ADVERTISEMENT

ಕಮಲಾಪುರ: ಮೋಟರ್‌ ದುರಸ್ತಿಗೆ ಬಾವಿಗಿಳಿದ ವ್ಯಕ್ತಿ ಮುಳುಗಿ ಸಾವು

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 5:13 IST
Last Updated 8 ಜನವರಿ 2026, 5:13 IST
ಸಲೀಂ
ಸಲೀಂ   

ಕಮಲಾಪುರ: ತಾಲ್ಲೂಕಿನ ಓಕಳಿ ಗ್ರಾಮಕ್ಕೆ ನೀರೊದಗಿಸುವ ಗ್ರಾಮ ಪಂಚಾಯಿತಿಯ ಬಾವಿಯಲ್ಲಿ ಮೋಟರ್‌ ದುರಸ್ತಿಗೆ ಬಾವಿಗಿಳಿದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

ಇದೇ ಗ್ರಾಮದ ಸಲೀಂ ಚಿನ್ನುಸಾಬ್‌ ಮೋಮಿನ್‌ (38) ಮೃತ ವ್ಯಕ್ತಿ.

ಓಕಳಿ ಗ್ರಾಮಕ್ಕೆ ನೀರು ಸರಬರಾಜಾಗುವ ಬಾವಿಯಲ್ಲಿನ ಮೋಟರ ಕಳೆದ ಐದಾರು ದಿನಗಳ ಹಿಂದೆ ಕೆಟ್ಟಿತ್ತು. ನೀರು ಸರಬರಾಜಾಗುವ ಪೈಪ್‌ ಸಹ ಒಡೆದಿತ್ತು. ಪ್ರತಿ ಬಾರಿ ಗ್ರಾಮ ಪಂಚಾಯಿತಿ ಪಂಪ್ ದುರಸ್ತಿ ಮಾಡುತ್ತಿದ್ದ ರಘು ಎಂಬಾತರಿಗೆ ದುರಸ್ತಿಗೆ ಗುತ್ತಿಗೆ ನೀಡಲಾಗಿತ್ತು. ರಘು, ಸಲೀಂ ಸೇರಿದಂತೆ ಮೂವರು ಕಾರ್ಮಿಕರು ದುರಸ್ತಿಗೆ ತೆರಳಿದ್ದರು. ಇಬ್ಬರು ಪಂಪ್‌ ಆಪರೇಟರ್‌ ಸಹ ಜೊತೆಗಿದ್ದರು. ದುರಸ್ತಿಗೆಂದು ಸಲೀಂ ಬಾವಿಗಿಳಿದಿದ್ದಾರೆ. ಎರಡು ಬಾರಿ ಮುಳುಗಿ ಎದ್ದಿದ್ದಾರೆ. ಮೂರನೇ ಬಾರಿಗೆ ಒಳಗೆ ಮುಳುಗಿದವರು ಮೇಲೆ ಬಂದಿಲ್ಲ.

ADVERTISEMENT

‌‘ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿರುವುದರಿಂದ ದುರಸ್ತಿಗೆ ಗುತ್ತಿಗೆ ನೀಡಿ ಕಳುಹಿಸಿದ್ದೇವೆ. ಹೀಗೆಲ್ಲ ಒಳಗೆ ಮುಳುಗಿ ದುರಸ್ತಿ ಮಾಡುವುದು ನಮಗೆ ಗೊತ್ತಿಲ್ಲ’ ಎಂದು ಗ್ರಾಮ ‍ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಅಗ್ನಿ ಶಾಮಕ ಸಿಬ್ಬಂಧಿ ಆಗಮಿಸಿ ಕಾರ್ಯಚರಣೆ ನಡೆಸಿದ್ದು, ರಾತ್ರಿ 8ಕ್ಕೆ ಸಲೀಂ ಮೃತದೇಹ ಪತ್ತೆಯಾಗಿದೆ.

‘ಅಚಾತುರ್ಯದಿಂದ ಘಟನೆ ಸಂಭವಿಸಿದ್ದು, ಬಡ ಕಾರ್ಮಿಕ ಸಲೀಂ ಕುಟುಂಬಕ್ಕೆ ಸರ್ಕಾರ ಸಹಾಯ ಒದಗಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಹಶೀಲ್ದಾರ್‌ ಮೋಸಿನ ಅಹಮ್ಮದ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಪಾಟೀಲ ಹಾಗೂ ಕಮಲಾಪುರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.