ADVERTISEMENT

ವಾಡಿ: ರೈತರ ಜಮೀನುಗಳಿಗೆ ಹರಿಯದ ನೀರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:56 IST
Last Updated 4 ಆಗಸ್ಟ್ 2025, 6:56 IST
ವಾಡಿ ಸಮೀಪದ ನಾಲವಾರ ಗ್ರಾಪಂ ವ್ಯಾಪ್ತಿಯ ಕುಂಬಾರಹಳ್ಳಿ ಕೆರೆಯ ನಾಲೆಗಳು ಗಿಡಗಳಿಂದ ತುಂಬಿ ಹೋಗಿರುವುದು.
ವಾಡಿ ಸಮೀಪದ ನಾಲವಾರ ಗ್ರಾಪಂ ವ್ಯಾಪ್ತಿಯ ಕುಂಬಾರಹಳ್ಳಿ ಕೆರೆಯ ನಾಲೆಗಳು ಗಿಡಗಳಿಂದ ತುಂಬಿ ಹೋಗಿರುವುದು.   

ವಾಡಿ: ನಾಲವಾರ ಗ್ರಾ.ಪಂ ವ್ಯಾಪ್ತಿಯ ಕುಂಬಾರಹಳ್ಳಿ ಕೆರೆಯ ನೀರು ನಿರ್ವಹಣೆ ಕೊರತೆಯಿಂದ ರೈತರ ಜಮೀನುಗಳಿಗೆ ಹೋಗುವ ಬದಲು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ಕೆರೆ ಭರ್ತಿಯ ಸಂತಸದಲ್ಲಿದ್ದ ರೈತರಿಗೆ ಇದರಿಂದ ನಿರಾಸೆಯಾಗುತ್ತಿದೆ.

ಕೆಲವು ದಿನಗಳ ಹಿಂದೆ ಸುರಿದ ಸತತ ಮಳೆಯಿಂದ ಕೆರೆಯ ಅಂಗಳದಲ್ಲಿ ಜಲರಾಶಿಯೇ ಉಂಟಾಗಿದೆ. ಆದರೆ 8-10 ಕಡೆ ನೀರು ಸೋರಿಕೆಯಾಗುತ್ತಿದ್ದು, ಬೇಸಿಗೆಗೂ ಮೊದಲೇ ಖಾಲಿಯಾಗುವ ಭೀತಿ ಉಂಟಾಗಿದೆ.

ನಾಲಾ ನಿರ್ವಹಣೆ ಮರೆತ ಅಧಿಕಾರಿಗಳು: ಕೆರೆ ಅಂಚಿನ ಸುಮಾರು 300ಕ್ಕೂ ಅಧಿಕ ಎಕರೆ ನೀರಾವರಿ ಉದ್ದೇಶದಿಂದ ಕೆರೆ ನಿರ್ಮಿಸಿ ನಾಲೆಗಳನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ನೀರು ಹರಿಸಲು ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕಿಗೆ ನಾಲೆಗಳನ್ನು ನಿರ್ಮಿಸಲಾಗಿದೆ. ಆದರೆ ನಾಲೆಗಳು ಸಂಪೂರ್ಣ ಹಾಳಾಗಿದ್ದು ರೈತರ ಜಮೀನುಗಳಿಗೆ ಹನಿ ನೀರು ಹರಿಯುತ್ತಿಲ್ಲ.

ADVERTISEMENT

ನಿರ್ವಹಣೆ ಕೊರತೆಯಿಂದ ನಾಲೆಯ ಗೋಡೆಗಳು ಉರುಳಿ ಬಿದ್ದಿವೆ. ಆಳೆತ್ತರ ಕಸಕಡ್ಡಿಗಳು ಬೆಳೆದು ನಿಂತಿವೆ. ಇವು ನೀರು ಸರಾಗ ಹರಿಯುವಿಕೆಗೆ ಅಡ್ಡಿಯಾಗಿವೆ. ಜಂಗಲ್ ಕಟಿಂಗ್ ಮಾಡದ ಕಾರಣ ಜನರು ಕೆರೆ ಹತ್ತಿರ ಹೋಗಲು ಹೆದರುವಂತಾಗಿದೆ. ತೂಬು ಒಡೆದು ಹೋಗಿದ್ದು ರಾಶಿಗಟ್ಟಲೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ.

