ADVERTISEMENT

ಕಲಬುರಗಿ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಅಕ್ಷರಾಭ್ಯಾಸ

​ಪ್ರಜಾವಾಣಿ ವಾರ್ತೆ
Published 25 ಮೇ 2025, 16:04 IST
Last Updated 25 ಮೇ 2025, 16:04 IST
ಕಲಬುರಗಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಬಾಲಕನಿಗೆ ಅಕ್ಷರಾಭ್ಯಾಸ ಮಾಡಿಸಿದರು
ಕಲಬುರಗಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಬಾಲಕನಿಗೆ ಅಕ್ಷರಾಭ್ಯಾಸ ಮಾಡಿಸಿದರು   

ಕಲಬುರಗಿ: ನಗರದ ಶರಣ ಸಿರಸಗಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಭಾನುವಾರ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗದಗ ಹಾಗೂ ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬ ವಿವೇಕಾನಂದರ ವಾಣಿಯನ್ನು ಮಕ್ಕಳು ಅರ್ಥೈಸಿಕೊಳ್ಳಬೇಕು. ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು’ ಎಂದರು.

‘ಸದೃಢ ಭಾರತದ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಅವರಂತಹ ಎಂಜಿನಿಯರ್‌, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅವರಂತಹ ವ್ಯಕ್ತಿಗಳ ಅವಶ್ಯವಿದೆ. ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಮಕ್ಕಳನ್ನು ಪುರುಷ ಸಿಂಹರನ್ನಾಗಿ ಮಾಡುವ ಶಿಕ್ಷಣ ಬೇಕಿದೆ. ಮುಂದಿನ ದಿನಗಳಲ್ಲಿ ಭಾರತವು ಒಂದು ಅದ್ಭುತ ದೇಶವಾಗಿ ಜಗತ್ತನ್ನು ಆಳುವ ಶಕ್ತಿಯನ್ನು ಹೊಂದಲಿದೆ’ ಎಂದು ಹೇಳಿದರು.

ADVERTISEMENT

ವಿದ್ಯಾ ಕೇಂದ್ರದ ಕರೆಸ್ಪಾಂಡೆಂಟ್ ಕೃಷ್ಣ ಜೋಶಿ ಮಾತನಾಡಿ, ‘ಭಾರತೀಯ ಶಿಕ್ಷಣ ಪದ್ಧತಿ, ಸಂಸ್ಕಾರ, ಪಂಚಮುಖಿ ಶಿಕ್ಷಣದ ಮಹತ್ವದಾಗಿದೆ. ರಾಷ್ಟ್ರೋತ್ಥಾನ ಪರಿಷತ್ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಸಾಧನ ಹಾಗೂ ತಪಸ್ ಮೂಲಕ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಜೆಇಇ ಹಾಗೂ ನೀಟ್ ಶಿಕ್ಷಣ ನೀಡುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಕುಡಾ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ಪ್ರಮುಖರಾದ ಮಾರ್ತಾಂಡ ಶಾಸ್ತ್ರಿ, ರತ್ನಾಕರ, ಮಹೇಶ ದೇಶಪಾಂಡೆ, ರಮೇಶ್ ತಿಪ್ಪನೋರ್, ಶಿವಶರಣ ಗೊಡ್ರಾಳ, ಅರವಿಂದ ನವಲಿ, ಸಾಗರ ಸತಾಳಕರ್, ಶರಣಪ್ಪ ಪಾಟೀಲ, ನಂದಕಿಶೋರ, ಶ್ರೀಕಾಂತ ಸರಾಫ್, ಪ್ರಹ್ಲಾದ ಪೂಜಾರಿ, ಗುರುರಾಜ ದೇಶಪಾಂಡೆ ಉಪಸ್ಥಿತರಿದ್ದರು.

ಶಾಲೆಯ ಪ್ರಧಾನಾಚಾರ್ಯ ವಂಶಿಕೃಷ್ಣ ಸ್ವಾಗತಿಸಿದರು. ಶಿಕ್ಷಕರಾದ ಅನುಪಮಾ ಕುಲಕರ್ಣಿ, ಶ್ರೀಪಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಶೈಕ್ಷಣಿಕ ಸಂಯೋಜಕ ರವಿಕುಮಾರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.