
ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅರುಣಕುಮಾರ್ ಎಂ.ವೈ.ಪಾಟೀಲ ಪದಗ್ರಹಣ ಮಾಡಿದರು.
ಕಲಬುರಗಿ: ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಥಾಪನೆಯಾಗಿ 25 ವರ್ಷಗಳು ತುಂಬಿದ್ದು, ಡಿಸೆಂಬರ್ ತಿಂಗಳ 1 ಅಥವಾ 5ರಂದು ರಜತ ಮಹೋತ್ಸವ ಆಚರಿಸಲಾಗುವುದು’ ಎಂದು ಕೆಕೆಆರ್‌ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
‘ಕೆಎಸ್‌ಆರ್‌ಟಿಸಿಯಿಂದ 2000ನೇ ಇಸ್ವಿಯಲ್ಲಿ ಬೇರ್ಪಡಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಥಾಪಿಸಲಾಗಿತ್ತು. 2021ರಲ್ಲಿ ಅದನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಮರು ನಾಮಕರಣ ಮಾಡಲಾಗಿತು’ ಎಂದರು.
‘ಸದ್ಯ ಕೆಕೆಆರ್‌ಟಿಸಿಯಲ್ಲಿ 9 ವಿಭಾಗ, 53 ಘಟಕಗಳು ಹಾಗೂ 165 ಬಸ್ ನಿಲ್ದಾಣಗಳು, ಎರಡು ತರಬೇತಿ ಕೇಂದ್ರಗಳು, ಒಂದು ಪ್ರಾದೇಶಿಕ ವರ್ಕ್‌ಶಾಪ್, 9 ವಿಭಾಗೀಯ ವರ್ಕ್‌ಶಾಪ್‌ಗಳನ್ನು ಒಳಗೊಂಡಿದೆ. ನಿಗಮದಲ್ಲಿ ಸದ್ಯ 19,383 ಕಾಯಂ ಹಾಗೂ 1,592 ಗುತ್ತಿಗೆ ಆಧಾರಿತ ನೌಕರರಿದ್ದಾರೆ’ ಎಂದರು.
‘ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸದ್ಯ 750 ಹೊಸ ಬಸ್‌ಗಳ ಅಗತ್ಯವಿದೆ. ಬಜೆಟ್‌ನಲ್ಲಿ 400 ಬಸ್‌ಗಳನ್ನು ಕೆಕೆಆರ್‌ಡಿಬಿ ಅನುದಾನ ಹಾಗೂ 350 ಬಸ್‌ಗಳನ್ನು ನಿಗಮದಿಂದ ಖರೀದಿಸಲು ಸಿದ್ಧತೆ ನಡೆದಿದೆ’ ಎಂದರು.
‘ನಿಗಮದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಕೆಕೆಆರ್‌ಟಿಸಿಯ ಹಳೇ ಕಟ್ಟಡ ಇರುವ ಸ್ಥಳದಲ್ಲಿ ₹ 20 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಸಂಪುಟದ ಅನುಮೋದನೆ ಸಿಗಬೇಕಿದೆ’ ಎಂದರು.
‘ಕಲಬುರಗಿ ಕಂದಾಯ ವಿಭಾಗ. ಈ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಲಬುರಗಿಯ ನಾಲ್ಕು ಕಡೆ ಸ್ಯಾಟಲೈಟ್ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ರೂಪರೇಷೆ ಸಿದ್ಧಪಡಿಸಲಾಗಿದೆ’ ಎಂದರು.
ಅಧಿಕಾರ ವಹಿಸಿಕೊಂಡ ಬಳಿಕ ಕೆಕೆಆರ್‌ಟಿಸಿಯ ರಜತ ಮಹೋತ್ಸವದ ‘ಲೋಗೊ’ವನ್ನು ಗಣ್ಯರು ಅನಾವರಣಗೊಳಿಸಿದರು.
ಅರುಣಕುಮಾರ ಪಾಟೀಲ ಪದಗ್ರಹಣ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಅರುಣಕುಮಾರ ಎಂ. ಪಾಟೀಲ ಶುಕ್ರವಾರ ಪದಗ್ರಹಣ ಮಾಡಿದರು. ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶಾಸಕರಾದ ಅಲ್ಲಮಪ್ರಭು ಪಾಟೀಲ ಹಾಗೂ ಎಂ.ವೈ.ಪಾಟೀಲ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಹಲವರು ಅವರಿಗೆ ಶಾಲು ಹೊದಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು. ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್ ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಸೇರಿದಂತೆ ಹಲವು ಅಧಿಕಾರಿಗಳು ಮುಖಂಡರು ಪಾಲ್ಗೊಂಡಿದ್ದರು.
ಅಭಿನಂದನೆಗೆ ನೂಕುನುಗ್ಗಲು
ಅರುಣಕುಮಾರ ಪಾಟೀಲರ ಪದಗ್ರಹಣದ ವೇಳೆ ಅಭಿನಂದನೆ ತಿಳಿಸಲು ಮುಖಂಡರು ಕಾರ್ಯಕರ್ತರು ಸೇರಿದಂತೆ ನೂರಾರು ಜನರ ದಂಡೇ ಧಾವಿಸಿತು. ಇದರಿಂದ ಅವರು ಅಧಿಕಾರ ವಹಿಸಿಕೊಳ್ಳುವ ಕೊಠಡಿಯಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಇದರಿಂದ ಐಎಎಸ್ ದರ್ಜೆಯ ಅಧಿಕಾರಿಗಳು ಆಹ್ವಾನಿತ ಗಣ್ಯರು ಮಾಧ್ಯಮದವರು ಅವರ ಕೊಠಡಿಗೆ ತೆರಳಲು ಹರಸಾಹಸ ಪಡಬೇಕಾಯಿತು. ನೂಕಾಟ–ತಳ್ಳಾಟವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.