ADVERTISEMENT

ಕಾಳಗಿ: ರಾಜ್ಯ ಹೆದ್ದಾರಿ ಸ್ಥಿತಿ ಅಧೋಗತಿ

ರಸ್ತೆ ದುಸ್ಥಿತಿಯಿಂದ ಅಶೋಕನಗರ-ಹೆಬ್ಬಾಳ ನಡುವಿನ ಬಸ್‌ ಸಂಚಾರ ಸ್ಥಗಿತ

ಗುಂಡಪ್ಪ ಕರೆಮನೋರ
Published 2 ಏಪ್ರಿಲ್ 2024, 4:50 IST
Last Updated 2 ಏಪ್ರಿಲ್ 2024, 4:50 IST
ಕಾಳಗಿ ತಾಲ್ಲೂಕಿನ ಅಶೋಕನಗರ-ಹೆಬ್ಬಾಳ ನಡುವೆ ಹದಗೆಟ್ಟಿರುವ ರಾಜ್ಯಹೆದ್ದಾರಿ
ಕಾಳಗಿ ತಾಲ್ಲೂಕಿನ ಅಶೋಕನಗರ-ಹೆಬ್ಬಾಳ ನಡುವೆ ಹದಗೆಟ್ಟಿರುವ ರಾಜ್ಯಹೆದ್ದಾರಿ   

ಕಾಳಗಿ: ಜಿಲ್ಲಾ ಕೇಂದ್ರ ಕಲಬುರಗಿಗೆ ಕೇವಲ 20 ಕಿ.ಮೀ ಅಂತರ ಹೊಂದಿರುವ ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಅಕ್ಕಪಕ್ಕದಲ್ಲಿ ಹಾದುಹೋಗುವ ಎರಡು ರಾಜ್ಯಹೆದ್ದಾರಿಗಳು ಹಾಳಾಗಿವೆ. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಈ ಹೆದ್ದಾರಿಗಳ ದುರಸ್ತಿಗೆ ಮನಸ್ಸು ಮಾಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಕಲಬುರಗಿ ಲೋಕಸಭಾ ಮತ್ತು ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಹೆಬ್ಬಾಳ ಗ್ರಾಮಕ್ಕೆ ಅಶೋಕನಗರ (ಹೆಬ್ಬಾಳ ಕ್ರಾಸ್) ದಿಂದ ರಾಜ್ಯಹೆದ್ದಾರಿ-126 ಮತ್ತು ಕಲಬುರಗಿ ಕಡೆಯಿಂದ ರಾಜ್ಯಹೆದ್ದಾರಿ-149 ಸೇರಿಕೊಳ್ಳುತ್ತದೆ.

ಈ ಎರಡೂ ಹೆದ್ದಾರಿ ಸೇರಿಕೊಳ್ಳುವ ಹೆಬ್ಬಾಳ ಗ್ರಾಮ ಪಂಚಾಯಿತಿಯು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಮತ್ತು ಬಿ.ಜಿ.ಪಾಟೀಲ್ ಅವರ ರಾಜಕೀಯ ತವರಾಗಿದೆ.

ADVERTISEMENT

ರಾಜ್ಯಹೆದ್ದಾರಿ-126ರ ಕನಿಷ್ಠ 14ಕಿ.ಮೀ ರಸ್ತೆಯು ಎಲ್ಲೆಂದರಲ್ಲಿ ತಗ್ಗು ಗುಂಡಿಗಳನ್ನು ಹೊಂದಿದೆ. ಜಲ್ಲಿಕಲ್ಲುಗಳು, ದೂಳು ಕಣ್ಣು ಕಟ್ಟುತ್ತಿವೆ. ವಾಹನ ಸವಾರರು, ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೆಜ್ಜೆ ಇಡುವಂತಾಗಿದೆ. ಪರಿಣಾಮ ಅಶೋಕನಗರ-ಹೆಬ್ಬಾಳ ನಡುವಿನ ಬಸ್ಸಿನ ಸಂಚಾರ ನಿಂತುಹೋಗಿದೆ.

