ADVERTISEMENT

ಕಲಬುರಗಿ: ಕಸದಿಂದ ಗ್ರಾ.ಪಂ.ಗೆ ₹ 2.73 ಲಕ್ಷ ವರಮಾನ

ಜಿಲ್ಲೆಯ 54 ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕಸ ಸಂಗ್ರಹ

ಮನೋಜ ಕುಮಾರ್ ಗುದ್ದಿ
Published 6 ಮೇ 2025, 6:00 IST
Last Updated 6 ಮೇ 2025, 6:00 IST
ಕಲಬುರಗಿ ತಾಲ್ಲೂಕಿನ ಸಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರಾಟವಾದ ಕಸವನ್ನು ಕೊಂಡೊಯ್ಯಲು ಮೂಟೆಯಲ್ಲಿ ಸಂಗ್ರಹಿಸಿರುವುದು. ಪಂಚಾಯಿತಿ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿ ಇದ್ದಾರೆ
ಕಲಬುರಗಿ ತಾಲ್ಲೂಕಿನ ಸಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರಾಟವಾದ ಕಸವನ್ನು ಕೊಂಡೊಯ್ಯಲು ಮೂಟೆಯಲ್ಲಿ ಸಂಗ್ರಹಿಸಿರುವುದು. ಪಂಚಾಯಿತಿ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿ ಇದ್ದಾರೆ   

ಕಲಬುರಗಿ: ಜಿಲ್ಲೆಯ 261 ಗ್ರಾಮ ಪಂಚಾಯಿತಿಗಳ ಪೈಕಿ 54 ಪಂಚಾಯಿತಿಗಳಲ್ಲಿ ಉತ್ತಮ ರೀತಿಯಲ್ಲಿ ಕಸ ಸಂಗ್ರಹಣೆ ನಡೆಯುತ್ತಿದೆ. ತ್ಯಾಜ್ಯ ಮತ್ತು ಗೊಬ್ಬರವನ್ನು ಮಾರಾಟ ಮಾಡಿ ಪಂಚಾಯಿತಿಗಳು ₹ 2.89 ಲಕ್ಷ ವರಮಾನ ಗಳಿಸಿವೆ. ಆ ಮೂಲಕ ಕಸದಿಂದ ರಸ ತೆಗೆಯುವ ಕಾರ್ಯಕ್ಕೆ ಮುಂದಡಿ ಇಟ್ಟಿವೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛ ವಾಹಿನಿ ಕಸ ಸಂಗ್ರಹ ವಾಹನಗಳನ್ನು ಒದಗಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ವಾಹನ ಚಾಲನೆಯ ತರಬೇತಿ ಪಡೆದ ಮಹಿಳಾ ಒಕ್ಕೂಟದ ಸದಸ್ಯರಿಗೆ ಕಸ ಸಂಗ್ರಹ ವಾಹನಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಪ್ರತಿ ನಿತ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮೂವರು ಸಿಬ್ಬಂದಿ ಕಸವನ್ನು ಸಂಗ್ರಹಿಸುತ್ತಿದ್ದಾರೆ. 

ಗ್ರಾಮದ ನಿವಾಸಿಗಳು ಹಸಿ ಕಸವನ್ನು ನೀಡಲು ಹಿಂದೇಟು ಹಾಕುತ್ತಿದ್ದು, ಒಣ ಕಸವನ್ನಷ್ಟೇ ನೀಡುತ್ತಿದ್ದಾರೆ. ರಟ್ಟು, ಹಾಲಿನ ಪ್ಯಾಕೆಟ್, ರದ್ದಿ ಪೇಪರ್, ಹಳೆಯ ಬಟ್ಟೆ, ಹಾಸಿಗೆ, ದಿಂಬುಗಳನ್ನು ನೀಡುತ್ತಿದ್ದರು. ಗ್ರಾಮದಲ್ಲಿ ಮದ್ಯದ ಅಂಗಡಿಗಳಿದ್ದರೆ ಅಲ್ಲಿಂದ ಖಾಲಿ ಮದ್ಯದ ಬಾಟಲ್‌ಗಳೂ ಕಸ ಸಂಗ್ರಹ ವಾಹನದ ಒಡಲು ಸೇರುತ್ತಿವೆ. ಇದರಿಂದಾಗಿ ಎಲ್ಲೆಂದರಲ್ಲಿ ರಸ್ತೆಯಲ್ಲಿ ಬಾಟಲಿಗಳನ್ನು ಪಡೆದು ಚೂರು ಮಾಡುವ ಕೃತ್ಯಗಳಿಗೂ ತಕ್ಕ ಮಟ್ಟಿಗೆ ಕಡಿವಾಣ ಬಿದ್ದಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್‌ ಸಿಬ್ಬಂದಿ. 

