ವಾಡಿ: ಲಾಡ್ಲಾಪುರ ಹಾಜಿಸರ್ವರ್ (ಹಾದಿಶರಣ) ಬೆಟ್ಟವು ಭಕ್ತಿಯ ಜೊತೆಗೆ ಧಾರ್ಮಿಕ ಸಮನ್ವಯತೆ, ಸರ್ವಧರ್ಮ ಸಹಬಾಳ್ವೆಯ ಸಂದೇಶ ಸಾರುತ್ತಾ ನಾಡಿನ ಗಮನ ಸೆಳೆಯುತ್ತಿದೆ.
ಹಿಂದೂ-ಮುಸ್ಲಿಂ ಸಹೋದರರ ಸಹಬಾಳ್ವೆ ಹಾಗೂ ಕೋಮು ಸೌಹಾರ್ದತೆಯ ಸಂದೇಶ ಸಾರುತ್ತಾ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಪ್ರಸಿದ್ಧ ಹಾಜಿಸರ್ವರ್(ಹಾದಿಶರಣ) ಬೆಟ್ಟ ನಾಡಿನ ತುಂಬಾ ಹೆಸರುವಾಸಿಯಾಗಿದೆ.
ಬೆಟ್ಟದ ಮೇಲೆ ಇರುವ ಹಾಜಿಸರ್ವರ್ ದರ್ಗಾಕ್ಕೆ ಹಿಂದೂ ಮುಸ್ಲಿಮರು ಕುಟುಂಬ ಸಮೇತರಾಗಿ ಬಿಸಿಲನ್ನು ಲೆಕ್ಕಿಸದೇ ಬರಿಗಾಲಲ್ಲಿ ತೆರಳಿ ದರ್ಶನ ಪಡೆಯುವುದು ವಾಡಿಕೆ.
ಮಕ್ಕಳು, ವಯೋವೃದ್ದರು, ಮಹಿಳೆಯರು 600 ಅಡಿ ಎತ್ತರದ ಬೆಟ್ಟ ಹತ್ತಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯ ಹರಕೆ ಸಲ್ಲಿಸುವುದು ಜಾತ್ರೆಯ ವಿಶೇಷವಾಗಿದೆ. ಹಿಂದೂ ಹಾಗೂ ಮುಸ್ಲಿಮರು ತಮ್ಮ ಆರಾಧ್ಯ ದೈವ ಎಂದು ನಂಬಿ ಭಕ್ತಿಯಿಂದ ಆರಾಧಿಸುವ ಸ್ಥಳ ಇದಾಗಿದ್ದು ವರ್ಷಪೂರ್ತಿ ಭಕ್ತರು ಭೇಟಿ ನೀಡಿ ಹರಕೆ ಸಲ್ಲಿಸುವ ಪ್ರತೀತಿ ಇದೆ.
ಇಲ್ಲಿನ ಬೆಟ್ಟದಲ್ಲಿ ಮುಸ್ಲಿಮರು ಹಾಗೂ ಹಿಂದೂ ಧರ್ಮೀಯರು ಸೇರಿ ಪೂಜಾರಿ ಕೆಲಸ ಮಾಡುವುದು ವಿಶೇಷ. ಹಿಂದೂಗಳು ಗುಡ್ಡದ ಮೇಲಿರುವ ದರ್ಗಾದಲ್ಲಿ ಪೂಜಾರಿಗಳಾದರೆ, ಮುಸ್ಲಿಮರು ದರ್ಗಾದ ಪಕ್ಕ ಇರುವ ನಗಾರಿ ಕಟ್ಟೆಗೆ ಪೂಜಾರಿಗಳಾಗುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
ದವನದ ಹುಣ್ಣಿಮೆ ನಂತರ ಬರುವ ಗುರುವಾರ ದಿನ ಜಾತ್ರೆಗೆ ಚಾಲನೆ ನೀಡಿ 5 ದಿನಗಳ ಕಾಲ ಅದ್ದೂರಿಯಾಗಿ ನಡೆಸಿಕೊಂಡು ಬರುವುದು ಇಲ್ಲಿನ ಸಂಪ್ರದಾಯ.
ಏ.17ರಿಂದ 5 ದಿನಗಳ ಕಾಲ ಜಾತ್ರೆ ಉತ್ಸವ ಜರುಗಲಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದೆ.
