ಕಲಬುರಗಿ: ಕಲಬುರಗಿ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಮತಗಳ ಲೀಡ್ ಪಡೆದಿದ್ದರೂ ಗೆಲವು ಮಾತ್ರ ಕಾಂಗ್ರೆಸ್‌ನ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಒಲಿದಿದೆ.
ಯಾದಗಿರಿಯ ಗುರಮಠಕಲ್ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಎಂಟರಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು, ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಚಿತ್ತಾಪುರ, ಸೇಡಂ, ಕಲಬುರಗಿ ಗ್ರಾಮೀಣ ಮತ್ತು ಕಲಬುರಗಿ ಉತ್ತರ ಕ್ಷೇತ್ರದ ಮತದಾರರು ರಾಧಾಕೃಷ್ಣ ಅವರ ‘ಕೈ’ ಹಿಡಿದರು.
ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು 51,729 ಮತಗಳ ಲೀಡ್ ತಂದುಕೊಟ್ಟಿದ್ದಾರೆ. ರಾಧಾಕೃಷ್ಣ ಅವರ ಗೆಲುವಿನಲ್ಲಿ ಉತ್ತರ ಮತಗಳ ಕಾಣಿಕೆ ದೊಡ್ಡದಿದೆ. ಜಾಧವ ಅವರಿಗೆ 70,313 ಮತಗಳು ಬಂದಿದ್ದರೆ ರಾಧಾಕೃಷ್ಣ ಅವರಿಗೆ 1,22,042 ಮತಗಳು ಹರಿದುಬಂದಿವೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಿಂದ ಕಾಂಗ್ರೆಸ್‌ಗೆ 80,756 ಮತಗಳು ಬಂದಿದ್ದು, 16,340 ಮತಗಳ ಲೀಡ್ ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಸೇಡಂ ಕ್ಷೇತ್ರದಿಂದ 9,207 ಮತಗಳ ಲೀಡ್ ರಾಧಾಕೃಷ್ಣ ಅವರಿಗೆ ಬಂದಿವೆ. ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ 2,077 ಮತಗಳು ಕಾಂಗ್ರೆಸ್ ಪಾಲಾದವು. ಹೀಗಾಗಿ, ರಾಧಾಕೃಷ್ಣ ಅವರ ಗೆಲುವಿನ ಹಾದಿ ಸುಲಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.