ADVERTISEMENT

ಕ.ಕ. ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರ: ದತ್ತಾತ್ರೇಯ ಪಾಟೀಲ

ಕೆಲವೇ ದಿನಗಳಲ್ಲಿ ಲಾಂಛನ ಬಿಡುಗಡೆ; ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 10:49 IST
Last Updated 19 ಜುಲೈ 2022, 10:49 IST
ದತ್ತಾತ್ರೇಯ ಪಾಟೀಲ
ದತ್ತಾತ್ರೇಯ ಪಾಟೀಲ   

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ಮಂಡಳಿಯಿಂದ ಮಂಡಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಮಂಡಳಿಯ ಅಧ್ಯಕ್ಷರು ಆದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಉತ್ಸವದ ಲಾಂಛನ ಬಿಡುಗಡೆ ಮಾಡಿಸಲಾಗುವುದು’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ದೊರೆತ ಒಂದು ವರ್ಷ ಒಂದು ತಿಂಗಳ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ದೊರೆತಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ದೇಶಭಕ್ತಿ ಬಿಂಬಿಸಲು ಗ್ರಾಮ, ತಾಲ್ಲೂಕು, ಜಿಲ್ಲೆ ಹಾಗೂ ವಿಭಾಗವಾರು ಕ್ರೀಡೆ, ಪ್ರಬಂಧ, ಆರೋಗ್ಯ ಮೇಳ ಹೀಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಎಲ್ಲಾ ಜಿಲ್ಲೆಗಳಿಂದ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರಸ್ತಾವನೆ ಪಡೆದು ಅದಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಡಿಡಿಪಿಐ, ಆರೋಗ್ಯ, ಕ್ರೀಡಾ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್ 11ರಿಂದ 17ರ ವರೆಗೆ ಹಮ್ಮಿಕೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಅಭಿಯಾನ ಸೆಪ್ಟೆಂಬರ್ 17ರವರೆಗೆ ಮುಂದುವರೆಸುವ ಕುರಿತಂತೆಯೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 60 ಎಕರೆ ಪ್ರದೇಶದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮುಚ್ಚಯ, ಮ್ಯೂಸಿಯಂ, ಬೃಹತ್ ಸಭಾಂಗಣ, ಕಣ್ಣಿ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆ, ಸೇಡಂ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಲಾಗುತ್ತಿದೆ. ಇವುಗಳಿಗೆ ಶೀಘ್ರ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

1500 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ: ಪ್ರಸಕ್ತ 2022–23ನೇ ಸಾಲಿಗೆ ಮುಖ್ಯಮಂತ್ರಿ ಅವರು ಏಪ್ರಿಲ್‍ನಲ್ಲಿಯೇ ₹ 1,500 ಕೋಟಿ ಮೈಕ್ರೊ ನಿಧಿಯ ಕ್ರಿಯಾ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದರಿಂದ, ಕೆಲಸ ಆರಂಭಿಸಲಾಗಿದೆ. ಉಳಿದಂತೆ ಮ್ಯಾಕ್ರೊ ನಿಧಿಯ ₹ 1,500 ಕೋಟಿ ಕ್ರಿಯಾ ಯೋಜನೆಗೆ ಶೀಘ್ರವೇ ಒಪ್ಪಿಗೆ ಪಡೆಯಲಾಗುವುದು. ಪ್ರಸಕ್ತ ವರ್ಷದ ಮೊದಲನೇ ಕಂತಿನ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ’ ಎಂದರು.

ತಾರತಮ್ಯ ಮಾಡಿಲ್ಲ: ಕೆಕೆಆರ್‌ಡಿಬಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ದತ್ತಾತ್ರೇಯ ಪಾಟೀಲ ರೇವೂರ ಅವರು, ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಂತೆ ಆಯಾ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ. ಮಂಡಳಿಯಿಂದ ಯಾವುದೇ ಕಾಮಗಾರಿಗೆ ನೇರವಾಗಿ ಟೆಂಡರ್ ಕರೆದಿಲ್ಲ. ಇಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಲಬುರಗಿ ವಿಮಾನ ನಿಲ್ದಾಣ, ಜಯದೇವ ಹೃದ್ರೋಗ ಆಸ್ಪತ್ರೆಗೆ, ರಾಯಚೂರು ವಿಮಾನ ನಿಲ್ದಾಣಕ್ಕೆ ಮಂಡಳಿಯಿಂದ ನೀಡಲಾದ ಅನುದಾನ ನೀಡಿದೆ. ಅವುಗಳನ್ನು ಎಲ್ಲರೂ ಬಳಸುತ್ತಾರೆ. ಬೃಹತ್ ಕಾಮಗಾರಿಗಳಿಗೆ ಮಂಡಳಿ ಅನುದಾನವನ್ನು ಮುಂದೆಯೂ ನೀಡಲಿದೆ’ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಇದ್ದರು.

‘ಶೇ 97ರಷ್ಟು ಸಾಧನೆ’
371 (ಜೆ) ಅನ್ವಯ ರಚನೆಗೊಂಡ ಮಂಡಳಿಗೆ 2013–14ನೇ ಸಾಲಿನಿಂದ 2022–23ನೇ ಸಾಲಿನವರೆಗೆ ಬಿಡುಗಡೆಯಾದ ₹ 7,328 ಕೋಟಿ ಮೊತ್ತದಲ್ಲಿ ₹ 7,107 ಕೋಟಿ ಖರ್ಚು ಮಾಡುವ ಮೂಲಕ ಶೇ 97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

‘ಪ್ರಸಕ್ತ ವರ್ಷದಿಂದ ₹ 3 ಸಾವಿರ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಅವರು ಘೋಷಿಸಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಲು ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಅಗತ್ಯವಾಗಿದೆ. ಇತ್ತೀಚೆಗೆ ನಡೆದ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಸಾಂಖ್ಯಿಕ ಹಾಗೂ ತೋಟಗಾರಿಕೆ ಸಚಿವ ಮುನಿರತ್ನ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.