ADVERTISEMENT

ಜಿಲ್ಲೆಯ ಪಟ್ಟಣ, ಖಣದಾಳ, ರಟಕಲ್, ಹೆಬ್ಬಾಳ, ಹೊಳಕುಂದಾ, ಹರಸೂರ, ಭೀಮಳ್ಳಿ, ಅವರಾದ (ಬಿ), ಘತ್ತರಗಿ, ರಾವೂರ, ಭಂಕೂರ, ಗೋಳಾ (ಬಿ), ಚೌಡಾಪುರ, ದಿಗ್ಗಾಂವ, ಚಿಂಚನಸೂರ, ದೇವಲ ಗಾಣಗಾಪುರ, ಕಮಲನಗರ, ಕಡಗಂಚಿ, ನರೋಣಾ, ಹರವಾಳ, ಕೋಳಕೂರು ಗ್ರಾಮ ಪಂಚಾಯಿತಿ ಸೇರಿದಂತೆ 18 ಗ್ರಾಮ ಪಂಚಾಯಿತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದ್ದು, ಗ್ರಾಮಗಳಲ್ಲಿ ಸಂಗ್ರಹವಾದ ಕಸವನ್ನು ಅಲ್ಲಿ ಹಾಕಲಾಗುತ್ತದೆ. ನಂತರ ಕಸವನ್ನು ಬೇರ್ಪಡಿಸಿ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಗುರುಬಾಯಿ ಪಾಟೀಲ.

ಕಳೆದ ಮಾರ್ಚ್‌ವರೆಗೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾದ 39 ಸಾವಿರ ಕೆ.ಜಿ. ಒಣ ತ್ಯಾಜ್ಯವನ್ನು ಮಾರಾಟ ಮಾಡಿ ₹ 2.89 ಲಕ್ಷ ವರಮಾನವನ್ನು ಪಂಚಾಯಿತಿಗಳು ಪಡೆದಿವೆ. 

ಸಾಹಸ್ ಸಂಸ್ಥೆ ಸಹಯೋಗ

ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ಕಸವನ್ನು ಮಾರಾಟ ಮಾಡಲು ಸಾಹಸ್ ಸಂಸ್ಥೆ ಗ್ರಾ.ಪಂ.ಗಳೊಂದಿಗೆ ಕೈಜೋಡಿಸಿದೆ.  ಈ ಸಂಸ್ಥೆಯು ಕಸದಲ್ಲಿ ಸಂಗ್ರಹವಾಗುವ ವಸ್ತುಗಳ ಖರೀದಿದಾರರನ್ನು (ವೆಂಡರ್) ಗ್ರಾ.ಪಂ.ಗಳೊಂದಿಗೆ ಬೆಸೆಯುತ್ತದೆ. ಕಸ ಸಂಗ್ರಹವಾದಂತೆಲ್ಲ ಅವುಗಳನ್ನು ಖರೀದಿ ಮಾಡಲು ಸಂಸ್ಥೆಯು ಸಹಯೋಗ ನೀಡಲಿದೆ ಎಂದು ಸ್ವಚ್ಛ ಭಾರತ ಮಿಷನ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಎಲ್ಲ 261 ಗ್ರಾ.ಪಂ.ಗಳಿಗೂ ಕಸ ಸಂಗ್ರಹ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಹಸಿ ಕಸವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸುವ ಯೋಜನೆಯೂ ಪ್ರಗತಿಯಲ್ಲಿದೆ
-ಭಂವರ್‌ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಸಿಇಒ ಕಲಬುರಗಿ
ಕಲಬುರಗಿ ತಾಲ್ಲೂಕಿನ ಸಣ್ಣೂರು ಗ್ರಾ.ಪಂ. ಕಸ ಸಂಗ್ರಹ ಘಟಕದಲ್ಲಿ ಕಸವನ್ನು ಬೇರ್ಪಡಿಸುತ್ತಿರುವ ಸಿಬ್ಬಂದಿ
ಭಂವರ್ ಸಿಂಗ್ ಮೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.