ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ತಗ್ಗಿದ ಮಕ್ಕಳ ಅಪೌಷ್ಟಿಕತೆ

ಆರ್.ಬಿ.ಎಸ್.ಕೆ. ಪರಿಣಾಮಾರಿ ಅನುಷ್ಠಾನ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:30 IST
Last Updated 20 ಡಿಸೆಂಬರ್ 2025, 5:30 IST
ಕಲಬುರಗಿ ಜಿಲ್ಲೆಯ ಶಾಲೆಯೊಂದರಲ್ಲಿ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು
ಕಲಬುರಗಿ ಜಿಲ್ಲೆಯ ಶಾಲೆಯೊಂದರಲ್ಲಿ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು   

ಕಲಬುರಗಿ: ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್.ಬಿ.ಎಸ್.ಕೆ) ಸಮರ್ಪಕ ಅನುಷ್ಠಾನದ ಫಲವಾಗಿ ಜಿಲ್ಲೆಯಾದ್ಯಂತ ಕಳೆದ ಮೂರು ವರ್ಷದಲ್ಲಿ ತೀವ್ರ ಮತ್ತು ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 30,882 ಮಕ್ಕಳ ಪೈಕಿ 27,466 ಮಕ್ಕಳು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ 0.003ರಿಂದ ಶೇ 0.002ಕ್ಕೆ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

‘2023-24ರಿಂದ 2025-26ನೇ ಸಾಲಿನ ಈತನಕ ಜಿಲ್ಲೆಯಾದ್ಯಂತ ತೀವ್ರ ಅಪೌಷ್ಟಿಕತೆಯ 2,372 ಮಕ್ಕಳನ್ನು ಗುರುತಿಸಿ 1,848 ಮಕ್ಕಳನ್ನು ಗುಣಪಡಿಸಲಾಗಿದೆ. 1,824 ಮಕ್ಕಳನ್ನು ಪೌಷ್ಟಿಕ ಪುನಃಶ್ಚೇತನ ಕೇಂದ್ರದಲ್ಲಿ ದಾಖಲಿಸಲಾಗಿದೆ. ಅದೇ ರೀತಿ ಮಧ್ಯಮ ಅಪೌಷ್ಟಿಕತೆ ಹೊಂದಿದ್ದ 28,510 ಮಕ್ಕಳನ್ನು ಗುರುತಿಸಿ, ಅದರಲ್ಲಿ 25,618 ಮಕ್ಕಳನ್ನು ಗುಣಪಡಿಸಲಾಗಿದೆ. ಅದರ ಪರಿಣಾಮ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದ ಹಿಂದಿನ ಅಂಕಿ-ಸಂಖ್ಯೆ ಗಮನಿಸಿದಾಗ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ 0.003 ರಿಂದ ಶೇ 0.002ಕ್ಕೆ ಇಳಿಕೆಯಾಗಿದೆ. ಇದು ಕೇಂದ್ರೀಕೃತ ಮಧ್ಯಸ್ಥಿಕೆಗಳ ಸಕಾರಾತ್ಮಕ ಪರಿಣಾಮ ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.

ಇನ್ನು, ಜಿಲ್ಲೆಯಾದ್ಯಂತ ಒಟ್ಟು ಎಂಟು ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇಲ್ಲಿಗೆ ದಾಖಲಿಸಿ ನುರಿತ ಮಕ್ಕಳ ವೈದ್ಯರಿಂದ ನಿರಂತರ ವೈದ್ಯಕೀಯ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಇದಲ್ಲದೆ ಜಿಲ್ಲೆಯ ಎಲ್ಲಾ ಆರೋಗ್ಯ ಉಪಕೇಂದ್ರಗಳಲ್ಲಿ ಹಾಗೂ ಕಂದಾಯ ಗ್ರಾಮಗಳಲ್ಲಿ ‘ಗ್ರಾಮ ಆರೋಗ್ಯ ಪೌಷ್ಟಿಕ ದಿನ’ ಆಚರಿಸಲಾಗುತ್ತಿದೆ. ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿಯರಿಗೆ ಹಾಗೂ ಅಪೌಷ್ಟಿಕತೆಯುಳ್ಳ ಮಕ್ಕಳ ತಾಯಂದಿರ ಸಭೆ ಮಾಡಿ ಪೌಷ್ಟಿಕತೆ, ನೈರ್ಮಲ್ಯತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವಿಶೇಷವಾಗಿ ಆಹಾರ ಪದ್ಧತಿ ಮತ್ತು ಮಕ್ಕಳ ಲಾಲನೆ-ಪಾಲನೆ ಬಗ್ಗೆ ತಿಳಿ ಹೇಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ADVERTISEMENT

247 ಜನರಿಗೆ ಉಚಿತ ಶಸ್ತ್ರಚಿಕಿತ್ಸೆ:

ರಾಷ್ಟ್ರೀಯ ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಸೀಳು ತುಟಿ ಮತ್ತು ಸೀಳು ಅಂಗುಳ, ಜನ್ಮಜಾತ ಹೃದಯ ಕಾಯಿಲೆಗಳು ಮತ್ತು ಸ್ಕೋಲಿಯೋಸಿಸ್‌ನಂತಹ ಸಮಸ್ಯೆ ಪತ್ತೆ ಹಚ್ಚಲು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ 96 ಜನ ಮಕ್ಕಳಿಗೆ ಸೀಳು ತುಟಿ ಮತ್ತು ಸೀಳು ಅಂಗುಳ, 146 ಮಕ್ಕಳಿಗೆ ಹೃದ್ರೋಗ ಸಂಬಂಧಿತ ಚಿಕಿತ್ಸೆ ಹಾಗೂ ಐದು ಮಕ್ಕಳಿಗೆ ಡೊಂಕು ಬೆನ್ನುಮೂಳೆಯ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆರ್.ಬಿ.ಎಸ್.ಕೆ. ವೈದ್ಯರ ತಂಡ ನಿರಂತರವಾಗಿ ಈ ಮಕ್ಕಳ ಆರೋಗ್ಯದ ಮೇಲುಸ್ತುವಾರಿ ವಹಿಸಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.