ಕೂಲಿ ಕೆಲಸ ಅರಸಿ ಮುಂಬೈ, ಬೆಂಗಳೂರು, ಪುಣೆ, ಗೋವಾ, ಹೈದರಾಬಾದ್‌ನಂತಹ ಮಹಾನಗರಗಳಿಗೆ ವಲಸೆ ಹೋಗುವ ಕಾರ್ಮಿಕರು ಕಡ್ಡಾಯವಾಗಿ ಬಂದು ಹರಕೆ ಸಲ್ಲಿಸುತ್ತಾರೆ.
ಯಾದಗಿರಿಯ ಈಶಾನ್ಯ ಸಾರಿಗೆ ವಿಭಾಗದಿಂದ ಪ್ರಯಾಣಿಕರಿಗೆ ಬಸ್‌ಗಳ ವ್ಯವಸ್ಥೆ ಹಾಗೂ ಜಾತ್ರೆಗೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾತ್ರಾ ನಿಮಿತ್ತ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು ಶಾಂತಿಯುತ ಆಚರಣೆ ಹಾಗೂ ಜಾತ್ರೆಯಲ್ಲಿ ಜೂಜು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ನಿಗ್ರಹಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕರ್ನಾಟಕವಷ್ಟೇ ಅಲ್ಲದೆ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಸಹಸ್ರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು 'ಹಾಜಿಸರ್ವರ್ ಕೀ ದೋಸ್ತರಾ ಹೋದಿನ್' ಎನ್ನುತ್ತಾ ಬೆಟ್ಟದ ಕಡೆ ನಡಿಗೆ ಆರಂಭಿಸಿ ತಮ್ಮ ಭಕ್ತಿಯ ಹರಕೆ ಸಲ್ಲಿಸುತ್ತಾರೆ ಎನ್ನುತ್ತಾರೆ ಗ್ರಾಮಸ್ಥ ಶಾಂತಕುಮಾರ ಎಣ್ಣಿ. ಜಾತ್ರಾ ನಿಮಿತ್ತ ಗುಡ್ಡಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಜಾತ್ರೆ ಇಂದಿನಿಂದ
ಏ.17ರಂದು ಗುರುವಾರ ರಾತ್ರಿ 10ಗಂಟೆಯಿಂದ ಶುಕ್ರವಾರ ಬೆಳಗಿನ ಜಾವ 5ಗಂಟೆವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧೋತ್ಸವ ಮೆರವಣಿಗೆ ನಡೆಯಲಿದೆ. 18ರಂದು ದೀಪೋತ್ಸವ ಹಾಗೂ ರಾತ್ರಿ 9.30ರಿಂದ ಖವ್ವಾಲಿ ಕಾರ್ಯಕ್ರಮ ಜರುಗಲಿವೆ. ಏ.19ರಂದು ಶನಿವಾರ ಸಂಜೆ 4ರಿಂದ ಕೈಕುಸ್ತಿ ಪ್ರದರ್ಶನ ಏ.21ರಂದು ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಕಳಸ ಹೊತ್ತು ಮೆರವಣಿಗೆ ನಡೆಸುವ ಗ್ರಾಮಸ್ಥರು ದೇವರ ಮನೆಯಲ್ಲಿ ಕಳಸಗಳನ್ನು ಪುನಃ ಪ್ರತಿಷ್ಠಾಪಿಸಿ ಜಾತ್ರೆ ಸಂಪನ್ನಗೊಳಿಸಲಾಗುತ್ತದೆ.
ಬೇಸಿಗೆ ಸಮಯದಲ್ಲಿ ಜಾತ್ರೆ ಇರುವುದರಿಂದ ಭಕ್ತರಿಗೆ ನೀರು ನೆರಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಲಿದೆಶಂಕರಗೌಡ ಪಾಟೀಲ, ಡಿವೈಎಸ್ಪಿ, ಶಹಾಬಾದ್
ಹಿಂದೂ ಮುಸ್ಲಿಂ ಸೇರಿ ಆಚರಿಸುವ ಲಾಡ್ಲಾಪುರ ಹಾಜಿಸರ್ವರ್ ಜಾತ್ರೆಯಲ್ಲಿ ಲಂಬಾಣಿ ಸಮುದಾಯ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ತೀರಿಸುವುದು ಶತಶತಮಾನಗಳಿಂದ ನಡೆದುಕೊಂಡು ಬಂದಿದೆ.ಲಕ್ಷ್ಮಣ ಯಾಗಾಪುರ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.