ADVERTISEMENT

ಕಲಬುರಗಿ | ಶಿಕ್ಷಣವೇ ಅಸಮಾನತೆ ನಿರ್ಮೂಲನಾ ಮಂತ್ರ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:00 IST
Last Updated 18 ಸೆಪ್ಟೆಂಬರ್ 2025, 5:00 IST
   

ಕಲಬುರಗಿ: ‘ರಾಜ್ಯದ ಜನಸಂಖ್ಯೆಯಲ್ಲಿ ಶೇ 7ರಷ್ಟಿರುವ ಕುರುಬ ಸಮುದಾಯ ಶಿಕ್ಷಣದಲ್ಲಿ ಹಿಂದೆ ಉಳಿದಿದೆ. ನೀವೆಲ್ಲ ವಿದ್ಯಾವಂತರೋಗೋದು ಅಗತ್ಯ ಮತ್ತು ಅನಿವಾರ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿನ ಅಸಮಾನತೆಗೆ ಮುಖ್ಯ ಕಾರಣ ಜಾತಿ ವ್ಯವಸ್ಥೆ. ಶೂದ್ರ ವರ್ಗದ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಅಕ್ಷರ ಸಂಸ್ಕೃತಿ ಎಲ್ಲರಿಗೂ ದೊರಕಿದ್ದರೆ, ಸಮಾಜದಲ್ಲಿ ಅಸಮಾನತೆಯೇ ಇರುತ್ತಿರಲಿಲ್ಲ. ಶಿಕ್ಷಣದಿಂದ ಜ್ಞಾನವಿಕಾಸ, ಅಭ್ಯುದಯ ಸಾಧ್ಯ. ಜನ ಸ್ವಾಭಿಮಾನಿಗಳಾಗಿ, ಸ್ವತಂತ್ರವಾಗಿ ಬದುಕಲು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಅವಕಾಶಗಳು ಎಲ್ಲರಿಗೂ ಸಿಗಬೇಕು. ಸಮಾನತೆ ಬರಬೇಕು. ಇದನ್ನು ಕನಕದಾಸರು, ಬಸವಣ್ಣ, ಡಾ.ಅಂಬೇಡ್ಕರ್, ಮಹಾತ್ಮ ಗಾಂಧಿ, ಬುದ್ಧ ಎಲ್ಲರೂ ಹೇಳಿದ್ದಾರೆ. ಅಸಮಾನತೆ ನಿರ್ಮೂಲನೆಗೆ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ಜಾರಿಗೊಳಿಸಿತ್ತು. ಈಗ ಎರಡನೇ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಅಸಮಾನತೆ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ’ ಎಂದರು.

‘ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಇಲ್ಲಿನ ಜಾತಿ ವ್ಯವಸ್ಥೆ ಚಲನೆಯಿಲ್ಲ. ಹೀಗಾಗಿಯೇ ಬದಲಾವಣೆ ಆಗುತ್ತಿಲ್ಲ. ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಬಂದಾಗ ಅದಕ್ಕೆ ಚಲನಶೀಲತೆ ಬರುತ್ತದೆ. 12ನೇ ಶತಮಾನದಲ್ಲಿ ಬಸವಣ್ಣ ಇವನಾರವ ಎನ್ನಬೇಡ ಇವ ನಮ್ಮವ ಎನ್ನಯ್ಯ ಎಂದು ಹೇಳಿದರು. ಆದರೂ ಜಾತಿ ಹೋಗಿಲ್ಲ’ ಎಂದು ವಿಷಾದಿಸಿದರು.

