
ಕಲಬುರಗಿ: ಇಬ್ಬರು ರೋಗಿಗಳಿಗೆ ಏಕಕಾಲಕ್ಕೆ ಒಂದೇ ವೆಂಟಿಲೇಟರ್‌ನಿಂದ ಆಮ್ಲಜನಕ ಪೂರೈಸುವ ವಿಧಾನ ಆವಿಷ್ಕರಿಸಿ ಗಮನಸೆಳೆದಿದ್ದ ಕಲಬುರಗಿಯ ಎಂಜಿನಿಯರ್, ಎಥೆರಿಯಲ್ ಮಷಿನ್ಸ್ ಸಂಸ್ಥಾಪಕ ಕೌಶಿಕ್ ಮುದ್ದಾ ಅವರಿಗೆ ಗಣರಾಜ್ಯ ದಿನದ (ಜ.26) ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಪತಿ ಆಹ್ವಾನಿಸಿದ್ದಾರೆ.
ಕೌಶಿಕ್ ಅವರಿಗೆ ರಾಷ್ಟ್ರಪತಿ ಕಚೇರಿ ಅಧಿಕೃತವಾಗಿ ಆಹ್ವಾನ ಪತ್ರಿಕೆ ಕಳುಹಿಸಿದೆ. 32 ವರ್ಷದ ಎಂಜಿನಿಯರ್ ಕೌಶಿಕ್ ಅವರು ಬಹುರಾಷ್ಟ್ರೀಯ ಕಂಪನಿಗಳ ಆವಿಷ್ಕಾರಗಳನ್ನು ಹಿಂದಿಕ್ಕಿ ತಮ್ಮ ಆವಿಷ್ಕಾರಕ್ಕೆ ಪ್ರಶಸ್ತಿಯನ್ನು ಪಡೆದಿದ್ದರು.
ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ 2018ರಲ್ಲಿ ಸ್ವತಃ ಕರೆ ಮಾಡಿ ಶ್ಲಾಘಿಸಿದ್ದರು. ಅಲ್ಲದೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹೈದರಾಬಾದ್‌ಗೆ ಭೇಟಿ ನೀಡಿದಾಗ ಮೋದಿ ಅವರು ಟ್ರಂಪ್ ಪುತ್ರಿಗೆ ಕೌಶಿಕ್ ಅವರನ್ನು ಪರಿಚಯಿಸಿದ್ದರು.
ಕೌಶಿಕ್ ತಂದೆ ಕೇದಾರನಾಥ ಮುದ್ದಾ ಅವರು ಕಲಬುರಗಿಯವರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಾಣಿಜ್ಯ ವಿಚಾರಗಳ ಸಲಹೆಗಾರರಾಗಿ ನೇಮಕಗೊಂಡಿದ್ದರು. ಮೊದಲ ಮಗ ಚೇತನ್ ಮುದ್ದಾ ಅಮೆರಿಕದ ವಾಲ್‌ಮಾರ್ಟ್ ಕಂಪನಿಯಲ್ಲಿ ನಿರ್ದೇಶಕರು. ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿರುವ ಕೌಶಿಕ್ ಮುದ್ದಾ ಬೆಂಗಳೂರಿನ ಪೀಣ್ಯದಲ್ಲಿ ‘ಎಥೆರಿಯಲ್ ಮಷಿನ್ಸ್’ ಕಂಪನಿ ಸ್ಥಾಪಿಸಿ ರಕ್ಷಣೆ, ಆರೋಗ್ಯ ಕ್ಷೇತ್ರಗಳಿಗೆ 5ಡಿ ಪ್ರಿಂಟಿಂಗ್ ಯಂತ್ರ ಪೂರೈಸುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿ ಕಾಡಿತ್ತು. ಒಂದೇ ವೆಂಟಿಲೇಟರ್‌ನಲ್ಲಿ ಏಕಕಾಲಕ್ಕೆ ಇಬ್ಬರಿಗೆ ಆಮ್ಲಜನಕ ಪೂರೈಸುವ ‘ಟೂ ವೇ ವೆಂಟಿಲೇಟರ್’ ಸಾಧನವನ್ನು ಆವಿಷ್ಕರಿಸಿ ಸೈ ಎನಿಸಿಕೊಂಡಿದ್ದರು.
‘ಕಲ್ಯಾಣದವರಿಗೆ ಸ್ಫೂರ್ತಿಯಾಗಲಿ...’: ಮಗ ಕೌಶಿಕ್ ಸಾಧನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೇದಾರನಾಥ ಮುದ್ದಾ ಅವರು, ‘ನಿರುದ್ಯೋಗದಿಂದ ತತ್ತರಿಸಿದ ಉತ್ತರ ಕರ್ನಾಟಕದ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಕೊಡುವುದು ಕೌಶಿಕ್ ಗುರಿಯಾಗಿದೆ. ಈಗಾಗಲೇ ತನ್ನ ಕಂಪನಿಯಲ್ಲಿ 500 ಜನರಿಗೆ ಉದ್ಯೋಗ ನೀಡಿದ್ದಾನೆ’ ಎಂದು ಹೇಳಿದರು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಳು ಮಗನನ್ನು ಸಂಪರ್ಕಿಸಿ ಸಿಎನ್‌ಸಿ ಮಷಿನ್‌ಗಳನ್ನು ಪೂರೈಸಲು ಮನವಿ ಸಲ್ಲಿಸಿವೆ. ಮಗನ ಬಗ್ಗೆ ನಮಗೆ ಹೆಮ್ಮೆ ಇದೆ. ಕಲ್ಯಾಣ ಕರ್ನಾಟಕದ ಯುವಕರು ಸ್ಫೂರ್ತಿ ಪಡೆದರೆ ಶ್ರಮ ಸಾರ್ಥಕವಾದಂತೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.