ADVERTISEMENT

ಬಾಲಕಿಗೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:52 IST
Last Updated 4 ನವೆಂಬರ್ 2019, 14:52 IST

ಕಲಬುರ್ಗಿ: ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಕೃತ್ಯವೆಸಗಿದ ವಾಡಿ ಬಳಿಯ ಇಂಗಳಗಿ ಗ್ರಾಮದ ಭೀಮಾಶಂಕರ ಮಲ್ಲಪ್ಪ ಎಂಬಾತನಿಗೆ ಸೋಮವಾರ ಪೋಕ್ಸೊ ಕಾಯ್ದೆಯಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿದೆ.

ಅಲ್ಲದೇ, ಜೀವ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದಕ್ಕಾಗಿ 506ನೇ ಕಲಂನಡಿ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಗೋಪಾಲಪ್ಪ ಎಸ್‌. ಅವರು ಆದೇಶ ಹೊರಡಿಸಿದ್ದಾರೆ. ದಂಡದ ಹಣದಲ್ಲಿ ₹ 1 ಲಕ್ಷವನ್ನು ದೌರ್ಜನ್ಯಕ್ಕೊಳಗಾದ ಬಾಲಕಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೇ ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ ₹ 5 ಲಕ್ಷ ಪರಿಹಾರ ನೀಡುವಂತೆಯೂ ತಿಳಿಸಿದ್ದಾರೆ.

ಪ್ರಕರಣದ ವಿವರ: ಗ್ರಾಮದ ಬಾಲಕಿಯ ಮನೆಗೆ ತೆರಳಿದ ಭೀಮಾಶಂಕರ ದನದ ಕೊಟ್ಟಿಗೆಯಲ್ಲಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮತ್ತೆ ಹಲವು ಬಾರಿ ದೌರ್ಜನ್ಯ ಎಸಗಿದ್ದು, ಯಾರಿಗಾದರೂ ಈ ವಿಷಯ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದ. ಈ ಕುರಿತು ದೂರು ದಾಖಲಿಸಿಕೊಂಡಿದ್ದ ವಾಡಿ ಠಾಣೆ ಸಿಪಿಐ ಶಂಕರಗೌಡ ವಿ. ಪಾಟೀಲ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ವಾದ ವಿವಾದ ಆಲಿಸಿದ ನ್ಯಾಯಾಧೀಶರು ಸೋಮವಾರ ಈ ತೀರ್ಪು ನೀಡಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೊ) ಎಲ್‌.ವಿ.ಚಟ್ನಾಳಕರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.