ADVERTISEMENT

ಕಲಬುರಗಿ: ಸಂಚಾರಕ್ಕೆ ಪ್ರಯಾಣಿಕರ ಪರದಾಟ

ಕೆಕೆಆರ್‌ಟಿಸಿ ಸಾರಿಗೆ ನೌಕರರ ಮುಷ್ಕರ: ಬಹುತೇಕ ಬಸ್‌ಗಳ ಸಂಚಾರ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:28 IST
Last Updated 6 ಆಗಸ್ಟ್ 2025, 5:28 IST
ಸಾರಿಗೆ ನೌಕರರ ಮುಷ್ಕರದ ಪರಿಣಾಮ ಕಲಬುರಗಿಯ ಬಸ್ ಡಿಪೊವೊಂದರಲ್ಲಿ ಮಂಗಳವಾರ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು  –ಪ್ರಜಾವಾಣಿ ಚಿತ್ರ
ಸಾರಿಗೆ ನೌಕರರ ಮುಷ್ಕರದ ಪರಿಣಾಮ ಕಲಬುರಗಿಯ ಬಸ್ ಡಿಪೊವೊಂದರಲ್ಲಿ ಮಂಗಳವಾರ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು  –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಅಜ್ಜ ಸತ್ತ ವಿಷಯ ಬೆಳಿಗ್ಗೆ ಫೋನ್‌ ಮಾಡಿ ಮನೆಯವರು ಹೇಳಿದರು. ಊರಿಗೆ ಹೋಗೋಣ ಎಂದು ಬಂದರೆ, ಬಸ್‌ ನಿಲ್ದಾಣದಲ್ಲಿ ಬಸ್‌ಗಳೇ ಇಲ್ಲ. ನಮ್ಮ ಮುತ್ಯಾನ ಅಂತ್ಯಸಂಸ್ಕಾರಕ್ಕೆ ಹೇಗೆ ಹೋಗುವುದೋ ತಿಳಿಯುತ್ತಿಲ್ಲ...’

ಇದು ಕಲಬುರಗಿಯಲ್ಲಿ ನೀಟ್‌ ಕೋಚಿಂಗ್‌ ಪಡೆಯುತ್ತಿರುವ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ವಿದ್ಯಾರ್ಥಿ ಅರವಿಂದ ಅಸಹಾಯಕತೆ ವ್ಯಕ್ತಪಡಿಸಿದ ಬಗೆ.

ಲಗುಬಗೆಯಿಂದ ಮಂಗಳವಾರ ಬೆಳಿಗ್ಗೆ 7 ಗಂಟೆಗೇ ಕೇಂದ್ರ ಬಸ್‌ ನಿಲ್ದಾಣಕ್ಕೆ ಧಾವಿಸಿದ್ದ ಅರವಿಂದ, ಗುರುಮಠಕಲ್‌ಗೆ ಹೋಗಲು ಯಾದಗಿರಿ ಬಸ್‌ ಏರಬೇಕಿತ್ತು. ಆದರೆ, ಸಾರಿಗೆ ನೌಕರರ ಮುಷ್ಕರದ ಪರಿಣಾಮ ಬಸ್‌ ನಿಲ್ದಾಣದಲ್ಲಿ ಯಾದಗಿರಿ ಬಸ್‌ ಇರಲಿಲ್ಲ. ಇದರಿಂದ ಮತ್ತಷ್ಟು ಚಿಂತಾಕ್ರಾಂತನಾದ ಅರವಿಂದ ‘ರೈಲ್ವೆಯಾದರೂ ಇದೆಯೋ ನೋಡ್ತೀನಿ’ ಎಂದು ಆಟೊ ಹಿಡಿಯಲು ಧಾವಿಸಿ ಹೋದರು.