‘ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌ 15ರಂದು. ಗಲ್ಲು ಕಂಬಕ್ಕೇರಿದ್ದು ಜನವರಿ 26ರಂದು. ಎರಡೂ ದಿನಗಳು ದೇಶದ ಪಾಲಿಗೆ ಪ್ರಮುಖ ದಿನಗಳು. ಅಂಥ ವ್ಯಕ್ತಿತ್ವದ ರಾಯಣ್ಣ ಇಂದಿನ ಯುವಜನರಿಗೆ ಸ್ಫೂರ್ತಿಯಾಗಬೇಕು. ಸಮಾಜದ ಜನರು ರಾಯಣ್ಣ, ಕನಕದಾಸರು ತೋರಿದ ಪಥದಲ್ಲಿ ನಡೆಯುವ ಪ್ರಯತ್ನ ಮಾಡಬೇಕು’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ‘ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ನಮ್ಮ ಸಮುದಾಯಕ್ಕೆ ನೀಡಿದ್ದ ಮಾತು ಮರೆತಿದ್ದರಿಂದ ಮನೆಗೆ ಹೋಗುವಂತಾಯಿತು. ಈ ಸರ್ಕಾರ ಸಮುದಾಯದ ಬೇಡಿಕೆಗಳನ್ನು ಈಡೇರಿಸಿದೆ. ಅದಕ್ಕಾಗಿ ಸರ್ಕಾರಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮುಖಂಡ ರಾಮಚಂದ್ರ, ‘ಸೆ.22ರಿಂದ ನಡೆಯುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಇದೇ ಅವಧಿಯಲ್ಲಿ ಜಾರಿಗೊಳಿಸಲು ಪ್ರಯತ್ನಿಸಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಿಯಾಂಕ್‌ ಖರ್ಗೆ, ಬೈರತಿ ಸುರೇಶ ಹಾಗೂ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಕಂಬಳಿ ಹೊದಿಸಿ, ಕೈಯಲ್ಲಿ ಕೋಲು ಹಾಗೂ ಜೊತೆಗೆ ರಾಯಣ್ಣ ಮೂರ್ತಿ ನೀಡಿ ಅಭಿನಂದಿಸಲಾಯಿತು.

ಬೈಲಪ್ಪ ನೆಲೋಗಿ ಮಾತನಾಡಿದರು. ತಿಂಥಣಿ ಬ್ರಿಜ್‌ನ ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ, ಹುಲಿಜಂತಿಯ ಮಾಳಿಂಗರಾಯ ಮಹಾರಾಜ, ಜೈಭಾರತ ಮಾತಾ ಟ್ರಸ್ಟ್‌ ಸಂಸ್ಥಾಪಕ ಹವಾಮಲ್ಲಿನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಚಂದ್ರಶೇಖರ ಪಾಟೀಲ, ಮೇಯರ್‌ ವರ್ಷಾ ಜಾನೆ, ಕುಡಾ ಅಧ್ಯಕ್ಷ ಮಜರ್‌ ಆಲಂ ಖಾನ್‌, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಪ್ರದೇಶ ಕುರುಬಗೊಂಡ ಸಂಘದ ರಾಜ್ಯ ಘಟಕ, ಜಿಲ್ಲಾ ಘಟಕ, ಯುವ ಘಟಕದ ಅಭಿನಂದನಾ ಸಮಾರಂಭದ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ನಮ್ಮ ಸಮಾಜದಲ್ಲಿ ಶಿಕ್ಷಣದ ಕೊರತೆಯಿದೆ. ಮೂರ್ತಿಗಳ ಸ್ಥಾಪನೆ ಜೊತೆಗೆ ಶಿಕ್ಷಣ ಸಂಸ್ಥೆ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕಿದೆ.
ಬೈರತಿ ಸುರೇಶ ಸಚಿವ

