ADVERTISEMENT

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ: ಲೋಕಾಯುಕ್ತ ಎಸ್ಪಿ ಕರ್ನೂಲ್

ಶರಣಬಸವ ವಿ.ವಿ.ಯಲ್ಲಿ ಜಾಗೃತಿ ಅರಿವು ಸಪ್ತಾಹ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 8:40 IST
Last Updated 5 ನವೆಂಬರ್ 2022, 8:40 IST
ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾಗೃತಿ ಅಭಿಯಾನದಲ್ಲಿ ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ಮಾತನಾಡಿದರು
ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾಗೃತಿ ಅಭಿಯಾನದಲ್ಲಿ ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ಮಾತನಾಡಿದರು   

ಕಲಬುರಗಿ: ಭ್ರಷ್ಟಾಚಾರ ಇಂದಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ತಾಂಡವವಾಡುತ್ತಿದೆ. ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಇದರ ನಿರ್ಮೂಲನೆಗೆ ಕೈಜೊಡಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಎ.ಆರ್. ಕರ್ನೂಲ್ ಕರೆ ನೀಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶನಿವಾರ ವಿಶ್ವವಿದ್ಯಾಲಯದ ರ‍್ಯಾಗಿಂಗ್ ವಿರೋಧಿ ಘಟಕ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ (ಎನ್‌ಎಸ್‌ಎಸ್) ಮತ್ತು ಎನ್‌ಸಿಸಿ ಘಟಕ ಹಾಗೂ ಲೋಕಾಯುಕ್ತ ಕಲಬುರಗಿ ಸಹಯೋಗದೊಂದಿಗೆ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದಲ್ಲಿ ಅವರು ಮಾತನಾಡಿದರು.

‘ಎಲ್ಲರಲ್ಲಿಯೂ ಇಂದು ನೈತಿಕ ಮೌಲ್ಯ ಕುಸಿಯುತ್ತಿದೆ. ನಮ್ಮಲ್ಲಿ ನ್ಯಾಯ ಬಡವರ ಬಗ್ಗೆ ಕಾಳಜಿ ಹಾಗೂ ಬೇರೆಯವರ ಬಗ್ಗೆ ಅನುಕಂಪ ಇರಬೇಕು. ಎಲ್ಲರೂ ಸಮಾನವೆಂಬ ಭಾವನೆ ಇರಬೇಕು ಹಾಗೂ ಇದನ್ನು ನಾವು ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

1984ರಲ್ಲಿ ಸ್ಥಾಪನೆಗೊಂಡ ಲೋಕಾಯುಕ್ತ ಸಂಸ್ಥೆಯು ಭ್ರಷ್ಟರ ವಿರುದ್ಧ ಸಮರ ಸಾರಿದೆ. ಅಧಿಕಾರದ ದುರುಪಯೋಗ ಪಡಿಸಿಕೊಂಡು ಹಣ ಅಥವಾ ಯಾವುದೇ ರೀತಿಯ ಉಡುಗೊರೆ ಮತ್ತು ಮಧ್ಯವರ್ತಿಯಾಗಿ ಹಣ ಪಡೆಯುವುದೂ ಭ್ರಷ್ಟಾಚಾರ ಎನಿಸುತ್ತದೆ. ಇಂದಿನ ದಿನಗಳಲ್ಲಿ ಭ್ರಷ್ಟಾಚಾರವು ಒಂದು ಸಾಮಾಜಿಕ ಪಿಡುಗಾಗಿದೆ. ಇದು ದೇಶದ ಆರ್ಥಿಕತೆಯ ಮೇಲೆ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಬೀರುತ್ತದೆ.ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹಾಗೂ ಎಡಿಜಿಪಿ ಪ್ರಶಾಂತಕುಮಾರ್ ಠಾಕೂರ್ ಅವರ ಸೂಚನೆ ಮೇರೆಗೆ ಜಿಲ್ಲೆಯ ವಿವಿಧೆಡೆ ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನವನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ಲೋಕಾಯುಕ್ತ ಡಿವೈೆಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಮಾತನಾಡಿ ‘ಅಕ್ಟೋಬರ್ 31ನೇ ತಾರೀಖಿನಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಆರಂಭವಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸಂಘ ಸಂಸ್ಥೆಗಳು ಯುವಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ದುರಾಸೆಯು ಮಾನವನ ದೌರ್ಬಲ್ಯ, ಇದರಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಅಡ್ಡದಾರಿ ಹಿಡಿದರೆ ಲೋಕಾಯುಕ್ತ ಕ್ರಮ ಕೈಗೊಳ್ಳುತ್ತದೆ’ ಎಂದು ಎಚ್ಚರಿಸಿದರು.

ನಂತರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು.

ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ನಾನಾಗೌಡ ಪಾಟೀಲ, ಅಕ್ಕಮಹಾದೇವಿ, ಧ್ರುವತಾರಾ, ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ವಿ.ಡಿ. ಮೈತ್ರಿ, ಡೀನ್ ಡಾ. ಲಕ್ಷ್ಮಿ ಪಾಟೀಲ ಮಾಕಾ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿನಿ ಶೀತಲ್ ಪ್ರಾರ್ಥಿಸಿದರೆ, ಪ್ರೊ. ರೇಣುಕಾ ಮತ್ತು ಪ್ರೊ. ಸುನೀತಾ ನಿರೂಪಿಸಿದರು. ಡಾ. ಶಿವಕುಮಾರ ಜವಳಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.