ADVERTISEMENT

ನಿತ್ಯ ನೂರಾರು ಬಸ್‌ಗಳ ಓಡಾಟ, ಸಾವಿರಾರು ಪ್ರಯಾಣಿಕರಿಂದ ತುಂಬಿ ತುಳುಕುವ ಕೇಂದ್ರ‌ ಬಸ್‌ ನಿಲ್ದಾಣವು ಸಾರಿಗೆ ನೌಕರರ ಮುಷ್ಕರದಿಂದ ಮಂಗಳವಾರ ಬಹುತೇಕ ಭಣಗುಟ್ಟಿತು. ಬೆರಳೆಣಿಕೆಯ ಬಸ್‌ಗಳು, ಕೆಲವೇ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿ ಓಡಾಡಿದರು.

ಮುಷ್ಕರದ ಅರಿವು ಇಲ್ಲದೇ ನೂರಾರು ಮಂದಿ ಬೆಳಿಗ್ಗೆಯೇ ದೂರದ ಊರುಗಳಿಗೆ ಹೋಗಲು ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಎಂದಿನಂತೆ ಬಸ್‌ಗಳು ಇರಲಿಲ್ಲ. ಆಗೊಂದು, ಈಗೊಂದು ಬಸ್‌ ಸಂಚರಿಸಿದ್ದು ಬಿಟ್ಟರೇ ಬಹುತೇಕ ಬಸ್‌ಗಳು ಡಿಪೊಗಳನ್ನು ಬಿಟ್ಟು ಕದಲಿಲ್ಲ. ಇದರಿಂದ ಸರ್ಕಾರಿ–ಖಾಸಗಿ ಸಂಸ್ಥೆಗಳ ನೌಕರರು, ಕಾರ್ಮಿಕರು, ವ್ಯಾಪಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ನಿತ್ಯದ ಕೆಲಸಗಳಿಗೆ ಸಂಚರಿಸುವವರು ಪರದಾಡಿದರು. ಹಲವರು ಖಾಸಗಿ ವಾಹನಗಳ ಮೊರೆ ಹೋದರು.

ಪ್ರಯಾಣಿಕ ಆಕಾಶ ಅವರು ಬೆಂಗಳೂರಿನಿಂದ ಕಲಬುರಗಿಗೆ ಕುಟುಂಬ ಸಮೇತರಾಗಿ ಬಸ್‌ನಲ್ಲೇ ಬಂದಿಳಿದಿದ್ದರೂ, ಕಮಲಾಪುರಕ್ಕೆ ಹೋಗಲು ಬಸ್‌ ಸಿಗದೇ ಪರದಾಡಿದರು. ‘ಕಮಲಾಪುರಕ್ಕೆ ಹೋಗಬೇಕು. ಎರಡು ತಾಸಿನಿಂದ ಕಾದರೂ ಬಸ್ಸೇ ಬರುತ್ತಿಲ್ಲ. ಬಸ್ ಮುಷ್ಕರದ ಬಗೆಗೆ ತಿಳಿದಿರಲಿಲ್ಲ. ಖಾಸಗಿ‌ ವಾಹನವೋ ಆಟೊನೋ ಸಿಗುತ್ತಾ ನೋಡ್ತೀನಿ’ ಎನ್ನುತ್ತ ಪರ್ಯಾಯ ವ್ಯವಸ್ಥೆ ಅರಸಿ ಬಸ್‌ ನಿಲ್ದಾಣದಿಂದ ಹೊರ ಹೋದರು.

ಖಾಸಗಿ ವಾಹನಗಳ ಭರಾಟೆ: ಸಾರಿಗೆ ಬಸ್‌ಗಳು ಸೇವೆಯಲ್ಲಿ ವ್ಯತ್ಯಯವಾದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್‌ಗಳು, ಕ್ರೂಸರ್‌ ಸೇರಿದಂತೆ ವಿವಿಧ ವಾಹನಗಳನ್ನು ಬಸ್‌ ನಿಲ್ದಾಣದಿಂದ ಸಂಚರಿಸಲು ಅವಕಾಶ ನೀಡಿ, ಪ್ರಯಾಣಿಕರಿಗೆ ನೆರವಾದರು.

ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳ ನಿಗಾದಲ್ಲಿ ಖಾಸಗಿ ವಾಹನಗಳು ಕೇಂದ್ರ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಿದವು.

