ADVERTISEMENT

ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ

ಗುಂಡಪ್ಪ ಕರೆಮನೋರ
Published 25 ನವೆಂಬರ್ 2025, 6:54 IST
Last Updated 25 ನವೆಂಬರ್ 2025, 6:54 IST
ಕಾಳಗಿ ತಾಲ್ಲೂಕಿನ ಚಿಂಚೋಳಿ (ಎಚ್) ಮತ್ತು ಗೋಟೂರ ನಡುವಿನ ಜಿಲ್ಲಾ ಮುಖ್ಯರಸ್ತೆ ಹಾಳಾಗಿ ಬಂದ್ ಆಗಿರುವುದು
ಕಾಳಗಿ ತಾಲ್ಲೂಕಿನ ಚಿಂಚೋಳಿ (ಎಚ್) ಮತ್ತು ಗೋಟೂರ ನಡುವಿನ ಜಿಲ್ಲಾ ಮುಖ್ಯರಸ್ತೆ ಹಾಳಾಗಿ ಬಂದ್ ಆಗಿರುವುದು   

ಕಾಳಗಿ: ಪಟ್ಟಣದಿಂದ ಕಲಬುರಗಿ ನಗರಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕಿಸಲಿದ್ದ ತಾಲ್ಲೂಕಿನ ಗೋಟೂರ-ಚಿಂಚೋಳಿ (ಎಚ್) ನಡುವಿನ 5 ಕಿ.ಮೀ ಜಿಲ್ಲಾ ಮುಖ್ಯರಸ್ತೆ 3-4 ವರ್ಷಗಳಿಂದ ಬಂದ್ ಆಗಿದೆ.

ಆದರೆ ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್‌ ಮತ್ತಿತರ ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.

ಕಾಳಗಿ–ಕಲಬುರಗಿ ನಡುವೆ ಸಂಚರಿಸಲು ಒಂದು ಮಾಡಬೂಳ, ಇನ್ನೊಂದು ಚಿಂಚೋಳಿ (ಎಚ್) ಮಾರ್ಗವಿದೆ. ಮಾರ್ಕೆಟ್, ಹೆಬ್ಬಾಳ ಹೋಗುವ ವಾಹನಗಳಿಗೆ ಚಿಂಚೋಳಿ (ಎಚ್) ರಸ್ತೆ ಮಾರ್ಗವೇ ಅತ್ಯಂತ ಸಮೀಪವಾಗಿದೆ.

ADVERTISEMENT

ಆದರೆ ಈ ರಸ್ತೆ ಮಳೆನೀರಿನ ಹಳ್ಳದ ಪ್ರವಾಹಕ್ಕೆ ಕೆಲವೊಂದಿಷ್ಟು ಕೊಚ್ಚಿಹೋಗಿದೆ. ಆಗ ಇದು ದುರಸ್ತಿಗೊಳ್ಳದೆ ಉಳಿದುಕೊಂಡಿದೆ. ಅಷ್ಟರಲ್ಲೇ ಗೋಟೂರ ಗ್ರಾಮದ ರೈತರೊಬ್ಬರು ಈ ರಸ್ತೆ ನಮ್ಮ ಜಮೀನಿನಲ್ಲಿದೆ. ಸರ್ಕಾರ ನಮಗೆ ಪರಿಹಾರ ಕೊಟ್ಟಿಲ್ಲ ಎಂದು ತಕರಾರು ತೆಗೆದಿದ್ದರು ಎನ್ನಲಾಗಿದೆ. ಆದರೂ ಈ ಮಧ್ಯೆ ಸಣ್ಣಪುಟ್ಟ ವಾಹನಗಳು ಹಾಗೊ ಹೀಗೊ ಸಂಚರಿಸುತ್ತಿದ್ದವು. ಸರ್ಕಾರಿ ಬಸ್‌, ದೊಡ್ಡ ವಾಹನಗಳು ಮಾತ್ರ ಮಾರ್ಗ ಬದಲಾಯಿಸಿದವು. ಈಚೆಗೆ ಗೋಟೂರ ಗ್ರಾಮದ ಆ ರೈತ ಮಾರ್ಗಮಧ್ಯೆ ಬ್ರಿಡ್ಜ್ ಬಳಿ ರಸ್ತೆಗೆ ಸಿಕ್ಕಾಪಟ್ಟೆ ಮುಳ್ಳು ಬಡಿದು ಸಂಚರಿಸಲು ಬರದಂತೆ ಸಂಪೂರ್ಣ ಬಂದ್ ಮಾಡಿದ್ದಾರೆ.

