ಕಾಳಗಿ: ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ) ಹಲವು ವರ್ಷಗಳಿಂದ 30 ಹಾಸಿಗೆಯಿಂದಲೇ ಕೂಡಿದೆ. ಆದರೆ ರೋಗಿಗಳು ಸಂಖ್ಯೆ ಹೆಚ್ಚಳದಿಂದ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ.
ಕಾಳಗಿ ತಾಲ್ಲೂಕು ಘೋಷಣೆಯಾಗಿ ದಶಕವಾಗಿದೆ. ಆದರೆ ಆಸ್ಪತ್ರೆಯನ್ನು 50ಹಾಸಿಗೆಗೆ ವಿಸ್ತರಿಸುವ ಕಟ್ಟಡ ಕಾಮಗಾರಿ ಇದೀಗ ನಡೆಯುತ್ತಿದೆ. ಸುತ್ತಲಿನ ಹೆಬ್ಬಾಳ, ಗಡಿಕೇಶ್ವಾರ, ಗುಂಡಗುರ್ತಿಯಲ್ಲಿ ಸಹ ಸಿ.ಎಚ್.ಸಿ ಇವೆ. ಈ ಎಲ್ಲಕಡೆಗೂ ಅಷ್ಟೇ ಪ್ರಮಾಣದ ಸಿಬ್ಬಂದಿ ಇದೆ. ಆದರೆ ಇಲ್ಲಿ ಮಾತ್ರ ಪ್ರತಿನಿತ್ಯ ಸರಾಸರಿ 60ರಿಂದ 80 ಹೊರ ರೋಗಿಗಳು ಮತ್ತು 30ರಿಂದ 50 ಒಳರೋಗಿಗಳು ದಾಖಲಾಗುತ್ತಿದ್ದಾರೆ.
ಸಿಬ್ಬಂದಿಗಳ ಕೊರತೆಯಿಂದ ನಮ್ಮ ಮೇಲೆ ಕೆಲಸ ಒತ್ತಡ ಹೆಚ್ಚಾಗಿದೆ. ಇದರಿಂದ ಕೆಲವೇಳೆ ಪೂರ್ಣಪ್ರಮಾಣದಲ್ಲಿ ಸೇವೆ ನೀಡಲಾಗುತ್ತಿಲ್ಲ ಎನ್ನುತ್ತಾರೆ ಸಿಬ್ಬಂದಿ ವರ್ಗದವರು.
ಕಾಳಗಿ ತಾಲ್ಲೂಕು ಮಾತ್ರವಲ್ಲದೆ ಚಿಂಚೋಳಿ, ಕಮಲಾಪುರ ತಾಲ್ಲೂಕಿನ ಬಹುತೇಕ ಹಳ್ಳಿಗಳ ರೋಗಿಗಳು ಇಲ್ಲಿಗೆ ಬರುತ್ತಾರೆ. 15ವರ್ಷದಿಂದ ಎಕ್ಸ್-ರೇ ಹುದ್ದೆ ಖಾಲಿಯಿದೆ. ಔಷಧಿ ವಿತರಣೆಗೆ ಇಬ್ಬರ ಪೈಕಿ ಒಬ್ಬರು ಮಾತ್ರ ತಾತ್ಕಾಲಿಕವಾಗಿ ಈಗಷ್ಟೇ ಬಂದಿದ್ದಾರೆ. ಒಂದು ಕ್ಲರ್ಕ್ ಹುದ್ದೆ ಬಾಕಿ ಇದೆ.
ಸರ್ಕಾರ ಕಳೆದೊಂದು ವರ್ಷದಿಂದ ಅಗತ್ಯ ಔಷಧಿ ಪೂರೈಸುವಲ್ಲಿ ಹಿಂದೇಟು ಹಾಕುತ್ತಿದ್ದು ರೋಗಿಗಳು ಪರದಾಡುತ್ತಿದ್ದಾರೆ. ರೇಬಿಸ್ ಲಸಿಕೆ ಸೇರಿದಂತೆ ಎಂಟಿಬೈಯೋಟಿಕ್ (ಪ್ರತಿ ಜೀವಕ ಔಷಧಿ) ಕೊರತೆ ಕಾಡುತ್ತಿದೆ. ಇದರಿಂದ ಸಿಬ್ಬಂದಿ ಮತ್ತು ರೋಗಿಗಳು ಇಬ್ಬರು ತೊಂದರೆ ಅನುಭವಿಸುವಂತಾಗಿದೆ. ಈ ಎಲ್ಲದರ ಮಧ್ಯೆ ಇಲ್ಲಿ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ಸರ್ಕಾರ ಈ ಬಗ್ಗೆ ಎಚ್ಚೆತ್ತು ರೋಗಿಗಳ ಸಂಖ್ಯೆಗನುಗುಣವಾಗಿ ಕೂಡಲೇ ಸಿಬ್ಬಂದಿ ಹೆಚ್ಚಿಸಿ ಬಡ ಜನತೆಗೆ ನೆರವಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಾವು ಎಷ್ಟೇ ಸೇವೆ ನೀಡಿದ್ದರೂ ಕೆಲಸಂದರ್ಭಗಳಲ್ಲಿ ಬೈಗುಳ ತಪ್ಪಿದಲ್ಲ ಔಷಧಿ ಕೊರತೆ ಬಗ್ಗೆ ಸಾಕಷ್ಟು ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ –ಡಾ.ಅಮರೇಶ ಎಮ್.ಎಚ್ ಆಡಳಿತ ವೈದ್ಯಾಧಿಕಾರಿಸಿ.ಎಚ್.ಸಿ ಕಾಳಗಿ
ಆಸ್ಪತ್ರೆಗೆ ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಸರ್ಕಾರ ಕೂಡಲೇ ನೇಮಿಸಬೇಕುವೀರಣ್ಣಾ ಸಗರ ಮಂಗಲಗಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.