ADVERTISEMENT

ಕೆಬಿಎನ್‌ ಲೀಗ್ ಟಿ–20 ಕ್ರಿಕೆಟ್‌ ಟೂರ್ನಿ: ರೌಜಾ ಸ್ಟಾರ್ಸ್‌ 3ನೇ ಸಲ ಚಾಂಪಿಯನ್‌

ಕೆಬಿಎನ್‌ ಪ್ರೀಮಿಯರ್‌ ಲೀಗ್ ಟಿ–20 ಕ್ರಿಕೆಟ್‌ ಟೂರ್ನಿ 8ನೇ ಆವೃತ್ತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:37 IST
Last Updated 7 ಫೆಬ್ರುವರಿ 2026, 2:37 IST
<div class="paragraphs"><p>ಕೆಬಿಎನ್ ಪ್ರೀಮಿಯರ್‌ ಲೀಗ್‌ ಟಿ–20 ಕ್ರಿಕೆಟ್‌ ಟೂರ್ನಿಯ 8ನೇ ಆವೃತ್ತಿಯ ಚಾಂಪಿಯನ್‌ಗಳಾದ&nbsp;ರೌಝಾ ಸ್ಟಾರ್ಸ್ ತಂಡದ ಆಟಗಾರರಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಟ್ರೋಫಿ ವಿತರಿಸಿದರು. ಕೆಬಿಎನ್‌ ದರ್ಗಾ ಮುಖ್ಯಸ್ಥ ಮುಹಮ್ಮದ್ ಅಲಿ ಅಲ್‌ ಹುಸೇನಿ,&nbsp;ರೌಜಾ ಸ್ಟಾರ್ಸ್‌&nbsp;ಮಾಲೀಕ ಮುಸ್ತಫಾ ಅಲ್ ಹುಸೇನಿ ಸೇರಿದಂತೆ ಅನೇಕರು ಇದ್ದಾರೆ.</p></div>

ಕೆಬಿಎನ್ ಪ್ರೀಮಿಯರ್‌ ಲೀಗ್‌ ಟಿ–20 ಕ್ರಿಕೆಟ್‌ ಟೂರ್ನಿಯ 8ನೇ ಆವೃತ್ತಿಯ ಚಾಂಪಿಯನ್‌ಗಳಾದ ರೌಝಾ ಸ್ಟಾರ್ಸ್ ತಂಡದ ಆಟಗಾರರಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಟ್ರೋಫಿ ವಿತರಿಸಿದರು. ಕೆಬಿಎನ್‌ ದರ್ಗಾ ಮುಖ್ಯಸ್ಥ ಮುಹಮ್ಮದ್ ಅಲಿ ಅಲ್‌ ಹುಸೇನಿ, ರೌಜಾ ಸ್ಟಾರ್ಸ್‌ ಮಾಲೀಕ ಮುಸ್ತಫಾ ಅಲ್ ಹುಸೇನಿ ಸೇರಿದಂತೆ ಅನೇಕರು ಇದ್ದಾರೆ.

   

ಕಲಬುರಗಿ: ನಿರ್ಣಾಯಕ ಹಂತದಲ್ಲಿ ಫೈಜಾನ್‌ ರೈಜ್‌ (ಅಜೇಯ 57 ರನ್‌) ಸಿಡಿಸಿದ ಸ್ಫೋಟಕ ಅರ್ಧ ಶತಕದ ಬಲದಿಂದ ರೌಜಾ ಸ್ಟಾರ್ಸ್‌ ತಂಡವು ಕೆಬಿಎನ್‌ ಪ್ರೀಮಿಯರ್‌ ಲೀಗ್ ಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ 3ನೇ ಬಾರಿಗೆ ಚಾಂಪಿಯನ್‌ ಆಯಿತು.

ನಗರದ ಸಂತ್ರಾಸವಾಡಿಯ ಕೆಬಿಎನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ವರ್ಣರಂಜಿತ ಫೈನಲ್‌ ಪಂದ್ಯದಲ್ಲಿ ಗಂಗಾವತಿ ಲಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದಿತು. ರೌಜಾ ಸಾರ್ಸ್‌ ಟ್ರೋಫಿಗೆ ಮುತ್ತಿಕ್ಕುವ ಜೊತೆಗೆ ₹ 10 ಲಕ್ಷ ಬಹುಮಾನವನ್ನೂ ಬಾಚಿತು. ರನ್ನರ್ಸ್‌ ಅಪ್‌ ಆದ ಗಂಗಾವತಿ ಲಯನ್ಸ್ ತಂಡವು ₹ 5 ಲಕ್ಷ ಬಹುಮಾನ ಹಾಗೂ ಟ್ರೋಫಿ ಪಡೆಯಿತು.

