ADVERTISEMENT

ಕಲಬುರ್ಗಿ: ಕನ್ನಡ ಭವನ ಸಾಹಿತ್ಯದಿಂದ ದೂರ

ವ್ಯಾಪಾರಕ್ಕೆ ಸೀಮಿತವಾದ ಕನ್ನಡಿಗರ ಸಾರ್ವಭೌಮದ ಪ್ರಾತಿನಿಧಿಕ ಕಟ್ಟಡ

ಸಂತೋಷ ಈ.ಚಿನಗುಡಿ
Published 7 ಜನವರಿ 2020, 19:45 IST
Last Updated 7 ಜನವರಿ 2020, 19:45 IST
ಕಲಬುರ್ಗಿಯ ಕನ್ನಡ ಭವನದ ಆವರಣದಲ್ಲಿ ಖಾಸಗಿ ಸಂಸ್ಥೆಗಳು ಶಾಮಿಯಾನ ಹಾಕಿದ ನಂತರ ಕಟ್ಟಡ ತ್ಯಾಜ್ಯವನ್ನು ಅಲ್ಲೇ ಬಿಸಾಕಿ ಹೋಗಿವೆ
ಕಲಬುರ್ಗಿಯ ಕನ್ನಡ ಭವನದ ಆವರಣದಲ್ಲಿ ಖಾಸಗಿ ಸಂಸ್ಥೆಗಳು ಶಾಮಿಯಾನ ಹಾಕಿದ ನಂತರ ಕಟ್ಟಡ ತ್ಯಾಜ್ಯವನ್ನು ಅಲ್ಲೇ ಬಿಸಾಕಿ ಹೋಗಿವೆ   

ಕಲಬುರ್ಗಿ: ‘ಸದ್ಯಕ್ಕೆ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಚಟುವಟಿಕೆಗಳಿಗೂ ಇಲ್ಲಿಯ ಕನ್ನಡ ಭವನದಲ್ಲಿ ಕಾಣಸಿಗುವುದಿಲ್ಲ. ಅದೇನಿದ್ದರೂ ಸೀರೆ, ಷರ್ಟು, ಪ್ಯಾಂಟು, ಹಾಸಿಗೆ, ಹೊದಿಕೆ, ಚಪ್ಪಲಿಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಮಾರಲು ಮಾತ್ರ ಮೀಸಲಾಗಿದೆ’ ಎಂಬುದು ಬಹುತೇಕ ಸಾಹಿತ್ಯ ಪ್ರಿಯರ ಅಳಲು.

ನಗರದ ಹೃದಯ ಭಾಗದಲ್ಲೇ ಇರುವ ಈ ಭವನದ ಮುಂದೆ ಒಮ್ಮೆ ಹಾದು ಹೋಗಿ; ಕನ್ನಡಿಗರ ಸಾರ್ವಭೌಮತ್ವಕ್ಕೆ ಕನ್ನಡಿ ಹಿಡಿಯುವ ಕಟ್ಟಡ ಇದೇನಾ? ಎಂಬ ಅನುಮಾನ ಬರುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೂ ಈ ಭವನ ನೋಡಿದರೆ ಅಲ್ಲಿ ಇಂಥ ಯಾವ ಸಂಭ್ರಮದ ಕುರುಹೂ ಕಾಣುವುದಿಲ್ಲ.

ಸಾಹಿತ್ಯ ಸಮ್ಮೇಳನವೆಂದರೆ ವೈಭವದ ಪ್ರತಿರೂಪ. ಮನೆಯಲ್ಲಿ ಮದುವೆ ನಿಗದಿಯಾದಾಗ ತಿಂಗಳಿಗಿಂತ ಮುಂಚೆಯೇ ಮನೆಯನ್ನು ಚೊಕ್ಕಟಗೊಳಿಸಿ, ಅಲಂಕಾರ ಮಾಡಿ, ಸಂಭ್ರಮಿಸುವುದು ಸಾಮಾನ್ಯ. ನಾಡಿನ ದೊಡ್ಡ ಹಬ್ಬ ಹತ್ತಿರ ಬಂದಿದ್ದರೂ ಮದುವೆ ಮನೆಯ ಅಲಂಕಾರ ಈ ಭವನಕ್ಕೆ ಇಲ್ಲ.