ಅನುದಾನ ಬೇಡಿಕೆಗೆ ಸಿಎಂ ಸ್ಪಂದನೆ ‘ನಗರದಲ್ಲಿರುವ 3 ಎಕರೆ 7 ಗುಂಟೆ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹10 ಕೋಟಿ ಅನುದಾನ ಕೊಡಬೇಕು’ ಎಂಬ ಸಮುದಾಯದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅದಕ್ಕೆ ಬೇಕಾದ ಅಗತ್ಯ ಅನುದಾನ ಕೊಡುತ್ತೇನೆ’ ಎಂದು ಭರವಸೆ ನೀಡಿದರು. ಸಿಳ್ಳೆ ಕೇಕೆ ಕೂಗು ಜೈಕಾರ... ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 1.57ಕ್ಕೆ ರಾಯಣ್ಣ ಮೂರ್ತಿ ಅನಾವರಣಗೊಳಿಸಿದರು. ಮ.2.05ಕ್ಕೆ ವೇದಿಕೆಗೆ ಬಂದರು. ಆಗ ನೆರೆದಿದ್ದ ಸಾವಿರಾರು ಜನ ‘ಹೋ...’ ಎಂದು ಉದ್ಗರಿಸಿದರು. ಕೇಕೆ ಹಾಕಿ ಕೈಬೀಸಿ ಸ್ಪಂದಿಸಿದರು. ಸಿದ್ದರಾಮಯ್ಯ ಅವರಿಗೆ ಜೈಕಾರವನ್ನೂ ಮೊಳಗಿಸಿದರು. ಸಭಿಕರಿಗೆ ನಮಸ್ಕಾರ ಮಾಡಿ ಕೈಬೀಸಿ ಮುಖ್ಯಮಂತ್ರಿ ಆಸೀನರಾದರು. ಮಧ್ಯಾಹ್ನ 3.17ಕ್ಕೆ ಎಂದಿನ ಶೈಲಿಯಲ್ಲಿ ಭಾಷಣ ಆರಂಭಿಸಿದ ಸಿಎಂ 33 ನಿಮಿಷಗಳಷ್ಟು ಕಾಲ ನಿರರ್ಗಳವಾಗಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು. ಮಾತಿನ ನಡುವೆ ‘ಏ ಮೈಕ್‌ ಸರಿಯಿಲ್ಲ’ ಎಂದು ಆಕ್ಷೇಪಿಸಿದರು. ಅವರಿಗೆ ಮತ್ತೊಂದು ಮೈಕ್ ನೀಡಲಾಯಿತು. ಜೈ ಹಿಂದ್‌ ಜೈ ಕರ್ನಾಟಕ ಜೈ ಸಂವಿಧಾನ ಜೈ ಸಂಗೊಳ್ಳಿ ರಾಯಣ್ಣ ಎಂದು ಘೋಷಣೆ ಕೂಗಿ ಭಾಷಣ ಸಂಪನ್ನಗೊಳಿಸಿದರು.

ಮನುವಾದದ ವಿರುದ್ಧ ತ್ರಿಮೂರ್ತಿಗಳ ಧ್ವನಿ ‘ಸಮಾಜದಲ್ಲಿ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ಒಂದೆಡೆ ಸಂವಿಧಾನದ ರಕ್ಷಣೆಗೆ ಮತ್ತೊಂದೆಡೆ ಮನುಸ್ಮೃತಿ ‌ಜಾರಿಗೆ ಯತ್ನ ನಡೆಯುತ್ತಿದೆ. ದೇಶದಲ್ಲಿ ಮೂವರೇ ನಾಯಕರು ಮನುವಾದದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅದು ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ. ಇವರ ಕೈ ಬಲಪಡಿಸಿದಾಗ ಮಾತ್ರ ಅಂಬೇಡ್ಕರ್‌ ಸಂವಿಧಾನ ಉಳಿಸಲು ಸಾಧ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ಇತಿಹಾಸ ಸೃಷ್ಟಿಸಿದ ಸಮಾಜ ಕುರುಬ ಸಮಾಜ. ಉದಾಹರಣೆಗೆ ಸಾಹಿತ್ಯದಲ್ಲಿ ಕಾಳಿದಾಸ ಸಾಮಾಜ್ರ್ಯ ಕಟ್ಟಿದವರಲ್ಲಿ ಹಕ್ಕ–ಬುಕ್ಕರು ರಾಷ್ಟ್ರಕೂಟರು ಶೌರ್ಯದಲ್ಲಿ ಸಂಗೊಳ್ಳಿ ರಾಯಣ್ಣ ಅಧ್ಯಾತ್ಮದಲ್ಲಿ ಕನಕದಾಸರು ಸಿಗುತ್ತಾರೆ. ಸಾಮಾಜಿಕ ನ್ಯಾಯ ಮತ್ತು ಆಡಳಿತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಗುತ್ತಾರೆ’ ಎಂದು ಬಣ್ಣಿಸಿದರು.‘ನಮ್ಮದು ಸಂವಿಧಾನದ ಆಶಯವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುತ್ತಿರುವ ಸರ್ಕಾರ. ನಾವು ಜಾತಿ–ಧರ್ಮ ನೋಡದೇ ಎಲ್ಲ ಬಡವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆವು. 371 (ಜೆ) ಕಲಂ ಜಾರಿಗೊಳಿಸಿದೆವು. ನಮ್ಮಲ್ಲಿ ಆಚಾರವಿದೆ ವಿಚಾರವಿದೆ. ಆದರೆ ಪ್ರಚಾರದ ಕೊರತೆಯಿದೆ’ ಎಂದು ಬೇಸರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.