ADVERTISEMENT

ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಸೂಚನೆ

ಕಂದಾಯ ಸಚಿವ ಆರ್‌.ಅಶೋಕ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:09 IST
Last Updated 29 ಫೆಬ್ರುವರಿ 2020, 14:09 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. ಸಂಸದ ಡಾ.ಉಮೇಶ್ ಜಾಧವ್, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಶರತ್ ಬಿ, ಶಾಸಕ ಬಸವರಾಜ ಮತ್ತಿಮೂಡ ಇದ್ದರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. ಸಂಸದ ಡಾ.ಉಮೇಶ್ ಜಾಧವ್, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್, ಜಿಲ್ಲಾಧಿಕಾರಿ ಶರತ್ ಬಿ, ಶಾಸಕ ಬಸವರಾಜ ಮತ್ತಿಮೂಡ ಇದ್ದರು   

ಕಲಬುರ್ಗಿ: ಕಂದಾಯ ಇಲಾಖೆಯ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಧ್ಯವರ್ತಿಗಳ ಹಾವಳಿ ಇರದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್ತಹಸೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿವರ್ಷ ಬಜೆಟ್‍ನಲ್ಲಿ ವೃದ್ಧಾಪ್ಯ ವೇತನಕ್ಕಾಗಿಯೇ ₹ 7,500 ಕೋಟಿ ಬಿಡುಗಡೆ ಮಾಡಲಾಗುತ್ತಿದೆ.ರಾಜ್ಯದಲ್ಲಿ 70ರಿಂದ 80 ಸಾವಿರ ವೃದ್ಧಾಪ್ಯ ವೇತನ ಪಡೆಯುವ ಬೋಗಸ್ ಫಲಾನುಭವಿಗಳಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಫಲಾನುಭವಿಗಳ ಮನೆಗೇ ವೃದ್ಧಾಪ್ಯ ವೇತನದ ಅರ್ಜಿಯನ್ನು ಭರ್ತಿ ಮಾಡಿಸಲು ಕಳಿಸಲಾಗುತ್ತದೆ’ ಎಂದರು.

ಬಳ್ಳಾರಿ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಮುಂದಿನ ತಿಂಗಳು ಜಾರಿಗೆ ತರಲಾಗುತ್ತಿದೆ. ಇದು ನನ್ನ ಕನಸಿನ ಯೋಜನೆಯಾಗಿದೆ. ಬಡವರಿಗೆ ಅನುಕೂಲವಾಗುವ ಈ ಯೋಜನೆ ಯಶಸ್ವಿ ಹಾಗೂ ಜನಪ್ರಿಯವಾಗಬೇಕು ಎಂದು ಆಶಿಸಿದರ.

ADVERTISEMENT

ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್‌. ನಕುಲ್ ಅವರಿಗೆ ಈ ಬಗ್ಗೆ ಸಂಪೂರ್ಣ ಜ್ಞಾನವಿದ್ದು, ಅವರಿಂದ ಮಾಹಿತಿ ಪಡೆಯಬೇಕು. ಈ ಕುರಿತು ವಿಭಾಗ ಮಟ್ಟದ ಜಿಲ್ಲಾಧಿಕಾರಿಗಳ ಸಭೆ ಕರೆದು, ಪರಿಶೀಲನೆ ನಡೆಸಬೇಕೆಂದು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್. ವಿ. ಪ್ರಸಾದ್ ಅವರಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಪ್ರತಿ ತಿಂಗಳಲ್ಲಿ ಹೋಬಳಿ ಮಟ್ಟದ ಜನಸ್ಪಂದನ ಸಭೆಗಳನ್ನು ನಡೆಸುತ್ತಿದ್ದು, ಈಗ ಪ್ರತಿ ಗ್ರಾಮಗಳಿಗೆ ತೆರಳುವುದರಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರೊಂದಿಗೆ ಸಂಪರ್ಕ ಸಾಧ್ಯವಾಗುತ್ತದೆ. ಅವರಿಂದ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡಿದಂತಾಗುತ್ತದೆ. ಇದೊಂದು ಉತ್ತಮ ಕಾರ್ಯವಾಗಿದ್ದು, ತಾವು ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.

ಇದಕ್ಕೂ ಮೊದಲು, ಜಿಲ್ಲೆಯಲ್ಲಿನ ಬರಪರಿಸ್ಥಿತಿ ಬಗ್ಗೆ ಸರಿಯಾಗಿ ಮಾಹಿತಿ ನೀಡದಿದ್ದಕ್ಕೆ ಅಫಜಲಪುರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್‌ ಅವರನ್ನು ಸಚಿವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ‘ಪ್ರತಿ ಸಭೆಯಲ್ಲಿ ಸರಿಯಾದ ಅಂಕಿ–ಅಂಶಗಳ ಮಾಹಿತಿ ನೀಡುತ್ತಿಲ್ಲ ಎಂದು ತಹಶೀಲ್ದಾರರ ಬಗ್ಗೆ ಗರಂ ಆದರು. ಪ್ರವಾಹ ಸಂದರ್ಭದಲ್ಲಿ ಅಫಜಲಪುರ ತಾಲ್ಲೂಕಿನಲ್ಲಿ ಹಲವು ಮನೆಗಳು ಹಾನಿಗೀಡಾಗಿವೆ. ಕೇವಲ ಒಂದು ಮನೆ ಎಂದು ತಹಶೀಲ್ದಾರರು ಹೇಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಿ, ತಹಶೀಲ್ದಾರರು ಪಾಲಿಸಬೇಕಾದ ಕರ್ತವ್ಯಗಳು ಹಾಗೂ ನಿಯಮಗಳ ಬಗ್ಗೆ ತಿಳಿಹೇಳಬೇಕು ಎಂದರು.

ಶರತ್ಮಾ ತನಾಡಿ, ಆಗಸ್ಟ್ 2019ರಿಂದ ಫೆಬ್ರುವರಿ 2020ರವರೆಗಿನ ‘ಸಕಾಲ’ದಲ್ಲಿ ಪ್ರಗತಿ ಬಗ್ಗೆ ವಿವರಿಸಿ ಜನವರಿ ತಿಂಗಳಲ್ಲಿ ಮೊದಲ ರ‍್ಯಾಂಕ್ ಸೇರಿದಂತೆ ಕಂದಾಯ ಇಲಾಖೆ ಜಿಲ್ಲೆಯಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಸಚಿವರ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.