
ಕಲಬುರಗಿ: ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶಿವ ದೇವಸ್ಥಾನಗಳಲ್ಲಿ ಭಕ್ತರು ಶಿವನಾಮ ಸ್ಮರಣೆ ಮಾಡಿದರು.
ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ದೇವಸ್ಥಾನಗಳಲ್ಲಿ ಕ್ಷೀರ, ಮೊಸರು, ಗಂಧ, ಪಂಚಾಮೃತಾಭಿಷೇಕ, ಅರಿಶಿನ–ಕುಂಕುಮ, ಬಿಲ್ವಪತ್ರೆ ಅರ್ಚನೆ, ರುದ್ರಾಭಿಷೇಕ, ಹೋಮ ಹಾಗೂ ಹವನಗಳು ನಡೆದವು. ಭಕ್ತರು ಶ್ರದ್ಧಾಭಕ್ತಿಯಿಂದ ಶಿವನ ಧ್ಯಾನ ಮಾಡಿದರು.
ನಗರದ ರಾಮತೀರ್ಥ ದೇವಸ್ಥಾನ, ಸೇಡಂ ರಸ್ತೆಯ ಗೀತಾನಗರದಲ್ಲಿರುವ ಬ್ರಹ್ಮಕುಮಾರೀಸ್ ಅಮೃತ ಸರೋವರ ರಿಟ್ರೀಟ್ ಸೆಂಟರ್, ಗೋದುತಾಯಿ ಕಾಲೊನಿಯಲ್ಲಿರುವ ಶಿವಮಂದಿರ, ಸ್ಟೇಷನ್ ಬಜಾರ ಬಳಿ ಇರುವ ವಿಠ್ಠಲ ಮಂದಿರ, ನಗರದ ಖೂಬಾ ಪ್ಲಾಟ್‌ನಲ್ಲಿರುವ ಈಶ್ವರಲಿಂಗ ದೇವಸ್ಥಾನ, ಸಿಗ್ನಾಪುರದ ಮಹಾದೇವ ಮಂದಿರ, ಪ್ರಶಾಂತನಗರದ ಹನ್ನೆರಡು ಜ್ಯೋತಿರ್ಲಿಂಗ ದೇವಸ್ಥಾನ, ಸೈಯ್ಯದ್ ಚಿಂಚೋಳಿ ರಸ್ತೆಯಲ್ಲಿರುವ ವೈಷ್ಣೋದೇವಿ ಮಂದಿರ ಸೇರಿ ಹಲವು ದೇವಸ್ಥಾನಗಳಲ್ಲಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ನಗರದ ಖೂಬಾ ಪ್ಲಾಟ್‌ನಲ್ಲಿರುವ ಈಶ್ವರಲಿಂಗ ದೇವಸ್ಥಾನಕ್ಕೆ ಬಡಾವಣೆಯ ಸುತ್ತಲಿನ ಕಾಲೊನಿಗಳ ಜನರು ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.
ರಾಮತೀರ್ಥ–ಹರಿದು ಬಂದ ಭಕ್ತಗಣ: ನಗರದ ಆಳಂದ ರಸ್ತೆಯಲ್ಲಿ ಇರುವ ರಾಮತೀರ್ಥ ದೇವಸ್ಥಾನದಲ್ಲಿ ರಾಮತೀರ್ಥ ಅಮರನಾಥ ಸೇವಾ ಸಮಿತಿಯಿಂದ ಸುಮಾರು 51 ವರ್ಷಗಳಿಂದ ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ, ದಾಸೋಹ ಸೇವೆ ಮಾಡಲಾಯಿತು.
ಸಮಿತಿ ಅಧ್ಯಕ್ಷ ಸುನಿಲ್ ಬುದ್ವಾನಿ ನೇತೃತ್ವದಲ್ಲಿ ಭಾನುವಾರ ಶಿವಲಿಂಗಕ್ಕೆ ವಿಶೇಷ ಪೂಜೆ, ರುದ್ರಾಭಿಷೇಕ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
‘ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಬಂದು ಭಕ್ತರು ದೇವರ ದರ್ಶನ ಪಡೆದರು. ಬಂದ ಭಕ್ತರಿಗೆಲ್ಲ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9ರವರೆಗೆ ಸುಮಾರು 80 ಸಾವಿರಕ್ಕೂ ಹೆಚ್ಚು ಜನರು ಬಂದು ದರ್ಶನ ಪಡೆದುಕೊಂಡಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಸುನಿಲ್ ಬುದ್ವಾನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸಮಿತಿಯ ಬಲರಾಮ್ ಎ. ಬುದ್ವಾನಿ, ದಿಗಂಬರ್ ನಾಯಕ, ಕಮಲ ಬುದ್ವಾನಿ, ಸುಹಾಸ್ ಸೇರಿ ಇತರರು ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು.
ಜಿಲ್ಲೆಯ ಜನರ ಆರಾಧ್ಯ ಧೈವ ಶರಣಬಸವೇಶ್ವರ ದೇವಸ್ಥಾನದಲ್ಲೂ ಮಹಾಶಿವರಾತ್ರಿ ಅಂಗವಾಗಿ ಭಕ್ತರ ದಂಡೇ ಕಂಡುಬಂತು.
ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ, ಸರದಿ ಸಾಲಿನಲ್ಲಿ ನಿಂತು ಭಕ್ತರು ಶರಣಬಸವೇಶ್ವರ ದರ್ಶನ ಪಡೆದುಕೊಂಡರು. ಬಳಿಕ ಕಾಯಿ–ಕರ್ಪೂರ ಅರ್ಪಿಸಿ, ಪ್ರಸಾಮ ಮಹಾ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಅಪ್ಪನ ಕೆರೆಯ ರಸ್ತೆಯ ಪಕ್ಕದಲ್ಲಿರುವ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಲಾಯಿತು. ಪಂಚಮುಖವುಳ್ಳ ಶಿವನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು.
8 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಸ್ಥಾಪನೆ: ನಗರದ ಸ್ಟೇಷನ್ ಬಜಾರ್ ಪ್ರದೇಶದ ವಿಠ್ಠಲ ಮಂದಿರದಲ್ಲಿ ಎಂಟು ಅಡಿ ಎತ್ತರದ ಆದಿಯೋಗಿ ಪ್ರತಿಮೆ ಸ್ಥಾಪಿಸಲಾಗಿದೆ. ಸಂಜೆ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ಜರುಗಿತು. ಮಾತಾ ಜಾಗೃತ ರಜಪೂತ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಅಂಬಾಕೃಪಾ ನೃತ್ಯ ನಿಕೇತನ ಕಲಾ ತಂಡದಿಂದ ಭರತನಾಟ್ಯ ಪ್ರದರ್ಶನ ಹಾಗೂ ಶಿವ–ಪಾರ್ವತಿ ಮದುವೆ ಸಮಾರಂಭ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.