ADVERTISEMENT

‘ಔಷಧಿ ತಯಾರಿಕೆಗೆ ಯಂತ್ರೋಪಕರಣ ನೀಡಿ’

ಪಾರಂಪರಿಕ ವೈದ್ಯ ಪರಿಷತ್ ಜಿಲ್ಲಾ ಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 16:29 IST
Last Updated 10 ಅಕ್ಟೋಬರ್ 2023, 16:29 IST
ಕಲಬುರಗಿಯ ಬಬಲಾದಿ ಮಠದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಡಾ.ನಿರ್ಮಲಾ ಕೆಳಮನಿ ಅವರು ಮಾತನಾಡಿದರು
–ಪ್ರಜಾವಾಣಿ ಚಿತ್ರ
ಕಲಬುರಗಿಯ ಬಬಲಾದಿ ಮಠದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಡಾ.ನಿರ್ಮಲಾ ಕೆಳಮನಿ ಅವರು ಮಾತನಾಡಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರಾದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಪಾರಂಪರಿಕ ವೈದ್ಯರ ಜ್ಞಾನಾಭಿವೃದ್ಧಿಗೆ ಆಯುಷ್ ಇಲಾಖೆಯಿಂದ ವೈದ್ಯರಿಗೆ ತರಬೇತಿ ನೀಡಬೇಕು. ಔಷಧಿ ತಯಾರಿಕೆಯ ಯಂತ್ರೋಪಕರಣ ನೀಡಿ, ಪ್ರತಿ ಕುಟುಂಬಕ್ಕೆ ವಿಮಾ ಯೋಜನೆ ಜಾರಿಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಕ್ಕೊತ್ತಾಯ ಮಂಡಿಸಿತು.

ನಗರದ ಬಬಲಾದಿ ಮಠದಲ್ಲಿ ಮಂಗಳವಾರ ನಡೆದ ಪಾರಂಪರಿಕ ವೈದ್ಯ ಪರಿಷತ್ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪರಿಷತ್ ಮುಖಂಡರು ತಮ್ಮ ಬೇಡಿಕೆಗಳನ್ನು ಕೆಕೆಆರ್‌ಡಿಬಿ ಮುಂದಿಟ್ಟರು.

ಪ್ರತಿ ತಾಲ್ಲೂಕಿನಲ್ಲಿ ಧನ್ವಂತರಿ ಭವನ ನಿರ್ಮಾಣ ಮಾಡಬೇಕು. ವೈದ್ಯ ಪರಿಷತ್ ನಡೆಸುವ ಮೂರು ದಿನದ ಸಮ್ಮೇಳನಕ್ಕೆ ಸಹಾಯಧನ ಕೊಡಬೇಕು. ಮಂಡಳಿಯಿಂದ ಆಯೋಜನೆಗೊಳ್ಳುವ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾರಂಪರಿಕ ಚಿಕಿತ್ಸೆಗಳನ್ನು ಸಾರ್ವಜನಿಕರಿಗೆ ತಿಳಿಸುವಂತಹ ಕಾರ್ಯ ಮಾಡಬೇಕು ಎಂದು ಕೋರಿದರು.

ADVERTISEMENT

ಈ ವೇಳೆ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಎಂಬಿಬಿಎಸ್ ಪಡೆದವರು ಗ್ರಾಮೀಣ ಭಾಗಕ್ಕೆ ಹೋಗಿ ರೋಗಿಗಳಿಗೆ ಚಿಕಿತ್ಸೆ ಕೊಡಲು ಮುಂದಾಗುತ್ತಿಲ್ಲ. ಆದರೆ, ಪಾರಂಪರಿಕ ವೈದ್ಯರು ನಾರು ಬೇರಿನ ಗಿಡಮೂಲಿಕೆಗಳಿಂದ ಗ್ರಾಮೀಣ ಭಾಗದ ಹಲವರಿಗೆ ಚಿಕಿತ್ಸೆ ಕೊಡುತ್ತಿರುವುದು ಶ್ಲಾಘನೀಯ. ನಿಮ್ಮ ಸಮಸ್ಯೆಗಳನ್ನು ಸರ್ಕಾರ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ಅಫಜಲಪುರ ಹಿರೇಮಠ ಸಂಸ್ಥಾನದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ‘ಪಾರಂಪರಿಕ ವೈದ್ಯ ಪದ್ಧತಿಗೆ ತನ್ನದೇ ಆದ ಶಕ್ತಿ ಇದೆ. ಅದಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಸರ್ಕಾರ ಪಾರಂಪರಿಕ ವೈದ್ಯ ಆಯೋಗ ರಚಿಸಿ, ಪ್ರತಿವರ್ಷ ₹ 10 ಕೋಟಿ ಅನುದಾನ ನೀಡಬೇಕು. ಪಾರಂಪರಿಕ ವೈದ್ಯರ ಜೀವನ ತುಂಬಾ ಕಷ್ಟಕರವಾಗಿದೆ. ಅವರ ಕಷ್ಟಗಳ ನಿವಾರಣೆಗೆ ಸರ್ಕಾರ ಮುಂದಾಗಬೇಕಿದೆ’ ಎಂದರು.

