ADVERTISEMENT

ಮಂತ್ರಾಲಯದಲ್ಲಿ ಶ್ರೀ ಗುರು ವೈಭವೋತ್ಸವ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 11:07 IST
Last Updated 9 ಮಾರ್ಚ್ 2019, 11:07 IST
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಪಾದುಕೆಗಳನ್ನು ಶುಕ್ರವಾರ ಸಿಂಹಾಸನದ ಮೇಲಿಟ್ಟು ಅಭಿಷೇಕ ನೆರವೇರಿಸಿ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ ನೀಡಿದರು
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಪಾದುಕೆಗಳನ್ನು ಶುಕ್ರವಾರ ಸಿಂಹಾಸನದ ಮೇಲಿಟ್ಟು ಅಭಿಷೇಕ ನೆರವೇರಿಸಿ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ ನೀಡಿದರು   

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 424ನೇ ವರ್ಧಂತಿ ಉತ್ಸವ ಮತ್ತು 398ನೇ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಆರು ದಿನಗಳ ಶ್ರೀ ರಾಘವೇಂದ್ರ ಗುರು ವೈಭವೋತ್ಸವವು ಶುಕ್ರವಾರ ಸಂಭ್ರಮದಿಂದ ಆರಂಭವಾಯಿತು.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಪಾದುಕೆಗಳನ್ನು ಸುವರ್ಣ ಸಿಂಹಾಸನದಲ್ಲಿ ಇರಿಸಿ ಪಟ್ಟಾಭಿಷೇಕ ನೆರವೇರಿಸಿದರು. ವಿಶೇಷ ಅಭಿಷೇಕ, ಪೂಜೆಗಳು ಜರುಗಿದವು. ಆನಂತರ ಮಠದ ಪ್ರಾಕಾರದಲ್ಲಿ ನಡೆದ ಸುವರ್ಣ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು, ‘ರಾಘವೇಂದ್ರ ಸ್ವಾಮಿಗಳ ಹುಟ್ಟುಹಬ್ಬ ಮತ್ತು ಪೀಠಾಧಿಪತ್ಯದ ಈ ದಿನವು ಪವಿತ್ರವಾಗಿದೆ. ಇಡೀ ವಿಶ್ವದಲ್ಲಿ ಧಾರ್ಮಿಕ, ಭಕ್ತಿಭಾವ ಸೃಷ್ಟಿಸುವ ಮೂಲಕ ರಾಯರು ಸತ್ಯ, ಧರ್ಮದ ಮಾನವೀಯ ಮೌಲ್ಯಗಳನ್ನು ಜೀವನದ ಉಸಿರಾಗಿರಿಸಿಕೊಂಡಿದ್ದ ಮಹಾನುಭಾವ. ಇಂಥ ಅಪೂರ್ವ ದಿನವು ಭಕ್ತರಿಗೆ ಮುಖ್ಯವಾದದ್ದು’ ಎಂದರು.

ADVERTISEMENT

ಮಾರ್ಚ್‌ 13ರಂದು ವರ್ಧಂತಿ ಉತ್ಸವವಿದ್ದು 450 ವಾದ್ಯ ಕಲಾವಿದರು ಪ್ರಾತಃಕಾಲದಿಂದ ರಾತ್ರಿವರೆಗೂ ‘ನಾದಹಾರ ಸಮರ್ಪಣೆ’ ಮಾಡುವರು. ತಿರುಪತಿ ತಿರುಮಲ ಶ್ರೀ ಶ್ರೀನಿವಾಸ ದೇವಸ್ಥಾನದಿಂದ ಶೇಷವಸ್ತ್ರ ಸಮರ್ಪಿಸಲಾಗುವುದು. ಪ್ರತಿನಿತ್ಯ ಅನ್ನಪ್ರಸಾದ, ಅಭಿಷೇಕ, ವಿಶೇಷ ಪೂಜೆಗಳು, ಅರ್ಚನೆ ನಡೆಯಲಿವೆ. ಸಂಗೀತ, ಸಾಂಸ್ಕೃತಿಕ ಮತ್ತು ನೃತ್ಯರೂಪಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

12ಕ್ಕೆ ಮಹಾರುದ್ರಯಾಗ: ದೇಶಕ್ಕೆ ಮತ್ತು ಸೈನಿಕರಿಗೆ ಒಳಿತಾಗಬೇಕು ಎಂಬ ಉದ್ದೇಶದಿಂದ ಮಠದಲ್ಲಿ ಮಾರ್ಚ್‌ 12 ರಂದು ಮಹಾರುದ್ರ ಯಾಗ ಏರ್ಪಡಿಸಲಾಗಿದೆ. ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.