ADVERTISEMENT

ಕಲಬುರಗಿ: ಮೃತ ನೌಕರರ ವಾರಸುದಾರರಿಗೆ ₹ 2.30 ಕೋಟಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:26 IST
Last Updated 17 ಫೆಬ್ರುವರಿ 2026, 4:26 IST
ಕಲಬುರಗಿಯ ಕೆಕೆಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮೃತ ಸಿಬ್ಬಂದಿಯ ವಾರಸುದಾರರಿಗೆ ಅಧ್ಯಕ್ಷ ಅರುಣಕುಮಾರ್ ಪಾಟೀಲ ಅವರು ಪರಿಹಾರದ ಚೆಕ್ ವಿತರಿಸಿದರು. ಡಾ.ಬಿ.ಸುಶೀಲಾ, ಸಿದ್ದಪ್ಪ ಗಂಗಾಧರ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು
ಕಲಬುರಗಿಯ ಕೆಕೆಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮೃತ ಸಿಬ್ಬಂದಿಯ ವಾರಸುದಾರರಿಗೆ ಅಧ್ಯಕ್ಷ ಅರುಣಕುಮಾರ್ ಪಾಟೀಲ ಅವರು ಪರಿಹಾರದ ಚೆಕ್ ವಿತರಿಸಿದರು. ಡಾ.ಬಿ.ಸುಶೀಲಾ, ಸಿದ್ದಪ್ಪ ಗಂಗಾಧರ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು   

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ನಿಧನ ಹೊಂದಿದ ನೌಕರರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೋಮವಾರ ಆಂತರಿಕ ಗುಂಪು ವಿಮೆ ಯೋಜನೆಯಡಿ ಸಹಾಯಧನ ಪರಿಹಾರದ ಚೆಕ್ ವಿತರಿಸಲಾಯಿತು.

ನಗರದ ಕೆಕೆಆರ್‌ಟಿಸಿ ಪ್ರಧಾನ ಕಚೇರಿಯಲ್ಲಿ ನಿಗಮದ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ ಸುಶೀಲಾ ಅವರು ಮೃತ ನೌಕರರ 23 ವಾರಸುದಾರರಿಗೆ ತಲಾ ₹ 10 ಲಕ್ಷದಂತೆ ₹ 2.30 ಕೋಟಿ ಮೊತ್ತದ ಪರಿಹಾರದ ಚೆಕ್‌ಗಳನ್ನು ಹಸ್ತಾಂತರಿಸಿದರು.

ಸಾರಿಗೆ ನಿಗಮದ ವ್ಯಾಪ್ತಿಯ ಕಲಬುರಗಿ ವಿಭಾಗ–1 ಹಾಗೂ ವಿಭಾಗ–2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರ ಪೈಕಿ ಇತ್ತೀಚೆಗೆ ನಿಧನರಾದ ಚೆನ್ನಮಲ್ಲಪ್ಪ ಅವರ ಪತ್ನಿ ಶೋಭಾ, ಬಾಬು ಪತ್ನಿ ಶಾಂತಾಬಾಯಿ, ವೀರಭದ್ರಯ್ಯ ಪತ್ನಿ ತನುಜಾ, ಪ್ರದೀಪಕುಮಾರ್ ಪತ್ನಿ ಜ್ಯೋತಿ, ಶರಣು ಪತ್ನಿ ಶಾಂತಾಬಾಯಿ, ತಾಯಿ ಸಾವಿತ್ರಿ ಹಾಗೂ ಮಗಳು ಭಾಗ್ಯಲಕ್ಷ್ಮಿ, ಸಿದ್ದೇಶ್ವರ ಅವರ ಅಣ್ಣಂದಿರಾದ ಹಣಮಂತ, ಅಶೋಕ್ ಹಾಗೂ ತಂಗಿ ಭಾರತಿ, ಜಗನ್ನಾಥ ಪತ್ನಿ, ದಯಾನಂದ ಪತ್ನಿ ಮಹಾನಂದಾ, ಚಂದ್ರಕಾಂತ ಅವರ ಪತ್ನಿ ರಾಜೇಶ್ವರಿ, ಮಲ್ಲಪ್ಪ ಪತ್ನಿ ಗುರುಬಾಯಿ, ಮಹಾದೇವಪ್ಪ ಪತ್ನಿ ಲಲಿತಾ ಕುಮಾರಿ, ಮಾಹಾರುದ್ರ ಪತ್ನಿ ಪವಿತ್ರಾಬಾಯಿ, ಗೋಪಾಲ್ ಪತ್ನಿ ಲಕ್ಮಿ ಅವರು ಸೇರಿ ವಿಜಯಪುರ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೀದರ್ ಹಾಗೂ ಯಾದಗಿರಿ ವಿಭಾಗಗಳ ಒಟ್ಟು 23 ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅರುಣಕುಮಾರ್ ಪಾಟೀಲ, ‘ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ನೌಕರರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಕುಟುಂಬ ನಡೆಸುತ್ತಿದ್ದ ಆಧಾರವನ್ನೇ ಕಳೆದುಕೊಂಡ ಕುಟುಂಬಕ್ಕೆ ಪರಿಹಾರದ ಚೆಕ್ ದೊಡ್ಡದಲ್ಲ. ಅವರ ಕುಟುಂಬದವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ವಿಮಾ ಯೋಜನೆಯ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದರು.

ಕೆಕೆಆರ್‌ಟಿಸಿ ಹಿರಿಯ ಅಧಿಕಾರಿಗಳಾದ ಸುನೀಲಕುಮಾರ್ ಚಂಡ್ರಿಕಿ, ಸಿದ್ದಪ್ಪ ಗಂಗಾಧರ, ಸಂತೋಷ್ ಗೊಗೇರಿ, ಚಂದ್ರಕಾಂತ ಪುಲಾರೆ, ಬಸವರಾಜ ಬೆಳಗಾವಿ, ಜಗದೀಶ, ಬೋರಯ್ಯ, ಮಹಿಪಾಲ್ ಬೇಗಾರ್ ಸೇರಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ನಿಧನರಾದ ಸಿಬ್ಬಂದಿಯ ಕುಟುಂಬಗಳಿಗೆ ಹಿಂದೆ ಆಂತರಿಕ ಗುಂಪು ವಿಮೆ ಯೋಜನೆಯಡಿ ₹ 10 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಅದನ್ನು ₹ 12.50 ಲಕ್ಷಕ್ಕೆ ಏರಿಸಲಾಗಿದೆ. ಫೆಬ್ರವರಿ 1ರಿಂದ ಈ ನಿಯಮ ಅನ್ವಯ ಆಗಿದೆ
ಡಾ.ಸುಶೀಲಾ ಬಿ ವ್ಯವಸ್ಥಾಪ ನಿರ್ದೇಶಕಿ ಕೆಕೆಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.