ADVERTISEMENT

ಪಾತ್ರಧಾರಿಗಳ ಜೀವನ ಕ್ರಮವೇ ಬದಲಾಯಿತು

ಹಿರಿಯ ರಂಗಕರ್ಮಿ ಲಾಲ್‌ ಆಹ್ಮದ್‌ ಬಂದೇನವಾಜ್‌ ಖಲೀಫ್‌ ಆಲ್ದಾಳರ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 6:41 IST
Last Updated 26 ಆಗಸ್ಟ್ 2019, 6:41 IST
ಕಲಬುರ್ಗಿಯ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ನಡೆದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಲಾಲ್‌ ಅಹ್ಮದ್‌ ಬಂದೇನವಾಜ್‌ ಖಲೀಫ್ ಆಲ್ದಾಳ ಮಾತನಾಡಿದರು. ವೀರಭದ್ರ ಸಿಂಪಿ ಇದ್ದರು
ಕಲಬುರ್ಗಿಯ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ನಡೆದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಲಾಲ್‌ ಅಹ್ಮದ್‌ ಬಂದೇನವಾಜ್‌ ಖಲೀಫ್ ಆಲ್ದಾಳ ಮಾತನಾಡಿದರು. ವೀರಭದ್ರ ಸಿಂಪಿ ಇದ್ದರು   

ಕಲಬುರ್ಗಿ: ‘ನಾನು ರಚಿಸಿದ ಕಡಕೋಳ ಮಡಿವಾಳೇಶ್ವರ, ವಿಶ್ವರಾಧ್ಯ ಸೇರಿದಂತೆ ವಿವಿಧ ಶರಣರ ಸಂತರ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರು ತಮ್ಮ ಬದುಕಿನಲ್ಲಿ ಪರಿವರ್ತನೆ ತಂದುಕೊಂಡು ಶರಣರ ಆದರ್ಶಗಳನ್ನು ಅಳವಡಿಸಿಕೊಂಡಿದ್ದು ನನಗೆ ಖುಷಿ ಕೊಟ್ಟಿದೆ’ ಎಂದು ಹಿರಿಯ ರಂಗಕರ್ಮಿ ಲಾಲ್‌ ಅಹ್ಮದ್‌ ಬಂದೇನವಾಜ್‌ ಖಲೀಫ್ ಆಲ್ದಾಳ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಮನದಾಳದ ಮಾತು’ ಸಮಾರಂಭದಲ್ಲಿ ತಮ್ಮ ರಂಗಭೂಮಿ ದಿನಗಳನ್ನು ಮೆಲುಕು ಹಾಕಿದರು.

ಕಡಕೋಳ ಮಡಿವಾಳೇಶ್ವರ ನಾಟಕ ಯಡ್ರಾಮಿಯಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ಬದುಕಿನಲ್ಲಿ ಏಳು ಬೀಳುಗಳನ್ನು ಕಂಡರೂ ನಾಟಕ ರಚನೆಯನ್ನು ಮುಂದುವರಿಸಿದೆ. ಹಲವಾರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ನನ್ನದೇಯಾದ ಕಂಪನಿ ಕಟ್ಟಿ ಕೈಸುಟ್ಟುಕೊಂಡೆ. ಇದ್ದ ಮೂರು ಎಕರೆ ಜಮೀನೂ ಕಳೆದುಕೊಂಡೆ. ಇಷ್ಟೆಲ್ಲ ಆದರೂ ನನ್ನ ಬದುಕು ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ನಾಟಕಗಳೇ ನನಗೆ ಧೈರ್ಯ ತುಂಬಿದವು. ಮನುಷ್ಯನಿಗೆ ಕಷ್ಟಗಳು ಬರಬೇಕು. ಕಷ್ಟಗಳ ಕುಲುಮೆಯಲ್ಲಿ ಬೆಂದಾಗಲೇ ಸ್ಫುಟವಾದ ಚಿನ್ನವಾಗಿ ಹೊರಹೊಮ್ಮಲು ಸಾಧ್ಯ. ರಂಗಭೂಮಿ ನನಗೆ ಸಾಕಷ್ಟು ನೀಡಿದೆ. ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಸಿಕ್ಕಿದೆ. ಗುಲಬರ್ಗಾ ವಿ.ವಿ. ಎಂ.ಎ. ಪಠ್ಯದಲ್ಲಿ ನನ್ನ ನಮಸ್ಕಾರ ನಾಟಕ ಸೇರ್ಪಡೆಯಾಗಿತ್ತು ಎಂದರು.

ADVERTISEMENT

ವಿಜಯಪುರ ಜಿಲ್ಲೆ ಬನ್ನಟ್ಟಿ ಗ್ರಾಮದಲ್ಲಿ ಜನಿಸಿದ ನಾನು ಮೂರೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡೆ. ನಂತರ ತಾಯಿಯ ತವರು ಮನೆಯಾದ ಆಲ್ದಾಳ ನಂತರ ಮಳ್ಳಿ ಗ್ರಾಮದಲ್ಲಿರುವ ಚಿಕ್ಕಮ್ಮನ ಆಸರೆಯಲ್ಲಿ ಬೆಳೆದೆ. ಏಳನೇ ತರಗತಿಯವರೆಗೆ ಓದಿದೆ. ಸೋದರಮಾವ ಡಪ್ಪಿನಾಟ, ಬಯಲಾಟದ ಪದಗಳನ್ನು ಹಾಡುತ್ತಿದ್ದುದರಿಂದ ಅದರ ಪ್ರಭಾವಕ್ಕೆ ಒಳಗಾಗಿ ರಂಗಭೂಮಿಗೆ ಪದಾರ್ಪಣೆ ಮಾಡಿದೆ ಎಂದು ಹೇಳಿದರು.

ಕನಕಾಂಗಿ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ನಾಟಕದಲ್ಲಿ ಅಭಿನಯಿಸಲು ಆರಂಭಿಸಿದೆ. ಪತಿಭಕ್ತಿ ನಾನು ಬರೆದ ಮೊದಲ ನಾಟಕ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಸ್‌.ಮಾಲಿಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಮಡಿವಾಳಪ್ಪ ನಾಗರಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ತಮ್ಮಣ್ಣ ಹೂಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.