ಕಲಬುರಗಿ: ‘ಭಾರತವು ಜಗತ್ತಿನಲ್ಲಿ ನಂಬರ್ 1 ಸ್ಥಾನಕ್ಕೆ ಏರಬೇಕಾದರೆ ಜ್ಞಾನಕ್ಕೆ ಅಗ್ರಸ್ಥಾನ ಕೊಡುವುದು ಅನಿವಾರ್ಯ. ದೇಶವು ವಿಶ್ವ ನಾಯಕತ್ವದ ಚುಕ್ಕಾಣಿ ಹಿಡಿಯಬೇಕಾದರೆ ನಾವು ಜ್ಞಾನಾಧಾರಿತ ಸಮಾಜ ನಿರ್ಮಿಸಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
2024–25 ಹಾಗೂ 2025–26ನೇ ಸಾಲಿನ ಕೆಕೆಆರ್‌ಡಿಬಿಯ ಮ್ಯಾಕ್ರೊ ಯೋಜನೆಯಡಿ ನವೀಕರಿಸಲಾದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ಹಾಗೂ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಬಂಡವಾಳ ಆಕರ್ಷಿಸಲು ಬರೀ ಆರ್ಥಿಕ ನೀತಿಗಳ ಅಡಿಪಾಯ ಸಾಲದು. ನಾವು ಜ್ಞಾನ ಆಧಾರಿತ ಆರ್ಥಿಕತೆಯಾಗಿ ಅಭಿವೃದ್ಧಿಯಾಗುವುದು ಅಗತ್ಯ. ಶಿಕ್ಷಕರಿಲ್ಲದೇ ಜ್ಞಾನಕ್ಕೆ ಅಗ್ರಸ್ಥಾನ ನೀಡಲಾಗದು. ಶಿಕ್ಷಕರಿಲ್ಲದಿದ್ದರೆ ಪ್ರಬುದ್ಧ ಸಮಾಜ, ಸಮೃದ್ಧ ರಾಜ್ಯ–ದೇಶ ನಿರ್ಮಾಣವಾಗಲ್ಲ. ವಿಶ್ವಗುರುವಂತೂ ಆಗಲು ಸಾಧ್ಯವೇ ಇಲ್ಲ’ ಎಂದು ಪ್ರತಿಪಾದಿಸಿದರು.
‘ಸಾಮಾಜಿಕ ವ್ಯವಸ್ಥೆಯಲ್ಲಿ ಅತಿಹೆಚ್ಚು ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ರಾಜಕಾರಣಿಗಳಿಗೆ ನೀತಿ ರೂಪಿಸುವ ಶಕ್ತಿ, ಅಧಿಕಾರಿಗಳಿಗೆ ಅದನ್ನು ಅನುಷ್ಠಾನ ಮಾಡುವ ಶಕ್ತಿಯಿದೆ. ಆದರೆ, ಇಡೀ ಪೀಳಿಗೆಗೆ ಆಲೋಚನೆ ನೀಡುವ ಶಕ್ತಿ ಶಿಕ್ಷಕರಲ್ಲಿ ಮಾತ್ರವಿದೆ. ಪ್ರಗತಿಪರ ಸಮಾಜ ನಿರ್ಮಿಸಲು ಶಿಕ್ಷಕರು ಮಕ್ಕಳಲ್ಲಿ ಕುತೂಹಲ, ಪ್ರಶ್ನಿಸುವ ಗುಣ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಲ್ಯಾಪ್‌ಟಾಪ್; ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ:
2024-25ನೇ ಸಾಲಿನಲ್ಲಿ ಎಸ್‌ಎಸ್ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಾದ ನೀಲಮ್ಮ ವೀರಣ್ಣ, ಶಿವಕುಮಾರ ಮಾಲಿಪಾಟೀಲ ಹಾಗೂ ಸಂಪತಕುಮಾರ್ ಕಲಶೆಟ್ಟಿ ಅವರಿಗೆ ಗಣ್ಯರು ಲ್ಯಾಪ್‍ಟಾಪ್ ವಿತರಿಸಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನರವರ ಜನ್ಮ ದಿನದ ಅಂಗವಾಗಿ ಜಿಲ್ಲೆಯ ಪ್ರಾಥಮಿಕ ಶಾಲಾ ವಿಭಾಗದ 16 ಹಾಗೂ ಪ್ರೌಢಶಾಲಾ ವಿಭಾಗದ 7 ಶಿಕ್ಷಕರಿಗೆ 2025ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು.