ADVERTISEMENT

ಪಾಳುಬಿದ್ದ ಭವನ: ಸಾಹಿತ್ಯ ಪರಿಷತ್ತಿನ ಕಚೇರಿ ಹಾಗೂ ಸುವರ್ಣ ಭವನದ ಸಭಾಂಗಣ ಬಿಟ್ಟರೆ ಬಾಪುಗೌಡ ದರ್ಶನಾಪುರ ರಂಗಮಂದಿರ ಕೇವಲ ವ್ಯಾಪಾರಕ್ಕೆ ಬಳಕೆಯಾಗುತ್ತಿದೆ.

ನೆಲಮಹಡಿಯಲ್ಲಿ ವಿಶಾಲವಾದ ಸಭಾಂಗಣ, ಅಕ್ಕಪಕ್ಕ ಪ್ರಾಂಗಣ, ಶೌಚಾಲಯ ಇವೆ. ಮೊದಲ ಮಹಡಿಯಲ್ಲಿ ದೊಡ್ಡ ಆವರಣ, ವೇದಿಕೆ ಇದ್ದು, ಇದನ್ನೇ ವಿವಿಧ ವ್ಯಾಪಾರ–ಪ್ರದರ್ಶನಗಳಿಗೆ ಬಾಡಿಗೆ ನೀಡಲಾಗಿದೆ. ಮೊದಲ ಮಹಡಿಯಲ್ಲಿ ಶಿಸ್ತುಬದ್ಧ ಬಾಲ್ಕನಿ ನಿರ್ಮಿಸಿದ್ದು ನೂರಾರು ಜನ ಕುಳಿತಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲದರ ಪರವಾಗಿ ಬಳಕೆಯಾಗುತ್ತಿರುವುದು ಮಧ್ಯದ ಸಭಾಂಗಣ ಮಾತ್ರ. ಅದೂ ಕೂಡ ವ್ಯಾಪಾರಕ್ಕೆ!

ನೆಲಮಹಡಿಗೆ ಮೂರು ದ್ವಾರಗಳಿದ್ದು ಮೂರಕ್ಕೂ ಸರಪ‍ಳಿ ಬಿಗಿದು ಬೀಗ ಜಡಿಯಲಾಗಿದೆ. ಇದರೊಳಗೆ ಕಾಲಿಟ್ಟರೆ ಸಾಕು ಇಲಿ– ಹೆಗ್ಗಣಗಳ ಓಡಾಟ. ಗೋಡೆ, ಕಿಟಕಿ, ಬಾಗಿಲುಗಳಿಗೆ ಜೇಡ ಆವರಿಸಿಕೊಂಡಿದೆ. ನೆಲದ ಮೇಲೆ ದೂಳು ಮೆತ್ತಿಕೊಂಡಿದೆ. ಮೂಲೆಮೂಲೆಯಲ್ಲೂ ಪಾನ್‌– ಗುಟಕಾ ತಿಂದು ಉಗುಳಿದವರು ‘ಕಲಾಕೃತಿ’ ರಚಿಸಿದ್ದಾರೆ. ಇನ್ನು ಬಾಲ್ಕನಿಯ ಕಥೆಯೂ ಅಷ್ಟಕ್ಕಷ್ಟೇ. ಇದರ ಎರಡೂ ಬದಿಯ ಬಾಗಲು– ಕಿಟಕಿಗಳಿಗೆ ಜಡಿದ ಬೀಗಗಳೂ ತುಕ್ಕು ಹಿಡಿದಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.