ವಿಶ್ವನಾಥ ಪಾಟೀಲ ಹೆಬ್ಬಾಳ ಅಧಿಕಾರವಧಿಯಲ್ಲಿ ಅಲ್ಲಲ್ಲಿ ಕಾಮಗಾರಿ ಕಂಡಿದ್ದು ಬಿಟ್ಟರೆ 15 ವರ್ಷಗಳಿಂದ ಇಲ್ಲಿಯ ರಸ್ತೆಯ ಸ್ಥಿತಿ ಅಧೋಗತಿಯಾಗಿದೆ ಎನ್ನುತ್ತಾರೆ ಜನರು.

ಹಳೆಹೆಬ್ಬಾಳ ಸೇತುವೆಯಿಂದ ಚಿಂಚೋಳಿ (ಎಚ್)-ಹುಳಗೇರಾ ನಡುವಿನ ಹೆದ್ದಾರಿಯು ಬೀದರ್ ಲೋಕಸಭಾ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಇಲ್ಲಿ ಕೆಲವೆಡೆ ಮರುಮ್ ಹಾಕಿ ಕೈ ತೊಳೆದುಕೊಳ್ಳಲಾಗಿದೆ. ಒಟ್ಟಾರೆ ಈ ಹೆದ್ದಾರಿಗಳು ಹಲವು ವರ್ಷಗಳಿಂದ ಹದಗೆಟ್ಟರೂ ದುರಸ್ತಿಗೊಳಿಸುವವರು ಯಾರು ಇಲ್ಲದಂತಾಗಿದೆ.

‘ಈ ಹೆದ್ದಾರಿಗಳ ಸ್ಥಿತಿಗತಿ ಬಗ್ಗೆ ಪ್ರತಿವರ್ಷ ಸರ್ಕಾರಕ್ಕೆ ವರದಿ ನೀಡುತ್ತಾ, ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಸ್ತುತ ಹಳೆಹೆಬ್ಬಾಳದಿಂದ ಹೆಬ್ಬಾಳ ಕ್ರಾಸ್- ಹೊಸ ಹೆಬ್ಬಾಳ ನಡುವಿನ ಮುಖ್ಯರಸ್ತೆವರೆಗೆ 1.5 ಕಿ.ಮೀ ಕಾಮಗಾರಿಗೆ ಮಾತ್ರ ಅನುಮೋದನೆ ಸಿಕ್ಕಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರು ವಿಧಾನ ಪರಿಷತ್ ಸದಸ್ಯರು ಒಬ್ಬರು ಮಾಜಿ ಶಾಸಕರು ಇದ್ದಾರೆ. ಆದರೂ ನಮ್ಮೂರು ಜನರು ಓಡಾಡುವ ರಸ್ತೆ ಸ್ಥಿತಿ ಅಧೋಗತಿಯಾಗಿದೆ

– ಮಲ್ಲಿಕಾರ್ಜುನ ಶಿವಗೋಳ ತಾ.ಪಂ. ಮಾಜಿ ಸದಸ್ಯ ಹೆಬ್ಬಾಳ

ಈ ಭಾಗದ ಜನತೆಗೆ ಜಿಲ್ಲಾ ಕೇಂದ್ರ ಕಲಬುರಗಿ ಸಮೀಪವಾಗುತ್ತದೆ. ಆದ್ದರಿಂದ ಸುತ್ತಲಿನ ಗ್ರಾಮಸ್ಥರು ಹೆಚ್ಚಾಗಿ ಈ ರಸ್ತೆ ಸಂಪರ್ಕವನ್ನೇ ಅವಲಂಬಿಸಿದ್ದಾರೆ. ಆದರೆ ರಸ್ತೆ ಮಾತ್ರ ಕೆಟ್ಟುಹೋಗಿದೆ

– ಪ್ರಕಾಶ ಗಂಜಿ ಚಿಂಚೋಳಿ (ಎಚ್) ಗ್ರಾಪಂ ಅಧ್ಯಕ್ಷ

ವೃದ್ಧರು ಮಹಿಳೆಯರು ಅಂಗವಿಕಲರು ಬೈಕ್ ಸವಾರರು ಈ ಹೆದ್ದಾರಿಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಹೆದ್ದಾರಿ ದುರಸ್ತಿಗೆ ಯಾರೂ ಮುಂದೆ ಬರುತ್ತಿಲ್ಲ

– ನೀಲೇಶ ತೀರ್ಥ ಗ್ರಾ.ಪಂ. ಮಾಜಿ ಸದಸ್ಯ ಬಣಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.