ಡಿಡಿಪಿಐ ಸೂರ್ಯಕಾಂತ ಮದಾನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಸ್ವಾಗತಿಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮೇಯರ್ ವರ್ಷಾ ಜಾನೆ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಬೆಂಗಳೂರು ದೇವೇಂದ್ರಪ್ಪ ಮರತೂರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಬಿ.ಸುಶೀಲಾ, ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಡಿಡಿಪಿಯು ಸುರೇಶ ಅಕ್ಕಣ್ಣ, ಬಿಇಒ ಶಂಕ್ರಮ ಡವಳಗಿ, ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ. ಬದುಕಿನಲ್ಲಿ ತಾಯಿ ಮೊದಲ ಗುರುವಾದರೆ ಶಿಕ್ಷಕಿ ಎರಡನೇ ಗುರುವಾಗುತ್ತಾರೆ.ಶಶೀಲ್ ನಮೋಶಿ ವಿಧಾನ ಪರಿಷತ್ ಸದಸ್ಯ
‘ಶೈಕ್ಷಣಿಕ ತುರ್ತುಪರಿಸ್ಥಿತಿ ಮೀರಲು ಶ್ರಮಿಸಿ’ ‘ಅರ್ಜುನನಿಗೆ ದ್ರೋಣಾಚಾರ್ಯ ಚಂದ್ರಗುಪ್ತನಿಗೆ ಚಾಣಕ್ಯ ಬೇಕಾಯಿತು. ಗುರುಗೋವಿಂದ ಭಟ್ಟರಿಂದ ಶಿಶುನಾಳ ಶರೀಫ್ ರಾಮಕೃಷ್ಣ ಪರಮಹಂಸರಿಂದ ವಿವೇಕಾನಂದ ಜಾನ್ ಡ್ವೇಯಿ ಅವರಿಂದ ಡಾ.ಅಂಬೇಡ್ಕರ್ ರೂಪುಗೊಂಡರು. ಹೀಗಾಗಿ ಗುರುವಿನ ಪಾತ್ರ ತುಂಬಾ ಮುಖ್ಯ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ‘ಜಿಲ್ಲೆಯಲ್ಲಿ ಶೈಕ್ಷಣಿಕ ತುರ್ತುಪರಿಸ್ಥಿತಿಯಿದ್ದು ಅದನ್ನು ಮೀರಿ ನಿಲ್ಲಲು ನಾವೆಲ್ಲರೂ ಒಗ್ಗಟ್ಟಿನಿಂದ ಒಮ್ಮನಸಿನಿಂದ ಶಕ್ತಿ ಮೀರಿ ಪ್ರಯತ್ನಿಸಬೇಕು. ಫಲಿತಾಂಶ ಸುಧಾರಣೆಗೆ ಪಣತೊಡಬೇಕು. ಈ ಭಾಗದ ಕಳಂಕ ಅಳಿಸಲು ಕೈಜೋಡಿಸಿ ಕೋರುವೆ’ ಎಂದರು.
‘ಪುರಾಣಗಳು ವಿಜ್ಞಾನಗಳಲ್ಲ..’ ‘ಇತ್ತೀಚಿನ ವರ್ಷಗಳಲ್ಲಿ ಪುರಾಣಗಳನ್ನು ಇತಿಹಾಸವೆಂದು ಹಾಗೂ ವಿಜ್ಞಾನವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ರಾಮಾಯಣ ಮಹಾಭಾರತ ಗರುಡ ಪುರಾಣ ಎಲ್ಲವನ್ನೂ ಓದಬೇಕು. ಪುರಾಣಗಳು ನಮ್ಮ ಸಾಂಸ್ಕೃತಿಕ ಗುರುತುಗಳ ಪ್ರತೀಕ. ನೈತಿಕ ಮಾರ್ಗ ಧಾರ್ಮಿಕ ದಿಕ್ಕು ತೋರುವಂಥದ್ದು. ಆದರೆ ಅವುಗಳನ್ನು ವೈಜ್ಞಾನಿಕ ಎಂದು ಹೇಳುವುದು ಸಲ್ಲದು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.. ‘ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ ದೇಶದ ವೈಜ್ಞಾನಿಕ ಪಥದ ರೂಪುರೇಷೆ ಚರ್ಚಿಸುವ ವೇದಿಕೆ. ಅಂಥ ವೇದಿಕೆಯಲ್ಲಿ ಇತ್ತೀಚೆಗೆ ಅಣುಶಕ್ತಿ ಬಯೊ ಟೆಕ್ನಾಲಜಿ ವೈಜ್ಞಾನಿಕ ಮನೋಭಾವ ಚರ್ಚೆಯಾಗುವ ಬದಲು ಪುಷ್ಪಕ ವಿಮಾನ ಗಣೇಶನಿಗೆ ಗಜಮುಖ ಅಳವಡಿಸಿದ್ದು ಮಹಾಭಾರತದ ಕರ್ಣ ಜಗತ್ತಿನ ಮೊದಲ ಪ್ರನಾಳಶಿಶು ಎಂದೆಲ್ಲ ಚರ್ಚೆಯಾಗುತ್ತಿದೆ. ವಿಜ್ಞಾನಿಗಳೇ ಇವುಗಳನ್ನು ಚರ್ಚಿಸುತ್ತಿರುವುದು ಕಳವಳಕಾರಿ’ ಎಂದು ಬೇಸರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.