
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಅಧಿಕಾರವಧಿಯಲ್ಲಿ ರೈಲ್ವೆ ಇಲಾಖೆ ಅಮೂಲಾಗ್ರವಾಗಿ ಬದಲಾವಣೆಯಾಗಿದ್ದು, ಸಾರ್ವಜನಿಕರು ಅತ್ಯಾಧುನಿಕ ರೈಲ್ವೆ ಪ್ರಯಾಣದ ಖುಷಿಯನ್ನು ಅನುಭವಿಸುತ್ತಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಎರಡನೇ ಪಿಟ್‌ಲೈನ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮೊದಲೆಲ್ಲ ನಿಲ್ದಾಣಗಳು ಕೊಳಚೆಯಾಗಿದ್ದವು. ಬೋಗಿಗಳು ಸ್ವಚ್ಛ ಹಾಗೂ ಸುರಕ್ಷಿತವಾಗಿರಲಿಲ್ಲ. ಮೋದಿ ಅವರು ಆದ್ಯತೆಯ ಮೇರೆಗೆ ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಪ್ರಮುಖ ನಿಲ್ದಾಣಗಳನ್ನು ಆಧುನಿಕರಣಗೊಳಿಸಲು ಸಾಕಷ್ಟು ಅನುದಾನ ಒದಗಿಸಿದ್ದಾರೆ. ಕಲಬುರಗಿ ನಿಲ್ದಾಣವು ₹ 30 ಕೋಟಿ ವೆಚ್ಚದಲ್ಲಿ ಹೊಸ ರೂಪ ಪಡೆಯಲಿದೆ. ಅಲ್ಲದೇ, ಸ್ಟೇಶನ್ ಗಾಣಗಾಪುರ ನಿಲ್ದಾಣವು ₹ 22 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳಲಿದೆ. ಕೋವಿಡ್ ಸಂದರ್ಭದಲ್ಲಿ ಶಹಾಬಾದ್ ಸ್ಟೇಶನ್‌ನಲ್ಲಿ ನಿಲುಗಡೆ ಸ್ಥಗಿತಗೊಂಡಿದ್ದ ಮೂರು ರೈಲುಗಳ ನಿಲುಗಡೆ ಸಚಿವರ ಮನವೊಲಿಕೆ ಬಳಿಕ ಪುನರಾರಂಭಗೊಂಡಿದೆ. ಚಿತ್ತಾಪುರ ನಿಲ್ದಾಣದಲ್ಲಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕೆಂದರೆ ಅಪಾಯಕಾರಿ ಹಳಿಗಳನ್ನು ದಾಟಿ ಹೋಗಬೇಕಿತ್ತು. ಅಲ್ಲಿ ಮೇಲ್ಸೇತುವೆ ನಿರ್ಮಿಸಿದರೆ ಒಬ್ಬ ಮುಖಂಡನ ಮನೆ ಹೋಗುತ್ತಿತ್ತು. ಅದಕ್ಕಾಗಿ, ಅಲ್ಲಿ ಸೇತುವೆ ಮಾಡಲು ಬಿಟ್ಟಿರಲಿಲ್ಲ. ಇದನ್ನು ಗಮನಿಸಿ ದೃಢ ನಿರ್ಧಾರ ತೆಗೆದುಕೊಂಡು ಅಲ್ಲಿ ಸೇತುವೆ ನಿರ್ಮಾಣವಾಗುವಂತೆ ಮಾಡಿದ್ದೇನೆ’ ಎಂದರು.
‘ಎರಡನೇ ಪಿಟ್‌ಲೈನ್ ಶುರುವಾದರೆ ಇಲ್ಲಿ ವಂದೇ ಭಾರತ್ ರೈಲು ಬರಲಿದೆ. ವಂದೇ ಭಾರತ್ ಬೋಗಿಗಳ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದು ಅಡ್ಡಿಯಾಗಿತ್ತು. ಕೆಲ ದಿನಗಳಲ್ಲಿ ₹ 33 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿ 2025ರ ಮಾರ್ಚ್ ವೇಳೆಗೆ ಪಿಟ್‌ಲೈನ್ ಸಿದ್ಧಗೊಳ್ಳಲಿದೆ’ ಎಂದು ಹೇಳಿದರು.
ಸೋಲಾಪುರ ವಿಭಾಗೀಯ ಹಿರಿಯ ಎಂಜಿನಿಯರ್ ಎಂ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ, ಕೇಂದ್ರ ಆಹಾರ ನಿಗಮದ ಸದಸ್ಯ ರವಿರಾಜ ಸಾಹುಕಾರ, ರೈಲ್ವೆ ಸಲಹಾ ಸಮಿತಿಯ ಸದಸ್ಯರಾದ ಅರವಿಂದ ನವಲಿ, ಸಂದೀಪ್ ಮಿಶ್ರಾ, ಶಹಾಬಾದ್ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ರವಿರಾಜ ಕೊರವಿ, ಕಾಶಿನಾಥ ಬಿರಾದಾರ ಉಪಸ್ಥಿತರಿದ್ದರು.
ಶರಣಪ್ಪ ಹದನೂರು ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿಗೆ ಕಿಸಾನ್ ರೈಲು ಸಂಚಾರ ಆರಂಭಿಸುವ ಪ್ರಸ್ತಾವವಿದ್ದು ಇದರಿಂದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ
-ಡಾ. ಉಮೇಶ ಜಾಧವ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.