ADVERTISEMENT

ಚಿಂಚೋಳಿ | ಎಲ್ಲರಿಗೂ ಉದ್ಯೋಗ ಖಾತ್ರಿ ಕೆಲಸ: ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮೇ 2020, 15:11 IST
Last Updated 26 ಮೇ 2020, 15:11 IST
ಚಿಂಚೋಳಿ ತಾಲ್ಲೂಕು ಕುಂಚಾವರಂ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ್ ಉದ್ಯೋಗ ಖಾತ್ರಿ ಅನುಷ್ಠಾನ ಕುರಿತು ಮಾಹಿತಿ ಪಡೆದರು
ಚಿಂಚೋಳಿ ತಾಲ್ಲೂಕು ಕುಂಚಾವರಂ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ್ ಉದ್ಯೋಗ ಖಾತ್ರಿ ಅನುಷ್ಠಾನ ಕುರಿತು ಮಾಹಿತಿ ಪಡೆದರು   

ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಗ್ರಾಮದಲ್ಲಿ 1,200 ಮಂದಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ 600ರಿಂದ 800 ಮಂದಿ ಕೆಲಸಕ್ಕಾಗಿ ಕಾಯುತ್ತಿದ್ದಾರೆ. ಕೆಲಸ ಮಾಡಲು ಮುಂದೆ ಬರುವ ಎಲ್ಲರಿಗೆ ಕೆಲಸ ಕೊಡುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ್ ಹೇಳಿದರು.

ಕುಂಚಾವರಂಗೆ ಭೇಟಿ ನೀಡಿದ ಅವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ 150 ದಿನ ಮಾನವ ದಿನಗಳು ಆಗುವವರೆಗೆ ಕೆಲಸ ನಿಲ್ಲಿಸಬಾರದು ಎಂದರು.

ಬೇರೆಯವರಿಗೂ ಕೆಲಸ ಕೊಡಬೇಕಾದ ಕಾರಣ ಕೆಲವು ದಿನ ಕೆಲಸಕ್ಕೆ ಬರುವುದು ಬೇಡ ಎಂದು ಪಿಡಿಒ ಹೇಳಿದ್ದಾರೆ ಎಂದು ಕಾರ್ಮಿಕರು ತಮಗೆ ದೂರಿದ್ದಾರೆ ಎಂದ ಅವರು ಈ ಕುರಿತು ಪಿಡಿಒ ಅವರನ್ನು ಪ್ರಶ್ನಿಸಿದರು. ‘ನಿಮಗೆ ಏನಾದರೂ ತೊಂದರೆ ಇದ್ದರೆ ಹೇಳಿ’ ಎಂದಾಗ ‘ತೊಂದರೆ ಇಲ್ಲ ಸರ್, ಎಲ್ಲರಿಗೂ ಕೆಲಸ ನೀಡುತ್ತೇನೆ. ಸರ್ವರ್ ನಿಧಾನವಾಗಿದ್ದರಿಂದ ಎನ್‌ಎಂಆರ್ ಬೇಗ ಜನರೇಟ್ ಆಗುತ್ತಿಲ್ಲ. ಆದ್ದರಿಂದ ನಾನು ಚಿಂಚೋಳಿಯ ತಾಲ್ಲೂಕು ಪಂಚಾಯಿತಿ ಕಚೇರಿಗೆ ಹೋಗಿ ಎನ್‌ಎಂಆರ್ ಜನರೇಟ್ ಮಾಡುತ್ತಿದ್ದೇನೆ. ನಾನು ಯಾರ ಕೆಲಸವನ್ನೂ ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದ್ದೇನೆ’ ಎಂದು ಪಿಡಿಒ ತುಕ್ಕಪ್ಪ ಉತ್ತರಿಸಿದರು.

ADVERTISEMENT

ಸಭೆಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕ ಶೇಖರ ಮಾತನಾಡಿ, ನಮಗೆ ಹೋದ ವರ್ಷ ಒಂದು ತಿಂಗಳು ಕೆಲಸ ಮಾಡಿದರೂ ಅರ್ದ ಕೂಲಿ ನೀಡಲಾಗಿದೆ. ಈಗ ಕೆಲಸ ಬೇಡೆಡ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಗೋಪಾಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನರಶಿಮ್ಲು ಕುಂಬಾರ, ಡಾ.ತುಕಾರಾಮ ಪವಾರ, ಜನಾರ್ದನ, ರಾಮಲು, ಸಂತೋಷ ಹಾಗೂ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.