃತ್ಯ ಮತ್ತು ಜನಪದ ಗೀತೆಯ ವಿಜೇತರಿಗೆ ಪ್ರಥಮ ₹10 ಸಾವಿರ ದ್ವಿತೀಯ ₹7 ಸಾವಿರ ತೃತೀಯ ₹5 ಸಾವಿರ ನಗದು ಬಹುಮಾನ ನೀಡಲಾಯಿತು. ಉಳಿದ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ₹3 ಸಾವಿರ ದ್ವಿತೀಯ ₹ 2 ಸಾವಿರ ತೃತೀಯ ₹ 1 ಸಾವಿರ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ಪಡೆದವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.