ADVERTISEMENT

ಪಿಎಸ್‌ಐ ಅಕ್ರಮ: ಮತ್ತೆ ಎಂಟು ಅಭ್ಯರ್ಥಿಗಳ ಬಂಧನ

ದೇವದುರ್ಗದಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಕಲ್ಲಪ್ಪ ಅಲ್ಲಾಪುರ ಸಿಐಡಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 8:29 IST
Last Updated 5 ಆಗಸ್ಟ್ 2022, 8:29 IST
   

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಎಂಟು ಅಭ್ಯರ್ಥಿಗಳನ್ನು ಬಂಧಿಸಿದೆ.

ಹೈದರಾಬಾದ್ ಕರ್ನಾಟಕ ಕೋಟಾದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗೂರ, ನಾಲ್ಕನೇ ರ‍್ಯಾಂಕ್ ಪಡೆದಿದ್ದ, ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೀಶೈಲ ಹಚ್ಚಡ, ಹೈ–ಕ ಕೋಟಾದಲ್ಲಿ 22ನೇ ರ‍್ಯಾಂಕ್ ಪಡೆದಿದ್ದ ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮದ ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್ ಗುಡೂರ ಬಂಧಿತರು.

ಆರೋಪಿ ಸಿದ್ದುಗೌಡ ಪಾಟೀಲ ಪ್ರಕರಣದ ಕಿಂಗ್‌ಪಿನ್‌ ಆರ್.ಡಿ. ಪಾಟೀಲನ ಹೆಂಡತಿಯ ತಮ್ಮ. ಯಾದಗಿರಿ ಜಿಲ್ಲೆ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ.

ADVERTISEMENT
ಬಂಧಿತ ಸಿದ್ದುಗೌಡ ಪಾಟೀಲ‌

ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ, ವೀರೇಂದ್ರಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸ್‌ಐಗಳಾದ ಆನಂದ, ಯಶವಂತ ಹಾಗೂ ಶಿವಪ್ರಸಾದ್ ನೆಲ್ಲೂರ ಅವರನ್ನೊಳಗೊಂಡ ತಂಡವು ಅಭ್ಯರ್ಥಿಗಳನ್ನು ಬಂಧಿಸಿ ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿರುವ ಸಿಐಡಿ ಕ್ಯಾಂಪ್ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ.

ಎಂಟೂ ಅಭ್ಯರ್ಥಿಗಳು ಕಳೆದ ಅಕ್ಟೋಬರ್ 3ರಂದು ನಡೆದ ಪರೀಕ್ಷೆಯಲ್ಲಿ ಪಾಸಾಗಿದ್ದರು. ಹಗರಣದ ಪ್ರಮುಖ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ ಬ್ಲೂಟೂತ್ ಬಳಸಿ ಇವರನ್ನು ಪಾಸ್ ಮಾಡಿಸಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈಗಾಗಲೇ ಬಂಧನದಲ್ಲಿರುವ ಆರೋಪಿಗಳು ನೀಡಿದ ಮಾಹಿತಿ ಆಧರಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಹಲವು ತಿಂಗಳುಗಳಿಂದ ಇವರ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ನಿಖರ ಮಾಹಿತಿ ಸಿಗುತ್ತಿದ್ದಂತೆಯೇ ಇವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಂಧಿತರ ಪೈಕಿ ರವಿರಾಜ, ಪೀರಪ್ಪ ಸಿದ್ನಾಳ ಹಾಗೂ ಶ್ರೀಶೈಲ ಹಚ್ಚಡ ಕಲಬುರಗಿಯ ಶರಣಬಸವೇಶ್ವರ ಕಲಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು. ಸಿದ್ದುಗೌಡ ಪಾಟೀಲ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ. ಸೋಮನಾಥ ಗೋದುತಾಯಿ ಎಂಜಿನಿಯರಿಂಗ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿದ್ದ. ಭಗವಂತರಾಯ ಜೋಗೂರ ಹೊಸ ಆರ್‌ಟಿಒ ಕಚೇರಿ ಬಳಿಯ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. ಮತ್ತೋರ್ವ ಆರೋಪಿ ವಿಜಯಕುಮಾರ್ ಗುಡೂರ ನಗರದ ಎಂ.ಎಸ್‌. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಎಂದು ಮೂಲಗಳು ತಿಳಿಸಿವೆ.

‘ಅಭ್ಯರ್ಥಿಗಳಿಂದ ಆರ್.ಡಿ. ಪಾಟೀಲ ಹಾಗೂ ಸಹವರ್ತಿಗಳು ಎಷ್ಟು ಹಣ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.