ADVERTISEMENT

ಹೆಬಳಿ ಗ್ರಾಮಕ್ಕೆ ಶಾಸಕ ಬಿ.ಆರ್.‌ ಪಾಟೀಲ ಭೇಟಿ

ಪ್ರವಾಸೋದ್ಯಮ ಕಾಮಗಾರಿ ದುರ್ಬಳಕೆ, ವರದಿ ಸಲ್ಲಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:32 IST
Last Updated 14 ಏಪ್ರಿಲ್ 2025, 14:32 IST
ಆಳಂದ ತಾಲ್ಲೂಕಿನ ಹೆಬಳಿ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಕಾಮಗಾರಿಯನ್ನು ಶಾಸಕ ಬಿ.ಆರ್.‌ಪಾಟೀಲ ಪರಿಶೀಲಿಸಿದರು. ಇಒ ಮಾನಪ್ಪ ಕಟ್ಟಿಮನಿ, ಎಇಇ ಶರಣಬಸಪ್ಪ ಹಾಜರಿದ್ದರು
ಆಳಂದ ತಾಲ್ಲೂಕಿನ ಹೆಬಳಿ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಕಾಮಗಾರಿಯನ್ನು ಶಾಸಕ ಬಿ.ಆರ್.‌ಪಾಟೀಲ ಪರಿಶೀಲಿಸಿದರು. ಇಒ ಮಾನಪ್ಪ ಕಟ್ಟಿಮನಿ, ಎಇಇ ಶರಣಬಸಪ್ಪ ಹಾಜರಿದ್ದರು    

ಆಳಂದ: ತಾಲ್ಲೂಕಿನ ಹೆಬಳಿ ಗ್ರಾಮದಲ್ಲಿ ಅಲ್ಲಮಪ್ರಭು ದೇವರ (ಸುಲ್ತಾನ ಮಶಾಕ್‌ ದರ್ಗಾ) ದೇವಸ್ಥಾನದ ಜೀರ್ಣೋದ್ಧಾರ ಮತ್ತಿತರ ಅಭಿವೃದ್ಧಿ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ದುರ್ಬಳಕೆಯಾಗಿದ್ದು, ತಕ್ಷಣ ಕಾಮಗಾರಿಯ ಪೂರ್ಣ ವರದಿ ಸಲ್ಲಿಸುವಂತೆ ಶಾಸಕ ಬಿ.ಆರ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಹೆಬಳಿ ಗ್ರಾಮದ ಅಲ್ಲಮಪ್ರಭು ದೇವರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ‘ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಅನುದಾನ ಮಂಜೂರಾಗಿದ್ದು, ಈಗಾಗಲೇ ₹53 ಲಕ್ಷ ಹಣ ಖರ್ಚು ಮಾಡಲಾಗಿದೆ. ದೇವಸ್ಥಾನದಲ್ಲಿ ಯಾವದೇ ಕಾಮಗಾರಿ ಕೈಗೊಳ್ಳದೆ ಅನುದಾನ ದುರಪಯೋಗ ಮಾಡಲಾಗಿದೆ. ಕಾಮಗಾರಿ ವಿವರ, ಅನುದಾನ ಬಳಕೆ ಕುರಿತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಮಾಹಿತಿ ಸಲ್ಲಿಸಬೇಕು. ಬಾಕಿ ಅನುದಾನದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ, ಯಾತ್ರಿ ನಿವಾಸದ ಸೌಕರ್ಯ ಒದಗಿಸಲು ತಾವೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಜತೆ ಮಾತನಾಡಿ ಸ್ಥಳಕ್ಕೆ ಭೇಟಿ ನೀಡಿ ಅವರಿಂದ ವಿಕ್ಷಣೆ ಮಾಡಿಸಲಾಗುವುದು’ ಎಂದರು.

ಪಿಆರ್‌ಇ ಶರಣಬಸಪ್ಪ ಅವರು ಕಾಮಗಾರಿ ಪ್ರಸ್ತಾವನೆ ಹಾಗೂ ಕಾಮಗಾರಿ ಖರ್ಚು ಮಾಹಿತಿ ಸಲ್ಲಿಸುವುದಾಗಿ ತಿಳಿಸಿದರು. ತಾ.ಪಂ. ಇಒ ಮಾನಪ್ಪ ಕಟ್ಟಿಮನಿ ಉಪಸ್ಥಿತರಿದ್ದರು.

ADVERTISEMENT

ಸೇತುವೆ ತ್ವರಿತ ಕಾಮಗಾರಿಗೆ ಸೂಚನೆ: ‘ಹೆಬಳಿ-ಪಡಸಾವಳಿ ಮಧ್ಯದ ಹಳ್ಳಕ್ಕೆ ನಿರ್ಮಿಸಲಾಗುತ್ತೀರುವ ₹5 ಕೋಟಿ ವೆಚ್ಚದ ಸಣ್ಣಸೇತುವೆ ನಿರ್ಮಾಣ ಕಾಮಗಾರಿಯು ಮಳೆಗಾಲದ ಮುನ್ನ ತ್ವರಿತಗೊಳಿಸಬೇಕು. ವಿಳಂಬವಾದರೆ ರೈತರಿಗೆ ತೊಂದರೆ ಆಗಲಿದೆ’ ಎಂದು ಬಿ.ಆರ್.ಪಾಟೀಲ ತಿಳಿಸಿದರು.

ಹೆಬಳಿ, ಮಟಕಿ, ಖಾನಾಪುರ ಹಳ್ಳಕ್ಕೆ ಸಣ್ಣ ಸೇತುವೆ ನಿರ್ಮಿಸಲಾಗಿದೆ. ಮಟಕಿ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಎರಡು ಸೇತುವೆ ನಿರ್ಮಾಣದಿಂದ ಗ್ರಾಮಗಳ ಸಂಪರ್ಕ ಹೆಚ್ಚಲಿದೆ. ವಿಶೇಷವಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು. ಮುಖಂಡ ಲಾಯಕಲಿ ಪಟೇಲ, ಅಪ್ಪಾಸಾಹೇಬ ಜವಳಿ ಉಪಸ್ಥಿತರಿದ್ದರು.

ಆಳಂದ ತಾಲ್ಲೂಕಿನ ಹೆಬಳಿ-ಪಡಸಾವಳಿ ಮಾರ್ಗ ಮಧ್ಯದ ಕಿರುಸೇತುವೆ ಕಾಮಗಾರಿಯನ್ನು ಬಿ.ಆರ್.ಪಾಟೀಲ ವಿಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.