ADVERTISEMENT

ಈ ಹಿಂದೆ 2019 ಹಾಗೂ 2023ರಲ್ಲೂ ರೌಜಾ ಸ್ಟಾರ್ಸ್‌ ತಂಡ ಕೆಬಿಎನ್‌ ಟಿ–20 ಟೂರ್ನಿಯ ಚಾಂಪಿಯನ್ಸ್‌ ಎನಿಸಿತ್ತು.

ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಗಂಗಾವತಿ ಲಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 224 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. 225 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರೌಜಾ ಸ್ಟಾರ್ಸ್‌ ತಂಡವು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 228 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಟೂರ್ನಿಯ ಮೊದಲ ಕ್ವಾಲಿಫೈಯರ್‌ನಲ್ಲಿ ರೌಜಾ ಸ್ಟಾರ್ಸ್‌ ವಿರುದ್ಧ 21 ರನ್‌ಗಳಿಂದ ಸೋತಿದ್ದ ಗಂಗಾವತಿ ಲಯನ್ಸ್, 2ನೇ ಕ್ವಾಲಿಫೈಯರ್‌ನಲ್ಲಿ ಮಾರ್ಕೆಟ್‌ ಸೂಪರ್‌ ಕಿಂಗ್ಸ್‌ ತಂಡವನ್ನು 34 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು.

1ನೇ ಕ್ವಾಲಿಫೈಯರ್‌ನಲ್ಲಿ ಎದುರಾದ ಸೋಲು ತೀರಿಸಿಕೊಳ್ಳಲು ಫೈನಲ್‌ನಲ್ಲಿ 224 ರನ್‌ಗಳ ಬೃಹತ್‌ ಮೊತ್ತವನ್ನೂ ಕಲೆಹಾಕಿತ್ತು. ಟೂರ್ನಿಯ 19ನೇ ಓವರ್‌ ತನಕವೂ ಗಂಗಾವತಿ ಲಯನ್ಸ್ ತಂಡವೇ ಚಾಂಪಿಯನ್‌ ಆಗುವ ನಿರೀಕ್ಷೆಯಿತ್ತು. ಅಂತಿಮ ಓವರ್‌ನಲ್ಲಿ ರೌಜಾ ಸಾರ್ಸ್‌ಗೆ ಗೆಲುವಿಗೆ 17 ರನ್‌ಗಳು ಬೇಕಿದ್ದವು.

ನಿರ್ಣಾಯಕ ಓವರ್‌ನಲ್ಲಿ ಗಂಗಾವತಿ ಲಯನ್ಸ್‌ ತಂಡದ ನಾಯಕ ಶಿವರಾಜ ಅವರು ಆದಿತ್ಯ ಮಣಿ ಕೈಗೆ ಚೆಂಡು ಕೊಟ್ಟರು. ಮೊದಲ ಕ್ವಾಲಿಫೈಯರ್‌ನಲ್ಲೇ ಗೆದ್ದು ಫೈನಲ್‌ ಪ್ರವೇಶಿಸಿದ ಅಚಲ ವಿಶ್ವಾಸದಲ್ಲಿದ್ದ ರೌಜಾ ಸ್ಟಾರ್ಸ್‌ನ ಫೈಜಾನ್‌ ರೈಜ್‌ 20ನೇ ಓವರ್‌ನಲ್ಲಿ ಪಾರಮ್ಯ ಮೆರೆದರು. ಒಂದು ಸಿಕ್ಸರ್‌, 3 ಮೂರು ಬೌಂಡರಿ ಸಹಿತ 20 ರನ್‌ ಬಾರಿಸಿ ಗೆಲುವಿನ ತೋರಣ ಕಟ್ಟಿದರು.

ಕೆಬಿಎನ್‌ ದರ್ಗಾದ ಮುಖ್ಯಸ್ಥ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ಟೂರ್ನಿಯ ವಿವಿಧ ತಂಡಗಳ ಮಾಲೀಕರು, ಅಧಿಕಾರಿಗಳು, ವಿವಿಧ ಸಮಿತಿಗಳ ಪ್ರತಿನಿಧಿಗಳು, ಮೈದಾನ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಫ್ಲಡ್ ಲೈಟ್ ನಿರ್ವಹಣಾ ಸಿಬ್ಬಂದಿ, ಐಟಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.