ಕಲಬುರಗಿ: ‘ಆಳಂದ ಕ್ಷೇತ್ರದಲ್ಲಿ ಶಾಸಕ ಬಿ.ಆರ್.ಪಾಟೀಲ ಸ್ವತಃ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಂತ್ರಿಗಿರಿ ಸಿಗಲಿಲ್ಲ ಎಂಬ ಅವಮಾನ, ಕಮಿಷನ್ ಸಿಗದ ಕಾರಣ ಮತ್ತು ಯಾವುದೋ ಡೀಲ್ ಆಗಬೇಕಿರುವ ಕಾರಣ ಮನೆ ಹಂಚಿಕೆಯಲ್ಲಿ ಲಂಚ ನಡೆಯುತ್ತಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ದನಿ ಎತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾ.ಪಂ.ಗಳ ಅಧ್ಯಕ್ಷರು ಕಾಂಗ್ರೆಸ್ ಬೆಂಬಲಿತರು ಮತ್ತು ಹಣ ಪಡೆದವರೂ ಆ ಪಕ್ಷದ ಮುಖಂಡರೇ ಆಗಿದ್ದಾರೆ. ಅಲ್ಲದೇ ಈ ಮನೆಗಳು 2024ರ ಅಕ್ಟೋಬರ್‌ನಲ್ಲಿ ಮಂಜೂರಾಗಿವೆ. ಆದರೆ, ಇಷ್ಟು ದಿನ ಸುಮ್ಮನಿದ್ದ ಶಾಸಕರು ಈಗೇಕೆ ಮಾತನಾಡುತ್ತಿದ್ದಾರೆ. ಅವರಿಗೆ ಸಲ್ಲಬೇಕಾದ ಕಮಿಷನ್ ದೊರಕಿಲ್ಲವೇ? ಅವರ ಸ್ವಾರ್ಥ, ಅಹಂಕಾರ ಮತ್ತು ನಿಜಬಣ್ಣ ಬಯಲಾಗಲು ಇದನ್ನು ನ್ಯಾಯಾಂಗ ತನಿಖೆಗೊಳಪಡಿಸಿ ತಪಿತಸ್ಥರ ವಿರುದ್ಧ ಕ್ರಮ ಆಗಬೇಕು’ ಎಂದು ಆಗ್ರಹಿಸಿದರು.
‘ಈಗಾಗಲೇ ಮಂಜೂರಾಗಿರುವ ರಾಜೀವ ಗಾಂಧಿ ಮತ್ತು ಅಂಬೇಡ್ಕರ್ ವಸತಿ ನಿಗಮದ ಮನೆಗಳನ್ನು ರದ್ದುಪಡಿಸಿ ಮತ್ತೊಮ್ಮೆ ಗ್ರಾಮಸಭೆ ಕರೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಶಾಸಕ ಬಿ.ಆರ್.ಪಾಟೀಲ ಮತ್ತು ಆಡಿಯೊದಲ್ಲಿ ಹೆಸರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
‘ಶಿರಪುರ ಮಾದರಿ ಕಾಮಗಾರಿ ಹೆಸರಲ್ಲಿ ಈಗಾಗಲೇ 2013–2018ರ ಅವಧಿಯಲ್ಲಿ ₹20 ಕೋಟಿ ಖರ್ಚು ಮಾಡಲಾಗಿದೆ. ಬಿ.ಆರ್.ಪಾಟೀಲ ಅವರು ಈಗ ಮತ್ತೆ ಅದೇ ಸ್ಥಳದಲ್ಲಿಯೇ ಕಾಮಗಾರಿ ಕೈಗೊಂಡು ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಇದೇ ಕಾಮಗಾರಿ ಇಡಲಾಗಿದೆ’ ಎಂದು ಆರೋಪ ಮಾಡಿದರು.
‘ನರೇಗಾ ಯೋಜನೆಯ 475 ತೆರೆದ ಬಾವಿ ಕಾಮಗಾರಿ ಭ್ರಷ್ಟಾಚಾರದಲ್ಲಿ ಪಿಡಿಒ ಒಬ್ಬರನ್ನು ಅಮಾನತು ಮಾಡಲಾಗಿತ್ತು. ಆದರೆ, ಅವರು ಕೇವಲ 4 ದಿನಗಳಲ್ಲೇ ಮರು ನಿಯೋಜನೆ ಪಡೆದಿದ್ದಾರೆ. ಇನ್ನು ಮೌಲಾನಾ ಅಬ್ದುಲ್ ಕಲಾಂ ಆಜಾದ್ ವಸತಿ ಶಾಲೆ ಕಟ್ಟಡಕ್ಕೆ ₹17 ಕೋಟಿ ಅನುದಾನ ಬಂದಿದೆ. ಇದು ರಾಜ್ಯ ಸರ್ಕಾರದ ಮಟ್ಟದಲ್ಲಿ ಟೆಂಡರ್ ಆಗುವುದರಿಂದ ತಮಗೆ ಏನೂ ಗಿಟ್ಟುವುದಿಲ್ಲ ಎಂದು ಶಾಸಕರು ತಕರಾರು ತೆಗೆದಿದ್ದಾರೆ’ ಎಂದರು.
ಮಲ್ಲಿಕಾರ್ಜುನ ಕಂದಗುಳೆ, ಶಶಿ ಕುಲಕರ್ಣಿ, ಬಾಬುರಾವ ಸರಡಗಿ, ಸಂತೋಷ ಹಾದಿಮನಿ, ಸಮಿದ್ ಅನ್ಸಾರಿ ಇತರರಿದ್ದರು.
‘ಹಾಲಿನ ಪುಡಿ ಸರಬರಾಜಿನಲ್ಲಿ ಅವ್ಯವಹಾರ’
‘ಕೆಎಂಎಫ್ ಅಧೀನ ಸಂಸ್ಥೆ ಬೀದರ್ ಕಲಬುರಗಿ ಮತ್ತು ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದಲ್ಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿಯಮ ಮೀರಿ ಟೆಂಡರ್ ಕೊಡಲಾಗಿದೆ’ ಎಂದು ಹರ್ಷಾನಂದ ಗುತ್ತೇದಾರ ಆರೋಪಿಸಿದರು. ‘ಅಂಗನವಾಡಿ ಹಾಗೂ ಶಾಲೆಗಳಿಗೆ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪುಡಿ ಪೂರೈಕೆ ಟೆಂಡರ್ ಕೆಎಂಎಫ್ ಕರೆಯಬೇಕು. ಆದರೆ ಶಾಸಕ ಬಿ.ಆರ್. ಪಾಟೀಲ ಅವರ ಸಹೋದರನ ಪುತ್ರ ಆರ್.ಕೆ. ಪಾಟೀಲ ಮತ್ತು ಗುಮುಲ್ ಎಂ.ಡಿ ನಿಯಮ ಉಲ್ಲಂಘಿಸಿ ಜಮಾದಾರ ಎನ್ನುವವರಿಗೆ ಟೆಂಡರ್ ಮಾಡಿಸಿಕೊಟ್ಟಿದ್ದಾರೆ. ಶೇ 100ರಷ್ಟು ಎತ್ತುವಳಿ ಆದರೂ ಅಂಗನವಾಡಿಗಳಿಗೆ ಶೇ 30ರಷ್ಟು ಕೂಡ ಹಾಲಿನ ಪುಡಿ ತಲುಪಿಲ್ಲ. ಅವ್ಯವಹಾರ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.