
ಕಲಬುರಗಿ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಅಂಗವಾಗಿ ಫೆಬ್ರುವರಿ 10ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಕಾಲೇಜುಗಳ 1-19 ವರ್ಷದೊಳಗಿನ 9,98,205 ಮಕ್ಕಳಿಗೆ ಜಂತುಹುಳು ನಾಶಕ ಅಲ್ಬೆಂಡಜೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ 1ರಿಂದ 5 ವರ್ಷದೊಳಗಿನ 1,64,760 ಮತ್ತು 6ರಿಂದ 19 ವರ್ಷದೊಳಗಿನ 8,33,445 ಸೇರಿ ಒಟ್ಟು 9,98,205 ಮಂದಿಗೆ ಜಂತುಹುಳುನಾಶಕ ಅಲ್ಬೆಂಡಜೋಲ್ ಮಾತ್ರೆಯನ್ನು ವಯಸ್ಸಿನ ಅನುಗುಣವಾಗಿ ನೀಡಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ಕಳೆದ ವರ್ಷ 2024–25ನೇ ಸಾಲಿನಲ್ಲಿ ಶೇ 98.50ರಷ್ಟು ಗುರಿ ಸಾಧಿಸಲಾಗಿತ್ತು. ಈ ವರ್ಷ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಫೆ.10ರಂದು ಯಾವುದೇ ಮಕ್ಕಳು ಬಿಟ್ಟು ಅಭಿಯಾನದಿಂದ ಹೊರಗೆ ಉಳಿಯದಂತೆ ಪ್ರತಿ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹೋಗಿ ಮಾತ್ರೆ ನುಂಗಿಸಬೇಕು. ಫೆ.10ರಂದು ಬಿಟ್ಟು ಹೋಗುವ ಮಕ್ಕಳನ್ನು ಫೆ.16ಕ್ಕೆ ಮಾಪ್ ಅಪ್ ಸುತ್ತಿನಲ್ಲಿ ಮಾತ್ರೆ ನೀಡುವ ಮೂಲಕ ಸರಿದೂಗಿಸಬೇಕು’ ಎಂದು ಸೂಚಿಸಿದರು.
ಇನ್ನು, ಅಂಗನವಾಡಿ, ಶಾಲೆ, ಕಾಲೇಜುಗಳಿಂದ ಹೊರಗುಳಿದ ಮಕ್ಕಳನ್ನು ಸಮುದಾಯದ ಮಟ್ಟದಲ್ಲಿ ಮಾತ್ರೆಗಳನ್ನು ನೀಡಲು ಸಮುದಾಯ ಆರೋಗ್ಯ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಬಗೆಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಶಾಲೆ, ಪಿಯುಸಿ, ಐಟಿಐ, ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಎಲ್ಲ ವಿದ್ಯಾರ್ಥಿಗಳು ಮಾತ್ರೆ ತೆಗೆದುಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು’ ಎಂದರು.
ಸಭೆಯಲ್ಲಿ ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಆರ್‌ಸಿಎಚ್ಒ ಡಾ.ಸಿದ್ರಾಮ ಪಾಟೀಲ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ರವಿಕಾಂತಿ ಕ್ಯಾತನಾಳ, ಜಿಲ್ಲಾ ಶಸ್ತ್ರಜ್ಞ ಡಾ.ಅಸ್ನಾ ರುಕಿಯಾ ರಬ್ಬಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಮನಿ, ಮಹಾನಗರರ ಪಾಲಿಕೆಯ ಹಿರಿಯ ವೈದ್ಯಾಧಿಕಾರಿ ಡಾ.ರಾಜೇಂದ್ರ ಭಾಲ್ಕಿ, ಡಿಪಿಎಂ ವ್ಯವಸ್ಥಾಪಕ ವೀರೇಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುರುಗೇಶ ಗುಣಾರಿ, ಡಿಡಿಪಿಯು ಸುರೇಶ ಅಕ್ಕಣ್ಣ, ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ, ಟಿಎಚ್‌ಒಗಳಾದ ಡಾ.ಮಾರುತಿರಾವ ಕಾಂಬ್ಳೆ, ಡಾ.ಸಂಜು ಪಾಟೀಲ ಯಡಗಾ, ಜಿಲ್ಲಾ ಸಮಾಲೋಚಕ ಕರಣಿಕ್ ಕೋರೆ, ಹಿರಿಯ ಆರೋಗ್ಯ ನಿರೀಕ್ಷಕ ಖಯ್ಯೂಮ್ ಸೇರಿದಂತೆ ಆರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿ-ಸಿಬ್ಬಂದಿ ಇದ್ದರು.
- ‘ಮಾತ್ರೆ ಸುರಕ್ಷಿತ; ಭಯ ಅನಗತ್ಯ’
‘1-2 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೋಲ್ ಅರ್ಧ ಮಾತ್ರೆ ಮತ್ತು 2-3 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಜೋಲ್ ಒಂದು ಪೂರ್ಣ ಮಾತ್ರೆ ಪುಡಿಮಾಡಿ ನೀರಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ. 3-19 ವರ್ಷ ವಯಸ್ಸಿನ ಮಕ್ಕಳು ಮಾತ್ರೆಯನ್ನು ಸರಿಯಾಗಿ ಅಗಿದು ನುಂಗಿದಲ್ಲಿ ಅದರ ಪರಿಣಾಮಕತೆ ಗಮನಾರ್ಹ ಕಡಿಮೆಯಾಗುತ್ತದೆ. ಅಲ್ಬೆಂಡಜೋಲ್ ಮಾತ್ರೆ ಸುರಕ್ಷಿತವಾಗಿದೆ. ಯಾವುದೇ ಭಯ ಆತಂಕವಿಲ್ಲದೆ ಜಂತುಹುಳು ನಿವಾರಣೆಗಾಗಿ ಈ ಮಾತ್ರೆ ಸೇವಿಸಬೇಕು’ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.