ADVERTISEMENT

ಕೊಟ್ಟ ಮಾತಿಗೆ ತಪ್ಪಿ ನಡೆದರೆ ಜನ ಮೆಚ್ಚರು

ನೂತನ ಸಂಸದರು, ಬಿಜೆಪಿ ಮುಖಂಡರ ಸನ್ಮಾನ ಸಮಾರಂಭದಲ್ಲಿ ಎನ್‌.ರವಿಕುಮಾರ ತಾಕೀತು

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:42 IST
Last Updated 8 ಜೂನ್ 2019, 16:42 IST
ಕಲಬುರ್ಗಿಯಲ್ಲಿ ಶನಿವಾರ ಸಂಸರಾದ ಡಾ.ಉಮೇಶ ಜಾಧವ, ಭಗವಂತ ಖೂಬಾ, ಎನ್‌.ರವಿಕುಮಾರ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ್‌, ಎ.ಬಿ.ಮಾಲಕರಡ್ಡಿ, ಅಮರನಾಥ ಪಾಟೀಲ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು
ಕಲಬುರ್ಗಿಯಲ್ಲಿ ಶನಿವಾರ ಸಂಸರಾದ ಡಾ.ಉಮೇಶ ಜಾಧವ, ಭಗವಂತ ಖೂಬಾ, ಎನ್‌.ರವಿಕುಮಾರ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ್‌, ಎ.ಬಿ.ಮಾಲಕರಡ್ಡಿ, ಅಮರನಾಥ ಪಾಟೀಲ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು   

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಭಾಗವನ್ನು ಅತ್ಯಂತ ಹೆಚ್ಚು ಪೀಡಿಸುತ್ತಿರುವುದು ನಿರುದ್ಯೋಗ ಸಮಸ್ಯೆ. ಈ ಕಾರಣಕ್ಕಾಗಿಯೇ ಲಕ್ಷಾಂತರ ಮಂದಿ ಪ್ರತಿ ವರ್ಷ ಗುಳೆ ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಟಿ ಮಾಡಿ ಗುಳೆ ತಪ್ಪಿಸುವ ಜವಾಬ್ದಾರಿಯನ್ನು ಎಲ್ಲ ಸಂಸದರು ಹೊರಲೇಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ನೂತನ ಸಂಸದರು, ಮುಖಂಡರು, ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಚುನಾವಣೆಯಲ್ಲಿ ಗೆದ್ದೆವೆಂದು ಸಂಸದರು ಮೈಮರೆಯುವಂತಿಲ್ಲ. ಪ್ರಚಾರದ ಸಂದರ್ಭದಲ್ಲಿ ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಬೇಕು. ಈ ಭಾಗದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಬೇಕು. ಇದರಿಂದ ಜನರಿಗೆ ಉದ್ಯೋಗ ಸಿಕ್ಕು, ಗುಳೆ ಹೋಗುವ ಪರಿಪಾಠ ತಪ್ಪುತ್ತದೆ. ಎರಡನೇ ಆದ್ಯತೆಯಾಗಿ ನೀರು ಪೂರೈಕೆ, ರಸ್ತೆ– ಶೌಚಾಲಯ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳ ಬಗ್ಗೆ ನಿಗಾ ವಹಿಸಬೇಕು’ ಎಂದರು.

