ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದ ಎತ್ತು ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವುದು
ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ನಾಗರಾಳ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ನದಿಯಲ್ಲಿ ನೀರಿನ ಸೆಳೆತ ಹೆಚ್ಚಿದ ಪರಿಣಾಮ ಕನಕಪುರ ಗ್ರಾಮದ ಎರಡು ಎತ್ತುಗಳು ಒಂದು ಹೋರಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿವೆ.
ಮಂಗಳವಾರ ಬೆಳಿಗ್ಗೆ ಈ ಅವಘಡ ನಡೆದಿದೆ. ಮೃತ ಜಾನುವಾರುಗಳು ವೀರಶೆಟ್ಟಿ ಉಳ್ಳಾಗಡ್ಡಿ ಎಂಬುವವರಿಗೆ ಸೇರಿವೆ.
ಸೋಮವಾರ ಸಂಜೆ ತಾಲ್ಲೂಕಿನ ಕೆಲವೆಡೆ ಮಳೆಯಾಗಿತ್ತು. ಮಳೆ ನೀರಿನ ಜತೆಗೆ ಜಲಾಶಯದ ನೀರು ನದಿಯಲ್ಲಿ ಹರಿದಿದ್ದರಿಂದ ಪ್ರವಾಹ ಸ್ಥಿತಿ ಏರ್ಪಟ್ಟಿತ್ತು.
ಹೊಲಗಳಿಗೆ ಮೇಯಲು ಹೋಗಿದ್ದ ಎತ್ತು ಮತ್ತು ಆಕಳು ನೀರು ಕುಡಿಯಲು ನದಿಗೆ ಇಳಿದಿದ್ದ ವೇಳೆ ನೀರಿನ ಸೆಳೆತಕ್ಕೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ. ಕೊಚ್ಚಿಕೊಂಡು ಜಾನುವಾರುಗಳ ಪೈಕಿ ಎರಡು ಎತ್ತುಗಳ ಮೃತದೇಹ ಪತ್ತೆಯಾಗಿದೆ. ಇನ್ನೂ ಹಸು ಪತ್ತೆಯಾಗಿಲ್ಲ. ಅದನ್ನು ಹುಡುಕುವ ಕೆಲಸ ಪ್ರಗತಿಯಲ್ಲಿದೆ ಎಂದು ಸ್ಥಳೀಯ ಮುಖಂಡ ಶ್ರೀಧರ ವಗ್ಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಮತ್ತು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸೋಮವಾರ ರಾತ್ರಿ ನಾಗರಾಳ ಜಲಾಶಯದಿಂದ 650 ಕ್ಯೂಸೆಕ್ ನೀರು ನದಿಗೆ ಬಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.