
ಕಲಬುರಗಿ: ‘ಕೋಲಿ–ಕಬ್ಬಲಿಗ ಸಮುದಾಯದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಬಾರ್ಕಿ ಸೇರಿ ಐದು ಪದಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಪ್ರಸ್ತಾವ ಹೋಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.
‘ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಕೂಡ ಐದು ಪದಗಳನ್ನು ಶಿಫಾರಸು ಮಾಡಲು ಭರವಸೆ ನೀಡಿದ್ದಾರೆ. ಹಾಗಾಗಿ, ಸಮುದಾಯದಿಂದ ಯಾವುದೇ ಹೋರಾಟ ಮಾಡುವುದಿಲ್ಲ’ ಎಂದು ಶನಿವಾರ ಸಮುದಾಯದ ಮುಖಂಡರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಸಮುದಾಯದ 39 ಪದಗಳನ್ನು ಎಸ್‌ಟಿ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಅದು ವಾಪಸ್ ಬಂದಿದ್ದು, ಈಗ ಸಮಾಜ ಕಲ್ಯಾಣ ಇಲಾಖೆ ಕುಲಶಾಸ್ತ್ರೀಯ ಅಧ್ಯಯನ ಮಾಡುತ್ತಿದೆ. ಒಂದು ವಾರದಲ್ಲಿ ಅಧ್ಯಯನ ಮುಗಿಯಲಿದೆ. ಈ ಬಾರಿ ಯಾವುದೇ ದೋಷ ಇಲ್ಲದೆ ವರದಿ ತಯಾರಿಸಿ ಐದು ಪದಗಳನ್ನು ಮಾತ್ರ ಶಿಫಾರಸು ಮಾಡಲಿದೆ’ ಎಂದು ತಿಳಿಸಿದರು.
‘ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವಲ್ಲಿನ ಗೊಂದಲ ಕುರಿತಂತೆ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದರು. ಅದರಂತೆ ಅಧಿಕಾರಿಗಳ ಸಭೆ ನಡೆಸಿದ ಸಿಎಂ, ಶಾಲಾ ದಾಖಲಾತಿಗಳನ್ನು ಆಧರಿಸಿ ಎಸ್‌ಟಿ ಪ್ರಮಾಣಪತ್ರ ನೀಡುವಂತೆ ಡಿ.24ರಂದು ಆದೇಶ ಮಾಡಿದ್ದಾರೆ. ಸಮಾಜದಿಂದ ಇಬ್ಬರಿಗೂ ಅಭಿನಂದನೆ’ ಎಂದರು.
ಮುಖಂಡರಾದ ಭೀಮಣ್ಣ ಸಾಲಿ, ಅವ್ವಣ್ಣ ಮ್ಯಾಕೇರಿ, ಲಚ್ಚಪ್ಪ ಜಮಾದಾರ ಮಾತನಾಡಿದರು. ಸಮುದಾಯದ ರಾಜಗೋಪಾಲ ರೆಡ್ಡಿ, ಬಸವರಾಜ ಬೂದಿಹಾಳ, ಶಿವಾನಂದ ಹೊನಗುಂಟಿ, ರಮೇಶ ನಾಟೀಕಾರ, ಶಾಂತಪ್ಪ ಕೂಡಿ, ಪ್ರಕಾಶ ಜಮಾದಾರ, ಗುಂಡು ಐನಾಪುರ, ಸಂತೋಷ ತಳವಾರ, ಶರಣಪ್ಪ ನಾಟೀಕಾರ, ಸಾಯಬಣ್ಣ ಜಾಲಗಾರ, ಶಿವಕುಮಾರ ಯಾಗಾಪುರ ಇತರರಿದ್ದರು.
‘ರಾಜಕೀಯಕ್ಕಾಗಿ ಹೋರಾಟ’ ‘ಎಸ್‌ಟಿ ಸೇರ್ಪಡೆಗಾಗಿ ಕೆಲ ಮುಖಂಡರು ಸ್ವಾರ್ಥ ಮತ್ತು ರಾಜಕೀಯಕ್ಕಾಗಿ ಡಿ.29ರಂದು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಕೋಲಿ ಸಮುದಾಯದ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ ಮತ್ತು ಮುಖ್ಯಮಂತ್ರಿ ಗಮನಕ್ಕೂ ತಂದಿದ್ದಾರೆ. ಇಂತಹ ವೇಳೆ ಹೋರಾಟ ಸಮಂಜಸವಲ್ಲ’ ಎಂದು ತಿಪ್ಪಣ್ಣಪ್ಪ ಕಮಕನೂರ ಹೇಳಿದರು. ‘ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಸ್ಥಳ ಅಭಿವೃದ್ಧಿಗೆ ವಿಧಾನಸೌಧದ ಆವರಣದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ನಿರ್ಮಾಣಕ್ಕೂ ಪ್ರಯತ್ನ ನಡೆದಿದೆ. ಯಾನಾಗುಂದಿಯಲ್ಲಿ ಮಾತೆ ಮಾಣಿಕೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದರು.
Cut-off box - ಕಾಲ ಸನ್ನಿಹಿತ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿ ‘ನನ್ನ ಕೊನೆಯ ಆಸೆಯಾದ ಕೋಲಿ–ಕಬ್ಬಲಿಗ ಸಮಾಜ ಎಸ್‌ಟಿಗೆ ಸೇರಿಸುವ ಕಾಲ ಸನ್ನಿಹಿತವಾಗಿದೆ. ನಾವೇನು ಈಗ ಹೋರಾಟ ಮಾಡಬೇಕಾಗಿಲ್ಲ. ಪ್ರಿಯಾಂಕ್ ಖರ್ಗೆ ಪ್ರಭಾವಿ ಸಚಿವರಾಗಿದ್ದು ಅವರು ಹೇಳಿದ್ದು ಆಗುತ್ತದೆ. ನಮ್ಮ ಸಮಾಜವನ್ನು ಎಸ್‌ಟಿ ಸೇರ್ಪಡೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.