ಚಿಂಚೋಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಚಿಂಚೋಳಿ ತಾಲ್ಲೂಕು ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ದಾಖಲೆಯ ಸಂಖ್ಯೆಯ ಮಾನವ ದಿನಗಳನ್ನು ಸೃಜಿಸಿದೆ.
ತಾಲ್ಲೂಕಿನಲ್ಲಿ ಕಾರ್ಮಿಕರು ಮುಂಬಯಿ, ಹೈದರಾಬಾದ್, ಬೆಂಗಳೂರಿಗೆ ಗುಳೆ ಹೋಗುವುದು ಸಾಮಾನ್ಯ. 9,99,782 ಮಾನವ ದಿನಗಳ ಸೃಜನೆಯ ಗುರಿಹೊಂದಿದ್ದ ತಾಲ್ಲೂಕಿನಲ್ಲಿ 9,73,209 ಮಾನವ ದಿನಗಳನ್ನು ಸೃಜಿಸಿ ಕಾರ್ಮಿಕರ ಬದುಕು ಹಸನುಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.
2022-23ನೇ ಸಾಲಿನಲ್ಲಿ 7,86,307 ಮಾನವ ದಿನ ಸೃಜಿಸಿದರೆ, 2023-24ರಲ್ಲಿ 8,60,009 ಮಾನವ ದಿನಗಳನ್ನು ಸೃಜಿಸಲಾಗಿತ್ತು. ಪ್ರಸಕ್ತ ವರ್ಷ ಜಿಲ್ಲೆಯಲ್ಲಿಯೇ 9.73 ಲಕ್ಷ ಮಾನವ ದಿನ ಸೃಜಿಸಿದ ತಾಲ್ಲೂಕು ಬೇರೊಂದಿಲ್ಲ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ್.
ತಾಲ್ಲೂಕಿನ ಒಟ್ಟು 27 ಗ್ರಾಮ ಪಂಚಾಯಿತಿಯಲ್ಲಿ 10 ಗ್ರಾಮ ಪಂಚಾಯಿತಿಗಳು ಶೇ 100ಕ್ಕೂ ಅಧಿಕ ಮಾನವ ದಿನ ಸೃಜಿಸಿದರೆ, ಉಳಿದ 17 ಗ್ರಾಮ ಪಂಚಾಯಿತಿಗಳಲ್ಲಿ 15 ಗ್ರಾಮ ಪಂಚಾಯಿತಿ ಸಾಧಾರಣ ಸಾಧನೆ ಮಾಡಿವೆ.
ಚಿಮ್ಮನಚೋಡ ಶೇ 148, ವೆಂಕಟಾಪುರ ಶೇ 142, ನಾಗಾಈದಲಾಯಿ ಶೇ 123, ಕುಂಚಾವರಂ ಶೇ 121, ಗಾರಂಪಳ್ಳಿ ಶೇ 114, ಐನಾಪುರ ಶೇ 112, ಐನೋಳ್ಳಿ ಶೇ 107, ಚಿಮ್ಮಾಈದಲಾಯಿ ಶೇ 102 ಸಾಧನೆ ಮಾಡಿವೆ. ನಿರುದ್ಯೋಗ, ಗುಳೆ ಸಮಸ್ಯೆ ವ್ಯಾಪಕವಾಗಿರುವ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಉತ್ತಮ ಸಾಧನೆ ಮೆರೆದಿದೆ.
ಕಳೆದ ಮೂರು ವರ್ಷಗಳಲ್ಲಿಯೇ ಉದ್ಯೋಗ ಖಾತ್ರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ದುಡಿಯುವ ಜನರ ಕೈಗೆ ಕೆಲಸ ನೀಡಿದ್ದೇವೆಶಂಕರ ರಾಠೋಡ್, ಇಒ, ತಾ.ಪಂ. ಚಿಂಚೋಳಿ
ಅಂಕಿಅಂಶಗಳನ್ನು ಆಧರಿಸಿ ನೋಡಿದರೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಶಹಾಬಾದ್, ಯಡ್ರಾಮಿ ಮತ್ತು ಕಮಲಾಪುರ ಚಿಕ್ಕ ತಾಲ್ಲೂಕುಗಳು ಶೇ 100ಕ್ಕಿಂತಲೂ ಹೆಚ್ಚು ಸಾಧನೆ ಮಾಡಿ ಗುರಿ ಮೀರಿ ಮಾನವ ದಿನಗಳನ್ನು ಸೃಜಿಸಿದೆ.
ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೂ ಉದ್ಯೋಗ ಖಾತ್ರಿ ಯೋಜನೆಗೆ ಹಿಂದಿನಂತೆಯೇ ಕೂಲಿಕಾರ್ಮಿಕರಿಂದ ಸ್ಪಂದನೆ ಸಿಗುತ್ತಿದೆ. ಜನರು ಕೆಲಸಕ್ಕೆ ಬರುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಉದ್ಯೋಗ ಖಾತ್ರಿ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ ಎನ್ನುತ್ತಾರೆ ಯೋಜನೆಯ ಕ್ಷೇತ್ರ ಸಹಾಯಕ ಶ್ರೀಧರ ವಗ್ಗಿ.
ನಾನು ಎಂಎ ಬಿಇಡಿ ಪದವಿಧರ. ಬೇಸಿಗೆಯಲ್ಲಿ ಕಾಯಕ ಬಂಧುವಾಗಿ ದುಡಿಯುತ್ತೇನೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 5 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ.ರಾಜಕುಮಾರ ಬೇನೂರು, ದೋಟಿಕೊಳ
ಕೂಲಿ ದರ ₹21 ಹೆಚ್ಚಳ: ‘ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಪ್ರತಿ ವ್ಯಕ್ತಿಗೆ ದಿನಕ್ಕೆ ಮೊದಲು ₹ 349 ಕೂಲಿ ದರ ನೀಡಲಾಗುತ್ತಿತ್ತು. ಈಗ ₹ 21 ಹೆಚ್ಚಳ ಮಾಡಲಾಗಿದ್ದು, ದಿನಕ್ಕೆ ₹370 ಕೂಲಿ ದೊರೆಯುತ್ತದೆ’ ಎಂದು ಶಂಕರ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.