‘ಬೆಳಿಗ್ಗೆಯಿಂದ ಸಂಜೆ 4 ಗಂಟೆ ತನಕ ಕೇಂದ್ರ ಬಸ್‌ ನಿಲ್ದಾಣ ಸೇರಿದಂತೆ ಜಿಲ್ಲೆಯ ವಿವಿಧ ಡಿಪೊಗಳ ವ್ಯಾಪ್ತಿಯ 617 ಬಸ್‌ಗಳು ಸಂಚರಿಸಬೇಕಿತ್ತು. ಈ ಅವಧಿಯಲ್ಲಿ 150 ಬಸ್‌ಗಳು ಓಡಾಟ ನಡೆಸಿವೆ. ಕೇಂದ್ರ ಬಸ್‌ ನಿಲ್ದಾಣ ಹಾಗೂ ಇತರೆಡೆ 30ಕ್ಕೂ ಹೆಚ್ಚು ಖಾಸಗಿ ಬಸ್‌, ಹತ್ತಾರು ಕ್ರೂಸರ್ ವಾಹನಗಳು ಸೇರಿದಂತೆ 390ಕ್ಕೂ ಅಧಿಕ ಖಾಸಗಿ ವಾಹನಗಳು ಕಾರ್ಯಾಚರಣೆ ನಡೆಸಿವೆ’ ಎಂದು ಕೆಕೆಆರ್‌ಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್‌: ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ವಿವಿಧ ಬಸ್‌ ನಿಲ್ದಾಣ, ಡಿಪೊಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕೆಕೆಆರ್‌ಟಿಸಿ ಬಸ್‌ ಸೇವೆಯಲ್ಲಿ ವ್ಯತ್ಯಯವಾದ್ದರಿಂದ ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದ ಖಾಸಗಿ ಬಸ್‌ ಹತ್ತಿದ ಪ್ರಯಾಣಿಕರು  –ಪ್ರಜಾವಾಣಿ ಚಿತ್ರ
ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು–ಕಾದು ಸುಸ್ತಾದ ಪ್ರಯಾಣಿಕರೊಬ್ಬರು ದಾಹ ತೀರಿಸಿಕೊಂಡರು          ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್‌
ಖಾಸಗಿ ಬಸ್‌ಗಳನ್ನು ಅವಲಂಬಿಸಿದ ಜನ | ಡಿಪೊ ಬಿಟ್ಟು ಕದಲದ ಬಹುತೇಕ ಬಸ್‌ | ಬಸ್‌ ಸಂಚಾರಕ್ಕೆ ಗುತ್ತಿಗೆ ನೌಕರರ ಬಳಕೆ

‘ಶೇ 30ರಷ್ಟು ಬಸ್‌ಗಳ ಓಡಾಟ’

‘ಕೆಕೆಆರ್‌ಟಿಸಿ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರದ ಪರಿಣಾಮ ಮಂಗಳವಾರ ಒಟ್ಟು ಸಂಜೆ 4 ಗಂಟೆ ತನಕ ಶೇ 30ರಷ್ಟು ಬಸ್‌ಗಳು ಮಾತ್ರವೇ ಒಡಾಡಿವೆ. ನಿತ್ಯ ಬೆಳಿಗ್ಗೆಯಿಂದ ಸಂಜೆ 4 ಗಂಟೆ ತನಕ 2928 ಬಸ್‌ಗಳು ಸಂಚರಿಸುತ್ತಿದ್ದವು. ಮಂಗಳವಾರ 900 ಬಸ್‌ಗಳು ಮಾತ್ರವೇ ಸಂಚರಿಸಿವೆ. ಇದರೊಂದಿಗೆ 1400ರಷ್ಟು ಖಾಸಗಿ ವಾಹನಗಳೂ ಪ್ರಯಾಣಿಕರಿಗೆ ಸೇವೆ ಒದಗಿಸಿವೆ’ ಎಂದು ಕೆಕೆಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.