ADVERTISEMENT

‘ಚುನಾವಣೋತ್ತರ ಕೂಡ ಮುಖಂಡರು, ಕಾರ್ಯಕರ್ತರ ಸಭೆಗಳನ್ನು ಕರೆಯುವ ಪದ್ಧತಿ ಮುಂದುವರಿಸೋಣ. ಈ ಭಾಗದಲ್ಲಿ ಆಗಬೇಕಾದ ಕೆಲಸಗಳು, ಪ್ರಗತಿಯ ಬಗ್ಗೆ ಎಲ್ಲರೂ ಸೇರಿ ಚರ್ಚಿಸೋಣ. ಆಗ ಮಾತ್ರ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ’ ಎಂದೂ ಹೇಳಿದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಮತದಾರರ ಋಣವನ್ನು ನಾನು ಏಳೇಳು ಜನ್ಮಕ್ಕೂ ಮರೆಯುವುದಿಲ್ಲ. ನೀವು ಇಟ್ಟ ವಿಶ್ವಾಸವನ್ನು ಎಂದೂ ಕಳೆದುಕೊಳ್ಳುವುದಿಲ್ಲ, ದ್ರೋಹ ಆಗಲು ಬಿಡುವುದಿಲ್ಲ. ಸಬ್‌ ಕಾ ಸಾಥ್‌– ಸಬ್‌ ಕಾ ವಿಕಾಸ್‌ ಎಂಬ ಪ್ರಧಾನಿ ಮೋದಿ ಅವರ ಆಶಯಕ್ಕೆ ‘ಸಬ್‌ ಕಾ ವಿಶ್ವಾಸ್‌’ ಎಂಬ ಪದವನ್ನೂ ನಾನು ಪಾಲಿಸುತ್ತೇನೆ’ ಎಂದರು.

‘ಈಗಾಗಲೇ ಸನ್ಮಾನಗಳು ಸಾಕಷ್ಟಾಗಿವೆ. ಇನ್ನು ಮುಂದೆ ಯಾರೂ ಸನ್ಮಾನ ಮಾಡಲು ಬರಬೇಡಿ. ಕೆಲಸ ಮಾಡಲು ಕೈ ಜೋಡಿಸಿ. ನೀವು ಎಷ್ಟು ಹಾರ ಹಾಕುತ್ತೀರೋ ಅಷ್ಟು ನನ್ನ ಜವಾಬ್ದಾರಿ ಹೆಚ್ಚುತ್ತದೆ. ನನ್ನ ಮನೆ ಬಾಗಿಲಿಗೆ ಬೀಗ ಹಾಕುವುದಿಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ಬರಬಹುದು’ ಎಂದರು.

ಬೀದರ್‌ ಸಂಸದ ಭಗವಂತ ಖೂಬಾ ಮಾತನಾಡಿ, ‘ಜಾತಿ, ಧರ್ಮ ಆಧಾರಿತ ರಾಜಕಾರಣಕ್ಕೆ ಈಗ ಕೊನೆ ಬಿದ್ದಿದೆ. ಪ್ರಧಾನಿ ಮೋದಿ ಅವರ ಪ್ರಭಾವಳಿಯಲ್ಲಿ ಅಭಿವೃದ್ಧಿ ಹಾಗೂ ದೇಶ ಸೇವೆಗೆ ಮಾತ್ರ ಜನಮನ್ನಣೆ ಸಿಕ್ಕಿದೆ. ಬಡವರಿಗಾಗಿಯೇ 38 ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಅವೆಲ್ಲವನ್ನೂ ಜನತೆಗೆ ಸಮರ್ಪಕವಾಗಿ ಮುಟ್ಟಿಸುತ್ತೇವೆ’ ಎಂದರು.

ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಪಾಟೀಲ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಮುಖಂಡರಾದ ಶಶೀಲ್‌ ನಮೋಶಿ, ಅಮರನಾಥ ಪಾಟೀಲ, ವಾಲ್ಮೀಕಿ ನಾಯಕ, ಎ.ಬಿ.ಮಾಲಕರಡ್ಡಿ, ಚಂದು ಪಾಟೀಲ ವೇದಿಕೆಯಲ್ಲಿದ್ದರು.

ಕಾರ್ಯಕರ್ತರು ಪುದೀನಾ ಸೊಪ್ಪಿನಿಂದ ಮಾಡಿದ ಬೃಹತ್‌ ಹಾರ ಹಾಕುವ ಮೂಲಕ ಸಂಸದರನ್ನು ಸನ್ಮಾನಿಸಿದರು. ಇದಕ್ಕೆ ಪ್ರತಿಯಾಗಿ ಸಂಸದರು ಕೂಡ ಕಾರ್ಯಕರ್ತರ ಮೇಲೆ ಹೂ ಹಾರಿಸಿ ಗೌರವಿಸಿದರು.

‘ಪಾಲಿಕೆಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಿ’
‘ಕಲಬುರ್ಗಿ ಮಹಾನಗರ ಪಾಲಿಕೆಯೂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಎನ್‌.ರವಿಕುಮಾರ ಸಲಹೆ ನೀಡಿದರು.

‘ಹೈದರಾಬಾದ್‌ ಕರ್ನಾಟಕ ಭಾಗದ ಎಲ್ಲ ಸ್ಥಳೀಯ ಸಂಸ್ಥೆಗಳ ಮೇಲೂ ಬಿಜೆಪಿ ಧ್ವಜ ಹಾರಾಡಬೇಕು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ಬಿಜೆಪಿ ಮಾತ್ರ ಪವರ್‌ಫುಲ್‌ ಆಗಿರಬೇಕು’ ಎಂದು ನಿರ್ದೇಶನ ನೀಡಿದರು.

‘ಖರ್ಗೆ ಅವರನ್ನು ಸೋಲಿಸಿದ್ದೇವೆ ಎಂದು ಪದೇಪದೇ ಹೇಳಿಕೊಳ್ಳಬೇಡಿ. ಚುನಾವಣೆ ಮುಗಿದ ಮೇಲೂ ಅದನ್ನು ಮಾತನಾಡಿದರೆ ಜನ ಬೇಸರಿಸಿಕೊಳ್ಳುತ್ತಾರೆ. ಬಿಜೆಪಿ ಗೆಲ್ಲಿಸಿದ್ದೇವೆ ಎಂದು ಹೇಳಿಕೊಳ್ಳಿ. ಅದರಿಂದ ಖುಷಿ ಪಡುವವರು ಸಾಕಷ್ಟಿದ್ದಾರೆ’ ಎಂದೂ ಅವರು ಸೂಚಿಸಿದರು.

*
ಮಲ್ಲಿಕಾರ್ಜುನ ಖರ್ಗೆ ಅವರನ್ನು ದಕ್ಷಿಣ ಭಾರತದ ಮಹಾರಾಜ ಎಂದು ದೆಹಲಿಯ ಕೆಲವರು ಕರೆಯುತ್ತಾರೆ. ಈ ಮಹಾರಾಜನನ್ನು ಸೋಲಿಸಿದ್ದರೂ ನಾನು ಸೇವಕನಾಗಿಯೇ ಉಳಿಯುತ್ತೇನೆ.
-ಡಾ.ಉಮೇಶ ಜಾಧವ‌, ಸಂಸದ

*
ಗುಲಬರ್ಗಾ ಕ್ಷೇತ್ರದ ಗೆಲುವು ಸಾಮಾನ್ಯವಾದುದಲ್ಲ. ನಮ್ಮ ಶಾಸಕರು, ಕಾರ್ಯಕರ್ತರು ಎಡೆಬಿಡದೇ ದುಡಿದಿದ್ದಾರೆ. ಮತದಾರರು ಮಾತ್ರ ಸೈಲೆಂಟ್‌ ಆಗಿ ಇದ್ದುಕೊಂಡೇ ಒಳಗುದ್ದು ನೀಡಿದ್ದಾರೆ.
-ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಮುಖಂಡ

*
ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಪದೇಪದೇ ಗುಲಬರ್ಗಾ ಕ್ಷೇತ್ರದ ಬಗ್ಗೆಯೇ ವಿಚಾರಿಸುತ್ತಿದ್ದರು. ಸೋಲಿಲ್ಲದ ಸರದಾರ ಎಂದುಕೊಂಡವರನ್ನು ಮನೆಗೆ ಕಳಿಸಿ, ಮೋದಿ ಕೈ ಬಲಪಡಿಸಿದ್ದೇವೆ.
-ಬಾಬುರಾವ ಚಿಂಚನಸೂರ್‌, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.