ADVERTISEMENT

ದೇವಸ್ಥಾನಗಳಿಗೆ ಶೇ 90ರಷ್ಟು ಅನುದಾನ

ಡಾ.ಅಜಯಸಿಂಗ್‌ ಅವರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ₹ 4.5 ಕೋಟಿ ಬಳಕೆ

ಸಂತೋಷ ಈ.ಚಿನಗುಡಿ
Published 18 ಅಕ್ಟೋಬರ್ 2021, 5:31 IST
Last Updated 18 ಅಕ್ಟೋಬರ್ 2021, 5:31 IST
ಡಾ. ಅಜಯ್ ಸಿಂಗ್
ಡಾ. ಅಜಯ್ ಸಿಂಗ್   

ಕಲಬುರಗಿ: ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆದ, ಜೇವರ್ಗಿ ಶಾಸಕ ಡಾ.ಅಜಯಸಿಂಗ್‌ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯ ಶೇ 90ರಷ್ಟು ಅನುದಾನವನ್ನು ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೇ ವಿನಿಯೋಗಿಸಿದ್ದಾರೆ.

2018, 2019 ಹಾಗೂ 2020ನೇ ಸಾಲಿನಲ್ಲಿ ಒಟ್ಟು ₹ 4.50 ಕೋಟಿ ಅನುದಾನ ಬಂದಿದ್ದು, ₹ 3.60 ಕೋಟಿ ಹಣ ವಿನಿಯೋಗಿಸಿದ್ದಾರೆ.

‘₹ 90 ಲಕ್ಷಕ್ಕೆ ಹೊಸ ಕ್ರಿಯಾಯೋಜನೆ ಕೂಡ ಸಿದ್ಧಪಡಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ. ಇದರಲ್ಲಿ 10 ವಿವಿಧ ಕಾಮಗಾರಿಗಳಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಅನುದಾನ ಮಂಜೂರಾತಿ ಕೂಡ ವಿಳಂಬವಾದ ಕಾರಣ, ಕೆಲ ಕಾಮಗಾರಿಗಳು ಇನ್ನೂ ಚಾಲನೆಯಲ್ಲಿವೆ’ ಎಂದು ಶಾಸಕ ಡಾ.ಅಜಯಸಿಂಗ್‌ ಮಾಹಿತಿ ನೀಡಿದ್ದಾರೆ.

ADVERTISEMENT

‘ವರ್ಷಕ್ಕೆ ನಾಲ್ಕು ಕಂತಿನಲ್ಲಿ ತಲಾ ₹ 50 ಲಕ್ಷದಂತೆ ಅನುದಾನ ಬರುತ್ತದೆ. ಈ ವರೆಗೆ ₹ 4.5 ಕೋಟಿ ಬಂದಿದ್ದು, ಇನ್ನೂ ₹ 1.5 ಕೋಟಿ 2021ನೇ ಸಾಲಿನಲ್ಲಿ ಬರಬೇಕಿದೆ. ಈಗಾಗಲೇ ಅಗತ್ಯ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಅನುದಾನ ಬಂದ ತಕ್ಷಣ ಕಾಮಗಾರಿಗೆ ಚಾಲನೆ ನಿಡಲಾಗುವುದು’ ಎಂದೂ ತಿಳಿಸಿದ್ದಾರೆ.

ಮುಗಿದ ಕಾಮಗಾರಿಗಳು ಯಾವುವು?: ಖಾಜಾಪುರ ಗ್ರಾಮದ ಹನುಮಂತ ದೇವರ ಮಂದಿರದ ಸಮುದಾಯ ಭವನ ನಿರ್ಮಾಣಕ್ಕೆ ₹ 4 ಲಕ್ಷ, ಹಾಲಗಡಲ ಗ್ರಾಮದಲ್ಲಿ ಸಮುದಾಯ ಭವನಕ್ಕೆ ₹ 4 ಲಕ್ಷ, ನೆಲೋಗಿಯ ಜಟ್ಟಿಂಗರಾಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ₹ 3 ಲಕ್ಷ, ಮಂದೇವಾಲದ ಜಟ್ಟಿಂಗರಾಯ ದೇವಸ್ಥಾನದ ಸಮುದಾಯ ಭವನಕ್ಕೆ ₹ 4.5 ಲಕ್ಷ, ಆಂದೋಲಾದ ಭಾಗ್ಯವಂತಿ ದೇವಸ್ಥಾನ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ₹ 4 ಲಕ್ಷ ಅನುದಾನ ಬಳಸಲಾಗಿದೆ.

