ADVERTISEMENT

ಕೃಷಿ ಪದವಿ: ವಿಪುಲ ಉದ್ಯೋಗ ಅವಕಾಶ- ಮಾರ್ಗದರ್ಶನ ನೀಡಿದ ಕೆ.ಎಚ್‌. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 3:47 IST
Last Updated 23 ಅಕ್ಟೋಬರ್ 2021, 3:47 IST
ಕಮಲಾಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವೃತ್ತಿಪರ ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಕೆ.ಎಚ್‌. ರಾಘವೇಂದ್ರ ಮಾತನಾಡಿದರು. ಪ್ರಾಚಾರ್ಯೆ ಶಶಿಕಲಾ ಮಾಲಿ ಪಾಟೀಲ ಇದ್ದರು
ಕಮಲಾಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವೃತ್ತಿಪರ ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಕೆ.ಎಚ್‌. ರಾಘವೇಂದ್ರ ಮಾತನಾಡಿದರು. ಪ್ರಾಚಾರ್ಯೆ ಶಶಿಕಲಾ ಮಾಲಿ ಪಾಟೀಲ ಇದ್ದರು   

ಕಮಲಾಪುರ: ಕೃಷಿ ಕ್ಷೇತ್ರಕ್ಕೆ ಸಂಬಂಧಿತ ಅಗ್ರಿಕಲ್ಚರ್‌ ಡಿಪ್ಲೊಮಾ, ಬಿಎಸ್‌ಸಿ, ಎಂಎಸ್ಸಿ ಮತ್ತಿತರ ಪ‍ದವಿ ಪಡೆದವರಿಗೆ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗ ಅವಕಾಶಗಳಿವೆ ಎಂದು ಅಗ್ರಿನೊಸ್ ಇಂಡಿಯ ಕಂಪನಿಯ ದಕ್ಷಿಣ
ಭಾರತದ ವ್ಯವಸ್ಥಾಪಕ ಕೆ.ಎಚ್‌. ರಾಘವೇಂದ್ರ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿಪರ ಮಾರ್ಗದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದು.

ಬಿಎಸ್‌ಸಿ ಅಗ್ರಿಯಲ್ಲಿ ಸಮಾಜ ಶಾಸ್ತ್ರ, ಎಂಜಿನಿಯರಿಂಗ್‌, ಸಂಖ್ಯಾಶಾಸ್ತ್ರ, ಆಹಾರ, ತಂತ್ರಜ್ಞಾನ ಅಭಿವೃದ್ಧಿ, ಸಸ್ಯ ಶಾಸ್ತ್ರ, ಜೀವಶಾಸ್ತ್ರ ಮತ್ತಿತರ ವಿಷಯಗಳ ಜ್ಞಾನ ಒಳಗೊಂಡಿರುತ್ತದೆ. ಬಿಎಸ್‌ಸಿ ಅಗ್ರಿ ಪದವಿ ಪಡೆದವರು ವೈದ್ಯಕೀಯ ಕ್ಷೇತ್ರ ಒಂದನ್ನು ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದರು.

ADVERTISEMENT

ಐಎಎಸ್‌, ಐಎಫ್‌ಎಸ್‌, ಕೆಎಎಸ್‌ ಮುಂತಾದವುಗಳಲ್ಲಿ ಬಿಎಸ್‌ಸಿ ಅಗ್ರಿ ಪದವಿಯವರೆ ಹೆಚ್ಚು ನೇಮಕವಾಗುತ್ತಾರೆ. ಜೊತೆಗೆ ಕೃಷಿ, ರೇಷ್ಮೆ, ತೋಟಗಾರಿಕೆ, ಆಹಾರ ಸಂಸ್ಕರಣೆ, ಉತ್ಪಾದನೆ, ಕೃಷಿ ಎಂಜಿನಿಯರಿಂಗ್‌, ಜೈವಿಕ ತಂತ್ರಜ್ಞಾನ, ನರ್ಸರಿ, ಬೀಜೋತ್ಪಾದನೆ, ಫರ್ಟಿಲೈಜರ್‌ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಬಿಎಸ್‌ಸ್ಸಿ ಅಗ್ರಿಗೆ ದಾಖಲಾಗುವುದು ಸವಾಲಿನ ಕೆಲಸವಾಗಿದ್ದು, ರೈತರ ಮಕ್ಕಳಿಗೆ ಶೇ 50 ರಷ್ಟು ಮೀಸಲಾತಿ ಒದಗಿಸಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಬೇರೆ ಪದವಿಗಳಿಗೆ ಹೋಲಿಸಿದರೆ ಬಿಎಸ್‌ಸಿ ಪದವಿಗೆ ಖರ್ಚು ಕಡಿಮೆ. ಸತತ ಅಧ್ಯಯನ ಅಗತ್ಯ. ವಿದ್ಯಾರ್ಥಿಗಳು ಈ ಪದವಿ ಪಡೆಯುವುದು ಒಳಿತು ಎಂದು ತಿಳಿಸಿದರು.

ಪ್ರಾಚಾರ್ಯರಾದ ಶಶಿಕಲಾ ಮಾಲಿ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ನಮ್ಮ ಮಕ್ಕಳಿಗೆ ಬೋಧನೆ ಜೊತೆಗೆ ವೃತ್ತಿಪರ ಮಾರ್ಗದರ್ಶನ ಒದಗಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ವಿಭಿನ್ನ ಪದವಿಗಳನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನುಭವಿಗಳಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಪಿಯುಸಿ ನಂತರ ಪದವಿ ಪ್ರವೇಶ, ವೃತ್ತಿ ಆಯ್ಕೆ ಕುರಿತು ಮಾಹಿತಿ ದೊರೆಯಲಿದೆ. ಇದರಿಂದ ವಿದ್ಯಾರ್ಥಿಗಳ ಜೀವನದ ದಾರಿ ಸುಗಮಗೊಳ್ಳಲಿದೆ ಎಂದರು.

ಉಪನ್ಯಾಸಕರಾದ ಮಲ್ಲಿಕಾರ್ಜುನ ವಾಲಿ, ಭೀಮರಾವ ಹೂಗಾರ,ಕಲ್ಪನಾ ಆರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.