ಸಂಪರ್ಕ ರಸ್ತೆ ಮೇಲೆ ವ್ಯರ್ಥ ನೀರು ಹರಿದು ಬರುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದ ನಾವು 4 ಕಿಮೀ ಸುತ್ತುವರೆದು ಬರಬೇಕಾಗಿದೆ ಎಂದು ರೈತರಾದ ಬಸವರಾಜ ಹಾಲಗಡ್ಲಿ ಹಾಗೂ ಮಾರುತಿ ಲಿಂಗೇರಿ ಅಳಲು ತೋಡಿಕೊಂಡರು.

ಕೃಷಿಯಿಂದ ವಿಮುಖ

ಕೆರೆಯ ನಾಲೆಗಳಿಂದ ಗದ್ದೆಗೆ ನೀರು ಹರಿಯದ ಕಾರಣ ಶೇ 70ಕ್ಕೂ ಅಧಿಕ ರೈತರು ಕೃಷಿಯನ್ನೇ ತ್ಯಜಿಸಿದ್ದಾರೆ. ಕೃಷಿಯಲ್ಲಿ ತೊಡಗಿರುವ ರೈತರು ಒಬ್ಬರ ಜಮೀನಿನಿಂದ ಮತ್ತೊಬ್ಬರ ಜಮೀನುಗಳಿಗೆ ಮಾತುಕತೆಯ ಮೂಲಕ ನೀರು ಹರಿಸಿಕೊಂಡು ಭತ್ತದ ಬೇಸಾಯ ಮಾಡುತ್ತಿದ್ದಾರೆ. ಕೂಡಲೇ ನಾಲೆಗಳ ದುರಸ್ತಿ ಮಾಡಬೇಕು ಹಾಗೂ ಕೆರೆ ತೂಬು ದುರಸ್ತಿ ಮಾಡಿ ವ್ಯರ್ಥ ನೀರು ಹರಿಯುವಿಕೆ ತಡೆಗಟ್ಟಬೇಕು ಎಂದು ರೈತರು ಅಗ್ರಹಿಸಿದ್ದಾರೆ.

20 ವರ್ಷಗಳಿಂದ ನಾಲಾ ದುರಸ್ತಿ ಮಾಡಿಲ್ಲ. ಜಮೀನುಗಳಿಗೆ ನೀರು ಹರಿಯದ ಕಾರಣ ಗದ್ದೆಗಳ ಮೂಲಕ ನೀರು ಹರಿಸಿಕೊಳ್ಳುತ್ತಿದ್ದೇವೆ. ಕೂಡಲೇ ನಾಲೆಗಳ ದುರಸ್ತಿ ಮಾಡಿ ನೀರು ಹರಿಸಬೇಕು.
–ತಾಯಪ್ಪ ವಡ್ನಳ್ಳಿ, ಕುಂಬಾರಹಳ್ಳಿ ರೈತ
ಕೆರೆ ನೀರು ವ್ಯರ್ಥವಾಗಿ ಹರಿದು ಸಂಪರ್ಕ ರಸ್ತೆ ಮೇಲೆ ಬರುತ್ತಿದೆ. ರಸ್ತೆ ತುಂಬಾ ಜಾಲಿಮರಗಳು ಬೆಳೆದಿದ್ದು ನಡೆದು ಹೋಗಲು ಭಯ ಅನ್ನಿಸುತ್ತಿದೆ.
–ಮಾರುತಿ ಲಿಂಗೇರಿ, ಕುಂಬಾರಹಳ್ಳಿ ರೈತ
40 ಎಕರೆಗಿಂತ ಹೆಚ್ಚಿನ ವ್ಯಾಪ್ತಿ ಪ್ರದೇಶದ ಕೆರೆಗಳು ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಕುಂಬಾರ ಹಳ್ಳಿ ಕೆರೆ ನಮ್ಮ ವ್ಯಾಪ್ತಿಗೆ ಬರದಿದ್ದರೂ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.
- ರಾಜಶೇಖರ ಸಜ್ಜನಶೆಟ್ಟಿ, ಎಇಇ, ಸಣ್ಣ ನೀರಾವರಿ ಇಲಾಖೆ ಚಿತ್ತಾಪುರ
ಕುಂಬಾರಹಳ್ಳಿ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು
ಮಾರುತಿ ಲಿಂಗೇರಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.