ಶಾಂತಲಿಂಗ ಸ್ವಾಮೀಜಿ, ಬಸವಭೂಷಣ ಸ್ವಾಮೀಜಿ, ಪರಿಷತ್ ರಾಜ್ಯಾಧ್ಯಕ್ಷ ಆನಂದ ಹೇರೂರ, ಪದಾಧಿಕಾರಿಗಳಾದ ಬಸವರಾಜ ದೇಗಲಮಡಿ, ರಮೇಶ ಗಂಜಿ, ಸುರೇಶ ಕುಲಕರ್ಣಿ ಇದ್ದರು.

ಕಲಬುರಗಿಯ ಬಬಲಾದಿ ಮಠದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು–ಪ್ರಜಾವಾಣಿ ಚಿತ್ರ

‘ವಿದ್ಯಾರ್ಥಿಗಳಿಗೆ ಜ್ಞಾನ ಹಂಚಿ’

‘ಪಾರಂಪರಿಕ ಹಿರಿಯ ವೈದ್ಯರು ತಾವು ಅನುಭವದಿಂದ ಗಳಿಸಿದ ಜ್ಞಾನ ಗಿಡಮೂಲಿಕಗಳ ಸಂಗ್ರಹ ಬೆಳೆಯುವ ವಿಧಾನವನ್ನು ಆಯುರ್ವೇದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು’ ಎಂದು ವಿಶೇಷ ಉಪನ್ಯಾಸ ನೀಡಿದ ಹಿಂಗುಲಾಂಬಿಕಾ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ.ನಿರ್ಮಲಾ ಕೆಳಮನಿ ಕೋರಿದರು. ‘ಆಯುರ್ವೇದ ವೈದ್ಯರು ಆಯುರ್ವೇದ ಸಂಹಿತೆ ಅನುಸಾರವೇ ಚಿಕಿತ್ಸೆ ಔಷಧಿ ಕೊಡಬೇಕಾಗುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ರೀತಿ ಔಷಧಿ ಚಿಕಿತ್ಸೆ ಕೊಡಬೇಕು ಎಂಬುದು ಗೊತ್ತಾಗಲ್ಲ. ಹೀಗಾಗಿ ಅವರಿಗೆ ಹಿರಿಯ ಪಾರಂಪರಿಕ ವೈದ್ಯರ ಸಲಹೆ ಮಾರ್ಗದರ್ಶನ ಚಿಕಿತ್ಸಾ ವಿಧಾನ ತಿಳಿಸಿಕೊಡಬೇಕು’ ಎಂದು ಹೇಳಿದರು. ‘ಹಸಿರು ಬಣ್ಣ ಕಹಿ ವಾಸನೆಯಿಂದಾಗಿ ಕೆಲವು ರೋಗಿಗಳು ಪಾರಂಪರಿಕ ಔಷಧಿ ಸ್ವೀಕರಿಸಲು ಮುಂದಾಗುತ್ತಿಲ್ಲ. ಹೀಗಾಗಿ ಔಷಧಿ ತಯಾರಿಕೆಯ ವಿಧಾನವನ್ನು ಬದಲಾಯಿಸಿಕೊಳ್ಳಬೇಕಿದೆ. ಮಾತ್ರೆ ಟಾನಿಕ್ ಜೆಲ್‌ ರೂಪದಲ್ಲಿ ರೋಗಿಗಳಿಗೆ ಹಿಡಿಸುವಂತೆ ತಯಾರಿಸುವ ವಿಧಾನವನ್ನು  ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.