ಮೊದಲೇ ಪ್ರವಾಹಕ್ಕೆ ರಸ್ತೆ ಕೊಚ್ಚಿಹೋಗಿ ದುರಸ್ತಿಯಾಗದೆ 5 ಕಿ.ಮೀ ಪೂರ್ತಿ ಹಾಳಾಗಿದೆ. ಈಗ ಮುಳ್ಳು ಬಡಿದು ರಸ್ತೆಯೇ ಸಂಪೂರ್ಣ ಬಂದ್ ಮಾಡಿದ್ದರಿಂದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ರಸ್ತೆ ಮಾರ್ಗದ ಗೋಟೂರ ಕೃಷಿಕರು 3-4 ಕಿ.ಮೀ ಬದಲು ಅಶೋಕನಗರ, ಹೆಬ್ಬಾಳ, ಚಿಂಚೋಳಿ (ಎಚ್) ಮಾರ್ಗವಾಗಿ 12-14 ಕಿ.ಮೀ ಸುತ್ತಿಬಳಸಿ ತಮ್ಮ ಹೊಲಗಳಿಗೆ ಬರುವಂತಾಗಿದೆ.

ಹಳೆ ಹೆಬ್ಬಾಳ, ಚಿಂಚೋಳಿ (ಎಚ್) ಜನರು ಕಾಳಗಿಗೆ ಬರಲು ಸುಗೂರ (ಕೆ) ಮಾರ್ಗವಾಗಿ 3 ಕಿ.ಮೀ ಹೆಚ್ಚಿಗೆ ಕ್ರಮಿಸಬೇಕಾಗಿದೆ. ಕಾಳಗಿ ಜನರು ಕಲಬುರಗಿ ಮಾರ್ಕೆಟ್ ಹೋಗಲು ಮತ್ತು ಬಣಬಿ, ಹುಳಗೇರಾ, ಕಂದಗೂಳ, ಕಲ್ಲಹಿಪ್ಪರಗಿ, ಶೆಳ್ಳಗಿ, ಹಳೆ ಹೆಬ್ಬಾಳ, ಹೇರೂರ (ಕೆ) ಜನರು ಸುತ್ತಿಬಳಸಿ ಪರದಾಡುವಂತಾಗಿದೆ.

‘ಸಂಬಂಧಪಟ್ಟ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಿ, ನಮ್ಮ ತೊಂದರೆ ತಪ್ಪಿಸಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಚಿಂಚೋಳಿ (ಎಚ್) ಗ್ರಾಮದ ಮಶಾಖ ಪಟೇಲ್ ದಂಡೋತಿ ಮನವಿ ಮಾಡಿದ್ದಾರೆ.

ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಲಾಗಿದೆ. ಅವರು ರಸ್ತೆಯಲ್ಲಿ ಮುಳ್ಳುಹಾಕಿದ ರೈತನೊಂದಿಗೆ ಚರ್ಚಿಸಿದ್ದಾರೆ
ಶಿವಕುಮಾರ ಕಮಕನೂರ ಗೋಟೂರ ಗ್ರಾ.ಪಂ ಅಧ್ಯಕ್ಷ
ನಮ್ಮೂರಿನ 15–20 ಜನರು ಈಚೆಗೆ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ರಸ್ತೆ ಸುಗಮಗೊಳಿಸುವಂತೆ ಕೋರಿದ್ದೇವೆ. ಅವರು ಸಂಬಂಧಿತರ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ
ಅಣ್ಣರಾವ ಸಲಗರ ಚಿಂಚೋಳಿ (ಎಚ್) ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.