ಜೇವರ್ಗಿ ಪಟ್ಟಣದಲ್ಲಿರುವ ವೀರಾಂಜನೇಯ ದೇಗುಲದ ದುರಸ್ತಿ ಕಾಮಗಾರಿ ಹಾಗೂ ಸಮುದಾಯ ಭವನ ಕಟ್ಟಡಕ್ಕೆ ₹ 5 ಲಕ್ಷ, ವಿಶ್ವಕರ್ಮ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲ ಮಾಡಲು ಸಮುದಾಯ ಭವನ ನಿರ್ಮಿಸಿದ್ದು, ಇದಕ್ಕೆ ₹ 5 ಲಕ್ಷ ನೀಡಲಾಗಿದೆ. ಅಲ್ಲದೇ, ಪಟ್ಟಣದಲ್ಲಿ ತಾಲ್ಲೂಕು ಶಿಕ್ಷಕರ ಭವನಕ್ಕೂ ಅನುದಾನ ಮಂಜೂರು ಮಾಡಲಾಗಿದ್ದು, ಕಾರಣಾಂತರಗಳಿಂದ ಈ ಕೆಲಸ ಇನ್ನೂ ಪೆಂಡಿಂಗ್‌ ಉಳಿದಿದೆ ಎಂದೂ ಶಾಸಕ ತಿಳಿಸಿದ್ದಾರೆ.

₹ 5 ಲಕ್ಷ ವೆಚ್ಚದಲ್ಲಿ ಮಂದರ ವಾಡ ಬಸವೇಶ್ವರ ದೇವಸ್ಥಾನದ ಜೀರ್ನೋದ್ಧಾರ ಹಾಗೂ ಸಮುದಾಯ ಭವನ ನಿರ್ಮಾಣ,
₹ 5 ಲಕ್ಷದಲ್ಲಿ ಕೋಳಕೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ, ₹ 4 ಲಕ್ಷ ವೆಚ್ಚದಲ್ಲಿ ಮರಡಗಿ ಎಸ್‌.ಎಂ. ಗ್ರಾಮದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನ, ₹ 4 ಲಕ್ಷ ವೆಚ್ಚದಲ್ಲಿ ಕರಿಕಿಹಳ್ಳಿ ಗ್ರಾಮದಲ್ಲಿರುವ ಜಿಡಗಾ ಮಠದ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಪ್ರಗತಿಯಲ್ಲಿರುವ ಕಾಮಗಾರಿಗಳು: ಯಳವಾರದ ಸಿದ್ಧಲಿಂಗೇಶ್ವರ ದೇವಸ್ಥಾನ ಕಾಮಗಾರಿಗೆ ₹ 4 ಲಕ್ಷ, ಗುಡೂರು ಎಸ್‌.ಎ. ಗ್ರಾಮದ ಸಂಗಮೇಶ್ವರ ದೇವಸ್ಥಾನಕ್ಕೆ ₹ 5 ಲಕ್ಷ, ಮಯೂರ ಗ್ರಾಮದ ಬೀರಲಿಂಗೇಶ್ವರ ಮಂದಿರಕ್ಕೆ
₹ 5 ಲಕ್ಷ, ಕಲ್ಲಹಂಗರಗಾದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವಕ್ಕೆ ₹ 5 ಲಕ್ಷ, ನೆಲೋಗಿಯ ಕಾಳಿಕಾದೇವಿ ಮಂದಿರದಲ್ಲಿ ಬಿಡಿ ಕಾಮಗಾರಿಗಳಿಗಾಗಿ ₹ 3 ಲಕ್ಷ, ಮಯೂರ ಗ್ರಾಮದಲ್ಲಿರುವ ಶರಣಬಸವೇಶ್ವರ ದೇವಸ್ಥಾನದ ಬಳಿ ಸಮುದಾಯ ಭವನಕ್ಕೆ ₹ 3 ಲಕ್ಷ ನೀಡಲಾಗಿದೆ.

ರಸ್ತೆ ನಿರ್ಮಾಣ, ದುರಸ್ತಿ, ಚರಂಡಿ, ಶುದ್ಧ ಕುಡಿಯುವ ನೀರು ಸೇರಿದಂತೆ ಕ್ಷೇತ್ರದಲ್ಲಿನ ಬಹುತೇಕ ಕಾಮಗಾರಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನವನ್ನೇ ಹೆಚ್ಚು ಬಳಸಲಾಗಿದೆ. ಈ ಅವಧಿಯಲ್ಲಿ ₹ 45 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿ ಜನರ ಕೆಲಸ ಮಾಡಿದ್ದೇನೆ. ಹೀಗಾಗಿ, ಶಾಸಕ ನಿಧಿಯನ್ನು ಕೇವಲ ದೇವಸ್ಥಾನ, ಸಮುದಾಯ ಭವನಕ್ಕಾಗಿಯೇ ವಿನಿಯೋಗಿಸಲಾಗಿದೆ.

–ಡಾ.ಅಜಯಸಿಂಗ್‌, ಶಾಸಕ, ಜೇವರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.