ADVERTISEMENT

ಬಾಲಕನ ಕೊಲೆ: ಮೂವರ ಬಂಧನ

ಅಕ್ಕ–ತಂಗಿಯನ್ನು ಚುಡಾಯಿಸುತ್ತಿದ್ದ ಆರೋಪಿಗಳು!

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 13:20 IST
Last Updated 6 ಜುಲೈ 2018, 13:20 IST

ಕಲಬುರ್ಗಿ: ಅಫಜಲಪುರ ಪಟ್ಟಣದಲ್ಲಿ ಜೂನ್ 30ರಂದು ರಾಜಶೇಖರ ಹೊನ್ನಳ್ಳಿ (10) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅಫಜಲಪುರದ ನಿವಾಸಿಗಳಾದ ಅನಿಲ್ ವಿಠ್ಠಲ ಭಂಗಿ, ಸಂಜಯ್ ಮಲ್ಲಪ್ಪ ಹೆಗ್ಗಿ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ‘ಆರೋಪಿಗಳಾದ ಅನಿಲ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇಬ್ಬರೂ ಸ್ನೇಹಿತರು. ಇವರಿಬ್ಬರೂ ರಾಜಶೇಖರನ ಅಕ್ಕ ಮತ್ತು ತಂಗಿಯನ್ನು ಚುಡಾಯಿಸುತ್ತಿದ್ದರು. ಇದನ್ನು ಗಮನಿಸಿದ್ದ ರಾಜಶೇಖರ ಈ ಬಗ್ಗೆ ಮನೆಯಲ್ಲಿ ಹೇಳಿದ್ದ. ಇದರಿಂದ ಕುಪಿತಗೊಂಡ ಆರೋಪಿಗಳು ಬಾಲಕನ್ನು ಕೊಲೆ ಮಾಡಿದ್ದಾರೆ’ ಎಂದರು.

ADVERTISEMENT

‘ಮೃತ ಬಾಲಕನ ತಾಯಿ ವೈಶಾಲಿ ಬಾಳೆ ಹಣ್ಣಿನ ವ್ಯಾಪಾರಿ. ಸಂಜಯ್ ಕೂಡ ಬಾಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಹಣ್ಣಿನ ಬಂಡಿ ಹಚ್ಚುವ ವಿಷಯಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಅದೇ ರೀತಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ತನ್ನ ಸಹೋದರಿಯನ್ನು ಚುಡಾಯಿಸುತ್ತಿರುವ ಬಗ್ಗೆ ಆತನ ಅಜ್ಜನಿಗೆ ರಾಜಶೇಖರ ಹೇಳಿದ್ದ. ಈ ಎಲ್ಲ ಕಾರಣಗಳಿಂದ ಬಂಧಿತ ಮೂರೂ ಜನ ಆರೋಪಿಗಳು ವೈಶಾಲಿ ಕುಟುಂಬದೊಂದಿಗೆ ದ್ವೇಷ ಹೊಂದಿದ್ದರು. ಅವರ ಒಬ್ಬನೇ ಮಗನನ್ನು ಕೊಲೆ ಮಾಡಿದರೆ ಅವರ ಕುಟುಂಬದ ಬೀದಿಗೆ ಬರುತ್ತದೆ ಎಂದು ಯೋಚಿಸಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ’ ಎಂದು ತಿಳಿಸಿದರು.

‘ವೈಶಾಲಿ ಅವರು ಆರು ಜನರ ವಿರುದ್ಧ ದೂರು ದಾಖಲಿಸಿದ್ದರು. ವಿಚಾರಣೆ ಬಳಿಕ ಮೂವರು ಮಾತ್ರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಇನ್ನುಳಿದವರ ಪಾತ್ರ ಏನಿತ್ತು ಎಂಬುದರ ಬಗ್ಗೆ ತನಿಖೆ ನಡೆದಿದೆ’ ಎಂದು ಹೇಳಿದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜೆ., ಆಳಂದ ಡಿವೈಎಸ್‌ಪಿ ಪಿ.ಕೆ.ಚೌಧರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.